ಸಿಂಧೂ ಸಂಸ್ಕೃತಿ ನಾಗರಿಕತೆಯಲ್ಲಿದೆ ಯೋಗಶಾಸ್ತ್ರದ ವಿಕಾಸ ಗತಿಗಳ ಮೂಲ

sindhu
Published on
ಭಾರತವರ್ಷದ ಉದಯದೊಂದಿಗೆ ಯೋಗಶಾಸ್ತ್ರವೂ ಬೆಳೆದುಬಂದಿದೆ. ಭಾರತದ ಸಭ್ಯತೆಯಷ್ಟೇ ಯೋಗವಿದ್ಯೆಯೂ ಹಳೆಯದು. ಭಾರತೀಯ ಪ್ರಾಚಿನ ಸಂಸ್ಕ್ರತಿಯ ಇತಿಹಾಸದ ಹೆಜ್ಜೆಗಳು ಸಿಂಧುನದಿ ಕಣಿವೆಯ ನಾಗರಿಕತೆಯ ವಿಕಾಸದ ಮಹಾಪಥದಲ್ಲಿ ಬಹುಸ್ಪಷ್ಟವಾಗಿ ಮೂಡಿವೆ. ಭಾರತೀಯ ನಾಗರಿಕತೆಯ ವಿವಿಧ ಮುಖಗಳಲ್ಲಿ ಯೋಗದರ್ಶನದ ಬೆಳವಣಿಗೆ ಹಂತ-ಹಂತವಾಗಿ ರೂಪುಗೊಂಡಿರುವುದನ್ನು ಪ್ರಾಚಿನ ಐತಿಹಾಸಿಕ ಅವಶೇಷಗಳಿಂದ ಗುರುತಿಸಬಹುದಾಗಿದೆ. ಸಂಸ್ಕೃತಿ ರಾಷ್ಟ್ರೀಯ ನಾಗರಿಕತೆಯ ಅಂತ@ಸತ್ವದ ಪ್ರತಿಕ. ಅದುವೇ ಮಾನವ ಕುಲದ ಸಭ್ಯತೆಯ ಜೀವಾಳ.

ಸಿಂಧು ನದಿ

ಸಿಂಧು ಅಖಂಡ ಭಾರತದ ನದಿಗಳಲ್ಲಿಯೇ ಪ್ರಾಚಿನತಮವೆನಿಸಿದ ಪಾವನ ಮಹಾನದಿ. ಅದರ ವಿಶಾಲವಾದ ಕಣಿವೆಯಲ್ಲಿ ಸುಮಾರು ಆರುಸಾವಿರ ವರ್ಷಗಳ ಹಿಂದೆ ನಾಗರಿಕ ಸಂಸ್ಕೃತಿಯೊಂದು ಬೆಳೆದು ಬಾಳಿತ್ತು. ಇಂದು ಈ ಸಿಂಧು ದೇಶವಿಂದು ಪಾಕಿಸ್ತಾನದಲ್ಲಿ ವಿಲೀನವಾಗಿದೆ. ಇಂದಿನ ಭವ್ಯ ಹಿಂದು ಸಂಸ್ಕೃತಿ ಗೆ ಸಿಂಧು ಕಣಿವೆಯೇ ಮಾತೃಭೂಮಿಯೆನಿಸಿದೆ.

ಸೈಂಧವ ಸಂಸ್ಕೃತಿಯ ಅವಶೇಷಗಳನ್ನು ಮೊಟ್ಟ ಮೊದಲಿಗೆ ಸಿಂಧು ಪ್ರಾಂತದ ಮೊಹಂಜೊ-ದಾರೊ ಮತ್ತು ಪಂಜಾಬದ ಹರಪ್ಪ (ಹರಿಯೂಪಿ) ಪ್ರದೇಶಗಳಲ್ಲಿನ ವಿಸ್ಮಯ ಸಂಗತಿಗಳನ್ನು 1954ರಲ್ಲಿ ಪ್ರೊ. ಎಸ್​.ಆರ್​. ರಾವ್​ ಅವರ ಉತ್ಸಾಹಿ ಪುರಾತತ್ವಜ್ಞರ ತಂಡದ ವಿಶೇಷ ಸಂಶೋಧನೆಗಳು ಬೆಳಕಿಗೆ ತಂದವು. ಆ ಮೂಲಕ ಸಾವಿರಾರು ವರ್ಷಗಳಿಂದ ಭೂಗತವಾಗಿದ್ದ ಪ್ರಾಚಿನ ಭಾರತೀಯ ಸಾಂಸತಿಕ ಭಂಡಾರವೊಂದು ವಿಶ್ವದ ಕಣ್ಣು ತೆರೆಸಿತು. ಸರ್​ ಜಾನ್​ ಮಾರ್ಷಲ್​ ಮತ್ತು ಡಾ. ಮ್ಯಾಕ್​ ಮೊದಲಾದ ಪಾಶ್ಚಾತ್ಯ ಸಂಶೋಧಕರು ಈ ದಿಶೆಯಲ್ಲಿ ಮಾಡಿರುವ ಕಾರ್ಯ ಅದ್ಭುತ-ಸ್ಮರಣೀಯ.

