

ಇದೀಗ ಶ್ರೀ ವಸಿಷ್ಠರು ಜೀವಗಳ ಆವಿರ್ಭಾವವನ್ನು ಹೇಳುತ್ತಿದ್ದಾರೆ. ಜೀವ ಅನಾದಿಯಾದ್ದರಿಂದ ನಿಜಾರ್ಥದಲ್ಲಿ ಅವನಿಗೆ ಉತ್ಪತ್ತಿ ಇಲ್ಲ. ಹಿಂದಿನ ಪ್ರಳಯಕಾಲದಲ್ಲಿ ಅವನು ಮಾಯೆಯಿಂದ ಕೂಡಿದ ಪರಮಾತ್ಮನಲ್ಲಿ ಸೇರಿಕೊಂಡಿದ್ದನು. ಈಗ ಅಲ್ಲಿಂದಲೇ ಹೊರಬರುತ್ತಾನೆ. ಚಿತ್ತ, ಅಹಂಕಾರ, ಬುದ್ಧಿ, ಮನಸ್ಸುಗಳಿಂದ ಕೂಡಿದ ಅಂತಃಕರಣವೇ ಜೀವಚೈತನ್ಯದ ಮುಖ್ಯ ಉಪಾಧಿ.
ಹಾಗೆಂದ ಮಾತ್ರಕ್ಕೆ ದೀರ್ಘವಾದ ಸಮಯವೇನೂ ಹಿಡಿಯುವುದಿಲ್ಲ. ನಿದ್ರೆಯಿಂದ ಎಚ್ಚರಗೊಳ್ಳುವಾಗ ಇದೇ ಕ್ರಮದಲ್ಲಿ ಅಂತಃಕರಣದ ವಿಭಾಗಗಳು ಉದಯಿಸುವುದನ್ನು ಗಮನಿಸಬಹುದು. ಮೊದಲು ಬಾಹ್ಯಪ್ರಜ್ಞೆ ಬರುತ್ತದೆ. ಅದುವೇ ಚಿತ್ತ. ಅನಂತರ ನಾನೆಲ್ಲಿದ್ದೇನೆ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಈ ಪ್ರಶ್ನೆಯಲ್ಲಿರುವ ನಾನು ಎಂಬ ಭಾವವೇ ಅಹಂಕಾರ. ಎಲ್ಲಿದ್ದೇನೆ ಎಂಬ ಪ್ರಶ್ನೆಯ ಭಾಗವೇ ಬುದ್ಧಿ.
ಆಮೇಲೆ ಮನಸ್ಸಿನ ವಾಸನೆಗಳ ಮೂಲದಿಂದ ಹಿಂದಿನ ದಿನ ನಾನು ಎಲ್ಲಿ ಮಲಗಿದ್ದೇನೆಂಬುದು ಜ್ಞಾಪಕಕ್ಕೆ ಬರುತ್ತದೆ. ವಾಸನೆಗಳ ಜಾಗರೂಕ ಸ್ಥಿತಿಯೇ ಮನಸ್ಸು. ಈ ನಾಲ್ಕು ಹಂತಗಳು ಅತ್ಯಂತ ಕಡಿಮೆ ಸಮಯದಲ್ಲೇ ಆಗಿಹೋಗುತ್ತವೆ. ಪರಮಾತ್ಮನಿಂದ ಜೀವದ ಸೃಷ್ಟಿ ಆಗುವಾಗಲೂ ಇದೇ ರೀತಿ ಕೆಲವೇ ಸಮಯದಲ್ಲಿ ಈ ನಾಲ್ಕು ವಿಭಾಗಗಳು ಕ್ರಮೇಣ ಆವಿರ್ಭವಿಸುತ್ತವೆ. ಈ ಅಂಶಗಳೊಂದಿಗೆ ವಸಿಷ್ಠರ ಮಾತು ಮುಂದುವರಿಯುತ್ತದೆ. ಅಂತಃಕರಣ ಎಂಬ ಸೂಕ್ಷ್ಮಶರೀರವೇ ತನ್ಮಾತ್ರೆಗಳ ಜತೆ ಸೇರಿ ಸ್ಥೂಲಶರೀರವನ್ನು ಸೃಷ್ಟಿಸುತ್ತದೆ ಎಂಬ ಸಂಗತಿಯನ್ನು ವಸಿಷ್ಠರು ಈಗ ಹೇಳುತ್ತಿದ್ದಾರೆ.
