ಜಿಲ್ಲಾಸ್ಪತ್ರೆಗಳಲ್ಲಿ ಯೋಗ ಮಂದಿರ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಣೆ

Untitled design (1)
Published on

ಬೆಂಗಳೂರು: ಯೋಗವನ್ನು ಹೆಚ್ಚೆಚ್ಚು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಯೋಗ ಮಂದಿರ’ಗಳನ್ನು ಸ್ಥಾಪಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಶನಿವಾರ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವ ಮಟ್ಟದಲ್ಲಿ ಮನ್ನಣೆ ಪಡೆದಿರುವ ಯೋಗವನ್ನು ನಾವು ಹೆಚ್ಚಿನ ಜನರಿಗೆ ಪರಿಚಯಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ‘ಯೋಗ ಮಂದಿರ’ಗಳನ್ನ ಪ್ರಾರಂಭಿಸುವುದಾಗಿ ಹೇಳಿದರು.

ಮೈಸೂರು ಜಿಲ್ಲೆಯನ್ನು ಯೋಗ ಜಿಲ್ಲೆಯನ್ನಾಗಿ ನಿರ್ವಿುಸುವತ್ತ ಈಗಾಗಲೇ ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೈಸೂರು ಜಿಲ್ಲೆಯ ಪ್ರತಿ ಮನೆಗಳಲ್ಲಿ ಒಬ್ಬರಾದರೂ ಯೋಗಭ್ಯಾಸ ನಡೆಸುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲು ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಪರಂಪರಾಗತವಾಗಿ ಬಂದ ಅಷ್ಟಾಂಗ ಯೋಗಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು. ರಾಜ್ಯದ 10 ಸಾವಿರ ಸ್ಥಳಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಯೋಗಭ್ಯಾಸ ಮಾಡಿದರು. 45 ನಿಮಿಷಗಳ ಯೋಗ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು. ರಾಜ್ಯದ ಹಲವೆಡೆ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ಪಾರ್ಕ್, ಯೋಗ ಧನುಷ್, ಹಸಿರು ಯೋಗ, ಯೋಗ ಮಹಾಕುಂಭ, ಯೋಗ ಸಂಯೋಗ, ಯೋಗ ಅನ್​ಪ್ಲಗ್ಸ್ನಂತಹ ಕಾರ್ಯಕ್ರಮ ಗಳನ್ನು ಆಯುಷ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿತ್ತು.

ಯೋಗಾಭ್ಯಾಸವು ನಮ್ಮನ್ನು ಅಹಿಂಸೆ, ಕರುಣೆ ಮತ್ತು ಶಾಂತಿಯ ಕಡೆಗೆ ಕೊಂಡೊಯ್ಯುತ್ತದೆ. ಯೋಗವು ಪ್ರಾಚೀನ ಭಾರತೀಯ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಇದು ಆತ್ಮ ಮತ್ತು ದೇಹ, ಆಲೋಚನೆ ಮತ್ತು ಕ್ರಿಯೆ, ಸಂಯಮ ಮತ್ತು ಪರಿಪೂರ್ಣತೆಯ ನಡುವಿನ ಸಮತೋಲನದ ಮಾಧ್ಯಮವಾಗಿದೆ. ಇದು ಸಾವಿರಾರು ವರ್ಷಗಳಿಂದ ಮಾನವ ಆರೋಗ್ಯ ಮತ್ತು ಅದರ ಕಲ್ಯಾಣಕ್ಕಾಗಿ ಸಮರ್ಪಿತವಾಗಿರುವ ಭಾರತದ ಸಾಂಸ್ಕೃತಿಕ ಸಂಪ್ರದಾಯದ ಸಂಕೇತವಾಗಿದೆ.

| ಥಾವರ್​ಚಂದ್ ಗೆಹಲೋತ್ ರಾಜ್ಯಪಾಲರು

‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಘೊಷವಾಕ್ಯ ದೊಂದಿಗೆ ಈ ಬಾರಿಯ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ವಿಧಾನಸೌಧದ ಪ್ರಧಾನ ಮೆಟ್ಟಿಲುಗಳ ಎದುರು 5 ಸಾವಿರಕ್ಕೂ ಹೆಚ್ಚು ಜನರು ಯೋಗಾಭ್ಯಾಸ ನಡೆಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಭಾಪತಿ ಬಸವರಾಜ್ ಹೊರಟ್ಟಿ ಮತ್ತಿತರರೊಂದಿಗೆ ಯೋಗಾಭ್ಯಾಸ ನಡೆಸಿದರು. ನಟರಾದ ಅನಿರುದ್ಧ, ಕಿಶನ್, ನಟಿ ಸಾನಿಯಾ ಅಯ್ಯರ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮತ್ತಿತರರು ಯೋಗದಲ್ಲಿ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net