ಯೋಗ ಮುದ್ರೆಯ ಶಿಲ್ಪಪ್ರತಿಕ

ಮೊಹಂಜೊ-ದಾರೋದಲ್ಲಿಯ ಉತ್ಖನನದ ಈ ಅವಶೇಷಗಳಲ್ಲಿ ಮಾರ್ಷಲ್​ ಅವರಿಗೆ ದೊರೆತ ಮುದ್ರಿಕೆಯೊಂದರಲ್ಲಿ ಧ್ಯಾನಸ್ಥ ಮೂರ್ತಿಯೊಂದು ಬಹಳ ವಿಶಿಷ್ಟವಾದುದು. ಅದರಲ್ಲಿ ಯೋಗಿಯೊಬ್ಬ ನಿಮೀಲಿತ ನೇತ್ರನಾಗಿ, ತ್ರಿಮುಖನಾಗಿ ಕೂರ್ಮಾಸನದ ಭಂಗಿಯಲ್ಲಿ ಆಸಂದಿಯ ಮೇಲೆ ಮಂಡಿಸಿರುವನು. ಎರಡು ಶೃಂಗಗಳ ಕಿರೀಟ ಉತ್ತುಂಗವಾಗಿದೆ. ಊರ್ಧ್ವರೇತ ಮುದ್ರೆ ಮಹಾವೈರಾಗ್ಯದ ಇಂದ್ರಿಯ ಜಯದ ದ್ಯೋತಕವಾಗಿದೆ.

ಈ ಯೋಗಿಯ ಬಲಗಡೆ ಆನೆ-ಹುಲಿಗಳು ಎಡಗಡೆ ಕಾಡುಕೋಣ-- ಖಡ್ಗಮೃಗಗಳು, ಪೀಠದ ಕೆಳಗಡೆ ಚಿಗರೆಗಳ ಪ್ರತಿಕೃತಿಗಳಿವೆ. ಸಂಶೋಧಕ ಸರ್​ ಮಾರ್ಷಲ್​ ಈ ಮೂರ್ತಿಯನ್ನು ಪಶುಪತಿ ಶಿವನದೆಂದು ಸಂಕೇತಿಸಿರುವರು. ಎಲಿೆಂಟಾ ಗುಹಾಂತರ ದೇವಾಲಯದಲ್ಲಿರುವ "ತ್ರಿಮೂರ್ತಿ' ಪ್ರತಿಮೆ ಭಾರತೀಯ ಶಿಲ್ಪಕಲೆಯ ಕೃತಿಗಳಲ್ಲಿಯೇ ಅತ್ಯುತ್ತಮವಾದುದು. ಅಸಂಪ್ರಜ್ಞಾತ ಸಮಾಧಿಯ ಭಂಗಿಯಲ್ಲಿ ಮಹೇಶ್ವರನು ಅವಿಚಲ ಧ್ಯಾನಾವಸ್ಥಿತ ಚಿತ್ತನಾಗಿ ಮಹಾಯೋಗಿಯ ಗಂಭೀರ ಮುದ್ರೆಯಲ್ಲಿ ರಾರಾಜಿಸಿರುವನು.

ವಾಮದೇವ ಮೂರ್ತಿ

ಬಲಗಡೆಯ ಸುಂದರಾಕೃತಿ ವಾಮದೇವ ಮೂರ್ತಿಯದು. ಮಧ್ಯದ ಪ್ರಶಾಂತ-ಪ್ರಸನ್ನಮೂರ್ತಿ ತತ್​ಪುರುಷನದು. ಎಲಿಫಂಟಾ ಗುಹೆಯ ಅಂಧಕಾಸುರ ಮೂರ್ತಿ ವೈಶಿಷ್ಟ್ಯ ಪೂರ್ಣವಾಗಿದೆ. ಅದರ ಪಾರ್ಶ್ವದಲ್ಲಿ ಯೋಗೀಶ್ವರಿ ಕಾಳಿ ಮತ್ತು ಪದ್ಮಾಸನಸ್ಥ ಯೋಗಿಣಿಯರ ಕಲ್ಪನೆಗೆ ಸೈಂಧವ ಸಂಸ್ಕೃತಿ ಯೇ ಮೂಲವೆನ್ನುವಂತಿದೆ.

ಸಿಂಧೂ ಕಣಿವೆಯಲ್ಲಿಯ ಬಹುಸಂಖ್ಯೆಯ ಕಲ್ಲಿನ ಹಾಗೂ ಸುಟ್ಟ ಮಣ್ಣಿನ ಶಿಲ್ಪಗಳು ಮತ್ತು ಸಿಂಧೂ ಮುದ್ರೆಗಳ ಮೇಲೆ ಕಾಣಸಿಗುವ ಭಂಗಿಗಳು ವಿವಿಧ ಯೋಗಾಸನಗಳನ್ನು ಸೂಚಿಸುತ್ತವೆಂದು ಒಪ್ಪಬೇಕಾಗಿದೆ. ಇಲ್ಲಿ ದೊರೆತ ಶಿಲ್ಪಗಳು ಹಾಲಾಸನ, ದ್ವಿಪಾದ ಪವನ ಮುಕ್ತಾಸನ, ವಜ್ರಾಸನ, ಮರಿಚ್ಯಾಸನ, ದಂಡಾಸನ ವೀರಾಸನ ಮುಂತಾದವನ್ನು ಕಾಣಬಹುದು. ಈ ಮೂಲಕ ಅವರು ಯೋಗಾಭ್ಯಾಸ ಮಾಡಿ, ಶಾರೀರಿಕ ಮಾನಸಿಕ ಹಾಗೂ ಆಧ್ಯಾತ್ಮಿಕ ಶಾಸ್ತ್ರವನ್ನು ಉನ್ನತ ಮಟ್ಟಕ್ಕೇರಿಸಿದ್ದರು. ಅವರ ದೇವತೆಗಳನ್ನು ಕೂಡ ಧ್ಯಾನ ಮುದ್ರೆಯಲ್ಲಿ ಚಿತ್ರಿಸಿದ್ದಾರೆ. ಸಿಂಧೂನಾಗರಿಕತೆಯ ಕೊಡುಗೆಗಳಲ್ಲಿ ಅತ್ಯುತ್ತಮವಾದುದು ಯೋಗಶಾಸ್ತ್ರವೇ ಸರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net