‘ಶ್ರೀರಾಮ! ಹೀಗೆ ಅಂತಃಕರಣ ಉತ್ಪತ್ತಿಯಾದ ನಂತರ, ಅದರಿಂದಲೇ ಸ್ಥೂಲಶರೀರವು ಹುಟ್ಟಿಕೊಳ್ಳುತ್ತದೆ. (ಸೂಕ್ಷ್ಮಶರೀರದ ವಿಕಾಸವೇ ಸ್ಥೂಲ ಶರೀರ.) ಅಂತಃಕರಣವೇ ತಾನು ಸ್ಥೂಲಶರೀರವಾಗಬೇಕೆಂಬ ಭಾವವನ್ನು ತನ್ನಲ್ಲಿ ತಂದುಕೊಳ್ಳುತ್ತದೆ. ಆ ಅಂತಃಕರಣದ ಜೊತೆಗೆ ಶಬ್ದ, ಸ್ಪರ್ಶ, ರೂಪ, ರಸ, ಗಂಧ - ತನ್ಮಾತ್ರೆಗಳು (ಆಕಾಶ, ವಾಯು, ತೇಜಸ್ಸು, ಪೃಥ್ವಿಗಳ ತನ್ಮಾತ್ರೆಗಳು) ಸೇರಿ ಸ್ಥೂಲಶರೀರದ ಚಿಂತನೆ ಆಗುತ್ತದೆ.
(ಸ್ಥೂಲಶರೀರ ಎಂದರೆ ಪಂಚೀಕರಣ ಪ್ರಕ್ರಿಯೆಗೊಳಪಟ್ಟ ಮಹಾಭೂತಗಳಿಂದ ಉಂಟಾದ ಶರೀರ. ‘ಪಂಚೀಕರಣ’ ಎಂದರೆ ‘ಐದರ ಸಮೂಹವಾಗಿ ನಿರ್ವಣಗೊಳ್ಳುವಿಕೆ’ ಎಂದರ್ಥ. ಹಿಂದೆ ಒಂದೊಂದೇ ಮಹಾಭೂತಗಳು ಬೇರೆ ಬೇರೆಯಾಗಿ ಉತ್ಪತ್ತಿಯಾಗಿವೆ. ನಂತರ ಆ ಐದು ಮಹಾಭೂತಗಳು ಮಿಶ್ರಣಗೊಂಡಾಗಲೇ ಅವು ಇಂದ್ರಿಯಗಳಿಗೆ ಗೋಚರಿಸುತ್ತವೆ. ಈಗ ಗೋಚರಿಸುತ್ತಿರುವ ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶಗಳೆಲ್ಲ ಪಂಚಮಹಾಭೂತಗಳ ಮಿಶ್ರಣವೇ ಆಗಿದೆ. ಅಂದರೆ ನಮಗೆ ಗೋಚರವಾಗುತ್ತಿರುವ ಒಂದೊಂದು ಮಹಾಭೂತಗಳಲ್ಲಿಯೂ ಐದೂ ಮಹಾಭೂತಗಳಿವೆ. ನೀರಿನಲ್ಲಿ ಐದು ಮಹಾಭೂತಗಳೂ ಇವೆ.
ಆದರೆ ಜಲ ಎಂಬ ಮಹಾಭೂತದ ಭಾಗ ಹೆಚ್ಚಿದೆ. ಉಳಿದ ನಾಲ್ಕು ಮಹಾಭೂತಗಳ ಭಾಗಗಳು ಕಡಿಮೆ. ಆದ್ದರಿಂದ ನೀರು ಭೂಮಿಯಂತೆ ಗಟ್ಟಿಯಾಗಿರುವ, ಬೆಂಕಿಯಂತೆ ಬಿಸಿಯಾಗಿರುವ, ಗಾಳಿಯಂತೆ ಆಕಾಶದಲ್ಲಿ ಚಲಿಸುವ, ಆಕಾಶದಂತೆ ತನ್ನೊಳಗೆ ಎಲ್ಲದಕ್ಕೂ ಅವಕಾಶ ಮಾಡಿಕೊಡುತ್ತಿರುವ ಅನುಭವವೂ ಆಗುವುದಿಲ್ಲ. ಆದರೆ ಸೂಕ್ಷ್ಮವಾಗಿ ಪರೀಕ್ಷಿಸಿದರೆ ಈ ನಾಲ್ಕೂ ಗುಣಗಳು ಅದರಲ್ಲಿ ಸೂಕ್ಷ್ಮವಾಗಿರುವುದು ಗೊತ್ತಾಗುತ್ತದೆ.
