

ಕಾರಣಗಳೇನು?: ಕಾಲು ಹಾಗೂ ಮಂಡಿನೋವು ಬರಲು ಹಲವು ಕಾರಣಗಳಿವೆ. ದೇಹದ ಅಧಿಕ ತೂಕದಿಂದಾಗಿ ಹೊಟ್ಟೆ ಸೊಂಟ ದಪ್ಪವಾದಾಗ ಕಾಲುಗಳಿಗೆ ಅಧಿಕ ತೂಕ ಬೀಳುತ್ತದೆ. ಮಂಡಿಗೂ ಒತ್ತಡವಾಗುತ್ತದೆ. ಕಾಲುಗಳಿಗೆ ದೇಹದ ಭಾರವನ್ನು ಹೊರಲು ಕಷ್ಟವಾಗುತ್ತದೆ. ಬೇರೆ ಬೇರೆ ಕಾರಣಗಳಿಂದ ಮಂಡಿಗೆ ಹೊಡೆತ ಬಿದ್ದಾಗ. ವಯೋಮಾನದಲ್ಲಿ ಬರುವ ಮಂಡಿ ನೋವು ಹಾಗೂ ಇತ್ಯಾದಿ ಕಾರಣಗಳು.
ಏನು ಮಾಡಬೇಕು?: ಕಾಲು ಹಾಗೂ ಮಂಡಿನೋವಿನ ಸಮಸ್ಯೆ ಇದ್ದವರು ಕೆಲವು ಆಯ್ದ ಸರಳ ಯೋಗಗಳನ್ನು, ಮುದ್ರೆಗಳನ್ನು ಮಾಡಬೇಕು. ಯೋಗದ ಮೂಲಕ ನೋವು ನಿಯಂತ್ರಣವಾಗುತ್ತದೆ. ಯೋಗದಿಂದ ಒಳಗಿನ ಅಂಗಕ್ಕೆ ವ್ಯಾಯಾಮ, ರಕ್ತ ಪರಿಚಲನೆ ಚೆನ್ನಾಗಿ ಜರುಗುತ್ತದೆ. ಯೋಗದಲ್ಲಿ, ನಿಮ್ಮ ಕಾಲುಗಳು ಅಲುಗಾಡುವವರೆಗೆ ಕೆಲವು ಹೊತ್ತು ನಿಂತಿರುವ ಶಕ್ತಿ ಮತ್ತು ಸಮತೋಲನ ಭಂಗಿಗಳನ್ನು ಹಿಡಿದಿಟ್ಟುಕೊಳ್ಳುವುದು ಅಸಾಮಾನ್ಯವೇನಲ್ಲ. ಇದು ಸ್ನಾಯುಗಳನ್ನು ಸಕ್ರಿಯಗೊಳಿಸುವುದನ್ನು ಅನುಭವಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಇದು ಅಗತ್ಯವಾದ ಮನಸ್ಸು, ದೇಹದ ಸಂಪರ್ಕವನ್ನು ಸೃಷ್ಟಿಸುತ್ತದೆ.
ಯೋಗದಲ್ಲಿ ಕಾಲು ನೋವನ್ನು ನಿಯಂತ್ರಿಸಲು ಸಹಾಯ ಮಾಡುವ ಹಲವಾರು ಆಸನಗಳಿವೆ. ಯೋಗಾಭ್ಯಾಸವು ಕಾಲುಗಳ ಸ್ನಾಯುಗಳನ್ನು ವಿಸ್ತರಿಸುತ್ತದೆ. ಮೊಣಕಾಲುಗಳು, ಕಣಕಾಲುಗಳು ಮತ್ತು ತೊಡೆಗಳ ಬಲವನ್ನು ಸುಧಾರಿಸುತ್ತದೆ. ಯೋಗದ ಮೂಲಕ ಕಾಲುಗಳಲ್ಲಿ ರಕ್ತ ಪರಿಚಲನೆ ಕೂಡ ಸುಧಾರಿಸುತ್ತದೆ. ಯೋಗದ ಮೂಲಕ ಸುಧಾರಿತ ರಕ್ತ ಪರಿಚಲನೆಯು ಕಾಲುಗಳ ವಿವಿಧ ಭಾಗಗಳಿಗೆ ತಾಜಾ ಆಮ್ಲಜನಕಯುಕ್ತ ರಕ್ತವನ್ನು ಪೂರೈಸುತ್ತದೆ. ಇದು ಸ್ನಾಯು ರಜ್ಜುಗಳು, ಅಸ್ಥಿರಜ್ಜುಗಳು, ಮೂಳೆಗಳು, ಕೀಲುಗಳು ಮತ್ತು ಕಾಲಿನ ಸ್ನಾಯುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.