ವೇದಾಂತಿಗಳು ಸುಲಭ ಲೆಕ್ಕಾಚಾರದಲ್ಲಿ ಇದನ್ನು ಹೀಗೆ ಹೇಳುತ್ತಾರೆ - ನೀರಿನಲ್ಲಿ ಅರ್ಧದಷ್ಟು ಜಲವೆಂಬ ಮಹಾಭೂತದ ಭಾಗ, ಉಳಿದ ಅರ್ಧದಲ್ಲಿ ಉಳಿದ ನಾಲ್ಕು ಮಹಾಭೂತಗಳಿರುತ್ತವೆ. ಹೀಗೆ ನಮಗೆ ಗೋಚರವಾಗುವ ಎಲ್ಲ ಮಹಾಭೂತಗಳೂ ಐದು ಮಹಾಭೂತಗಳ ಮಿಶ್ರಣವಾಗಿವೆ. ಎಲ್ಲ ಭೌತಿಕ ವಸ್ತುಗಳೂ ಹೀಗೆ ಐದು ಮಹಾಭೂತಗಳ ಮಿಶ್ರಣವೇ ಆಗಿವೆ.) ಹೀಗೆ ಸ್ಥೂಲರೂಪ ಪಡೆದ ಸೂಕ್ಷ್ಮ ಅಂತಃಕರಣವೇ ಈ ಸ್ಥೂಲಶರೀರದ ಮೂಲಕ ಜಗತ್ತೆಂಬ ಮಹಾವೃಕ್ಷವನ್ನು ನೋಡುತ್ತದೆ. ಹೀಗೆ ಅಂತಃಕರಣದ ಉತ್ಪತ್ತಿಯಾಗಲು ದೀರ್ಘಕಾಲ ಬೇಕಾಗುವುದಿಲ್ಲ. ಸ್ವಪ್ನದಲ್ಲಿ ಗಂಧರ್ವನಗರದ ಸೃಷ್ಟಿಯಾಗಲು ಒಂದೇ ಕ್ಷಣ ಸಾಕಾಗುತ್ತದೆ.
ಇಚ್ಛೆಪಟ್ಟು, ದೀರ್ಘಕಾಲದ ದುಡಿಮೆಯಿಂದ ನಗರವನ್ನು ನಿರ್ವಿುಸಿದಂತಲ್ಲ. ಇಚ್ಛೆ ಇಲ್ಲದೆ, ಪ್ರಯತ್ನವಿಲ್ಲದೆ ಗಂಧರ್ವನಗರದ ಸೃಷ್ಟಿಯಾಗುತ್ತದೆ. ಹಾಗೆಯೇ ಸೂಕ್ಷ್ಮ-ಸ್ಥೂಲಶರೀರಗಳ ಸೃಷ್ಟಿಯಾಗಲು ದೀರ್ಘಕಾಲ ಬೇಕಿಲ್ಲ. ಚಿತ್ತ, ಅಹಂಕಾರ, ಬುದ್ಧಿ, ಮನಸ್ಸು, ಸ್ಥೂಲಶರೀರ ಈ ಕ್ರಮದಲ್ಲಿಯೇ ಸೃಷ್ಟಿಯಾಗುತ್ತದೆ. ಹೀಗೆ ಜೀವಗಳು ಮತ್ತೆ ಮತ್ತೆ ಶರೀರವನ್ನು ಧರಿಸುತ್ತ, ಮತ್ತೆ ಮತ್ತೆ ಶರೀರವನ್ನು ಕಳೆದುಕೊಳ್ಳುತ್ತ ನಾಶವಾಗುತ್ತಿರುತ್ತವೆ.
‘ಅವ್ಯಾಕೃತ’ ಎಂಬ ಮಹಾಕಾಶದಲ್ಲಿ (ಪರಮಾತ್ಮನ ಪ್ರಕೃತಿ ಎನಿಸಿರುವ ಮಾಯೆಯೇ ಈ ಮಹಾಕಾಶ.) ಈ ಉತ್ಪತ್ತಿ-ಲಯಗಳು ಮತ್ತೆ ಮತ್ತೆ ನಡೆಯುತ್ತಿರುತ್ತವೆ. ಅವ್ಯಾಕೃತ ಮಹಾಕಾಶವೆಂಬ ಮಹಾರಣ್ಯದಲ್ಲಿ ಜೀವಗಳೆಂಬ ಗಿಡಗಳು ಮತ್ತೆ ಮತ್ತೆ ಹುಟ್ಟುತ್ತ, ಮರಣ ಹೊಂದುತ್ತಿರುತ್ತವೆ. ಈ ಜಗತ್ತೆಂಬ ಕಪಿತ್ಥವೃಕ್ಷದ ಅರಣ್ಯಕ್ಕೆ ಜೀವಿಗಳು ಹೀಗೆ ಹುಟ್ಟುತ್ತ-ಸಾಯುತ್ತ ಇರುವಿಕೆಯೇ ಬೀಜ. ಇದು ಬಿತ್ತದೆಯೇ, ಮಣ್ಣು, ನೀರು, ಗಾಳಿಗಳಿಲ್ಲದೆಯೇ ಬೆಳೆಯುವ ಬೀಜ.’