ಅಧಿಕ ತೂಕದ ವ್ಯಕ್ತಿಗಳು ಕುಳಿತು ಮತ್ತು ಮಲಗಿ ಮಾಡುವ ಸರಳ ಯೋಗಾಸನಗಳನ್ನು ಅಭ್ಯಾಸ ಮಾಡಿ. ಪ್ರತಿ ನಿತ್ಯ ಯೋಗ ಮಾಡುವುದರಿಂದ ದೈನಂದಿನ ಒತ್ತಡಗಳಿಂದ ದೂರ ಉಳಿದು ದೇಹವನ್ನು ಆರೋಗ್ಯವಾಗಿಟ್ಟು ಕೊಳ್ಳಬಹುದು.
ಕುಳಿತುಕೊಂಡು ಕಾಲುಗಳನ್ನು ಅಲ್ಲಾಡಿಸುವುದು, ಮಲಗಿಕೊಂಡು ಒಂದೊಂದು ಕಾಲಲ್ಲಿ ಸೊನ್ನೆ ಬರೆಯುವುದು. ಯೋಗಾಸನಗಳಲ್ಲಿ ಉತ್ಥಿತ ಏಕಪಾದಾಸನ, ಊರ್ಧ್ವ ಪ್ರಸಾರಿತ ಪಾದಾಸನ, ಮಕರಾಸನ, ಏಕಪಾದ ಶಲಭಾಸನ, ಶವಾಸನ ಇತ್ಯಾದಿಗಳು. ಮಂಡಿ ನೋವು ಇರುವ ಅಧಿಕ ತೂಕದ ವ್ಯಕ್ತಿಗಳು ನಿಂತು ಮಾಡುವ ಯೋಗಾಸನಗಳನ್ನು ಹೆಚ್ಚು ಮಾಡುವುದು ಬೇಡ. ಸಾಧ್ಯವಾದರೆ ಗೋಡೆಗೆ ಒರಗಿ ತಾಡಾಸನ, ತ್ರಿಕೋನಾಸನ ಅಭ್ಯಾಸ ಮಾಡಬಹುದು. ನಿಂತುಕೊಂಡು ಮಾಡಬಹುದಾದ, ಮಂಡಿಗೆ ಸಹಾಯವಾಗುವ ಆಸನಗಳೆಂದರೆ ಪ್ರಮುಖವಾಗಿ ತಾಡಾಸನ, ಅರ್ಧಕಟಿ ಚಕ್ರಾಸನ, ಪರಿವೃತ್ತ ತ್ರಿಕೋನಾಸನ. ಪ್ರಸಾರಿತ ಪಾದೋತ್ಥಾಸನ, ಪಾದಹಸ್ತಾಸನ. ಅಧೋಮುಖ ಶ್ವಾನಾಸನ. ಆದರೆ ತೀವ್ರ ಮಂಡಿನೋವಿನ ಸಮಸ್ಯೆ ಇದ್ದವರು ಪದ್ಮಾಸನ, ವಜ್ರಾಸನ ಅಭ್ಯಾಸ ಮಾಡು ವುದು ಬೇಡ. ಮಂಡಿಗೆ ಒತ್ತಡವಾಗುವ ಆಸನಗಳು ಬೇಡ. ಪ್ರಾಣಾಯಾಮಗಳಲ್ಲಿ ನಾಡಿಶುದ್ಧಿ, ಉಜ್ಜಯಿ ಪ್ರಾಣಯಾಮ, ಸುಖ
ಪ್ರಾಣಾಯಾಮ ಹಾಗೂ ಕೊನೆಯಲ್ಲಿ ಸಾಮಾನ್ಯ ಉಸಿರಾಟವನ್ನು ಗಮನಿಸಿ ಲೆಕ್ಕ ಹಾಕುವ ಧ್ಯಾನ ಮಾಡಿ. ಯೋಗವನ್ನು ಅಭ್ಯಾಸ ಮಾಡುವ ಮುಂಚೆ ಗುರುಮುಖೇನ ಯೋಗದ ಬಗೆಗಿನ ಮಾಹಿತಿ, ಸಲಹೆ, ಸೂಚನೆ ಪಡೆದುಕೊಂಡು ಕಲಿತು ಪ್ರಾರಂಬಿಸಿ.
ಮುದ್ರೆಗಳು: ಮುದ್ರೆಗಳಲ್ಲಿ ಪ್ರಮುಖವಾಗಿ ಪ್ರಾಣಮುದ್ರೆ, ವಾಯುಶೂನ್ಯ ಮುದ್ರೆ, ಸಂಧಿಮುದ್ರೆ, ವರುಣ ಮುದ್ರೆಗಳು ಕಾಲು ಹಾಗೂ ಮಂಡಿನೋವಿನ ನಿಯಂತ್ರಣಕ್ಕೆ ಸಹಾಯವಾಗುತ್ತವೆ.