

ಪತಂಜಲಿ ಮಹರ್ಷಿಗಳು ಯೋಗಸೂತ್ರದಲ್ಲಿ ‘ಯೋಗಃ ಚಿತ್ತ ವೃತ್ತಿ ನಿರೋಧಃ’ ಎಂದಿದ್ದಾರೆ. ಅಂದರೆ, ಯೋಗವೆಂದರೆ ಚಿತ್ತವನ್ನು ಎಲ್ಲಾ ಪಲ್ಲಟಗಳಿಂದ ದೂರವಾಗಿಸಿ ಶಾಂತಚಿತ್ತದಲ್ಲಿರುವಂತೆ ಮಾಡುವುದು ಎಂದರ್ಥ.
ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಯೋಗವನ್ನು ಸರಳವಾಗಿ ಬೋಧಿಸಿದ್ದು ಹೀಗೆ: ‘ಕೆಲಕೆಲವರು ಯೋಗಿಯ ಲಕ್ಷಣಗಳಿಂದ ಜನ್ಮತಳೆಯುತ್ತಾರೆ; ಆದರೆ ಅವರೂ ಎಚ್ಚರಿಕೆಯಿಂದಿ
ರಬೇಕು. ಕಾಮಕಾಂಚನವೇ ಯೋಗದ ಪ್ರತಿಬಂಧಕ. ಅದು ಅವರನ್ನು ಪ್ರಾಪಂಚಿಕತೆಗೆ ಸೆಳೆದುಬಿಡುತ್ತದೆ. ಬಹುಶಃ ಭೋಗಾಸಕ್ತಿ ಅವರಲ್ಲಿ ಸ್ವಲ್ಪ ಇದ್ದಿರಬೇಕು. ಅದು ಮುಗಿಯಿತು ಎಂದರೆ ಮತ್ತೆ ಭಗವಂತನ ಕಡೆಗೆ ಹೊರಡುವ ಅವರಿಗೆ ಹಿಂದಿನ ಯೋಗಾವಸ್ಥೆ ಬಂದು ಬಿಡುತ್ತದೆ. ಯೋಗ ಎಂದರೆ ಜೀವಾತ್ಮ ಪರಮಾತ್ಮನಲ್ಲಿ ಸೇರುವುದು, ಅಣು ಬ್ರಹ್ಮಾಂಡವನ್ನು ಹೊಂದುವುದು ಎಂದರ್ಥ.’
ಮನಸ್ಸು ಸ್ಥಿರವಾಗದ ಹೊರತು ಯೋಗಾವಸ್ಥೆಗೆ ಬಾರದು. ಪ್ರಾಪಂಚಿಕದ ಗಾಳಿ ಮನಸ್ಸೆಂಬ ದೀಪವನ್ನು ಸರ್ವದಾ ಅಲುಗಾಡಿಸುತ್ತಿರುತ್ತದೆ. ಆ ದೀಪ ಸಂಪೂರ್ಣವಾಗಿ ಸ್ಥಿರವಾಗಿ ಇತ್ತು ಎಂದರೆ ಆಗ ಅದಕ್ಕೆ ಯೋಗಾವಸ್ಥೆ ಬಂದು ಬಿಡುತ್ತದೆ. ಶರೀರದಲ್ಲಿ ಏನು ತಾನೆ ಇದೆ? ರಕ್ತ, ಮಾಂಸ, ಕೊಬ್ಬು, ಕರುಳು, ಹೊಟ್ಟೆ, ಮಲಮೂತ್ರ ಇತ್ಯಾದಿ. ಇಂಥ ಶರೀರದ ಮೇಲೆ ಯಾಕಿಷ್ಟು ವ್ಯಾಮೋಹ, ಪ್ರೀತಿ ಇಡಬೇಕು? ಎನ್ನುತ್ತಾರೆ ರಾಮಕೃಷ್ಣರು. ಪರಮಹಂಸರ ಪ್ರತ್ಯಕ್ಷ ಶಿಷ್ಯರಲ್ಲಿ ಅನೇಕರು ಯೋಗ ಮಾರ್ಗದಲ್ಲಿ ಸಾಧನೆಗೈದು ಮಹಾನ್ ಯೋಗಿಗಳಾಗಿ ಜೀವನ್ಮುಕ್ತಿಯನ್ನು ಪಡೆದಿದ್ದಾರೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ‘...ತಸ್ಮಾತ್ ಯೋಗೀ ಭವಾರ್ಜುನ’ - ಯೋಗಿಯು ತಪಸ್ವಿಗಳಿಗಿಂತ, ಜ್ಞಾನಿಗಳಿಗಿಂತ, ಕರ್ವಿುಗಳಿಗಿಂತ ಹೆಚ್ಚಿನವನು. ಆದ್ದರಿಂದ ಯೋಗಿಯಾಗು ಎಂದು ಬೋಧಿಸುತ್ತಾನೆ. ಇದರ ಸಾರಾಂಶವೆಂದರೆ ನಿಜವಾದ ಅರ್ಥದಲ್ಲಿ ಯೋಗಿಯಾಗುವವನು ಎಲ್ಲರಿಗಿಂತಲೂ ಉನ್ನತ ಸ್ಥಾನದಲ್ಲಿ ಗೋಚರಿಸುತ್ತಾನೆ ಎಂದು. ಇಲ್ಲಿ ಅತ್ಯಂತ ಮುಖ್ಯವಾದ ಮತ್ತು ಸಾಮಾನ್ಯ ಜನರು ಮರೆತಿರುವ ಅಂಶವೆಂದರೆ ಯೋಗಮಾರ್ಗದಲ್ಲಿ ಪಥಿಸುವ ಸಾಧಕರ ಮೂಲ ಗುರಿ ಜೀವನ್ಮುಕ್ತಿ, ಆತ್ಮಸಾಕ್ಷಾತ್ಕಾರ ಪಡೆಯುವುದು ಎಂಬುದು. ಆದರೆ ಆಧುನಿಕ ಯುಗದಲ್ಲಿ ಯೋಗ ಎಂದರೆ ದೇಹವನ್ನು ಪೋಷಿಸುವುದು, ನಾನಾ ಭಂಗಿಗಳಲ್ಲಿ ಪ್ರದರ್ಶನ ಮಾಡುವುದು ಇತ್ಯಾದಿ ಪ್ರಚಲಿತವಾಗಿದೆಯೇ ವಿನಃ ಯೋಗದ ಮೂಲ ಗುರಿಯನ್ನೇ ಮರೆತಂತಿದೆ. ಪತಂಜಲಿ ಮಹರ್ಷಿಗಳ ಯೋಗ ಸೂತ್ರವನ್ನು ಆಳವಾಗಿ ಅಧ್ಯಯನ ಮಾಡಿದಾಗಲೇ ನಿಜವಾದ ಅರ್ಥದಲ್ಲಿ ಯೋಗವನ್ನು ಅರಿಯುವಂತಾಗುತ್ತದೆ.
ರಾಮಕೃಷ್ಣರು ಯೋಗದ ನಾನಾ ರೀತಿಯ ಉದಾಹರಣೆ ಗಳನ್ನು ನೀಡುತ್ತಾರೆ. ಅವುಗಳಲ್ಲೊಂದು ಹೀಗಿದೆ: ತೂಗುವ ಕಡ್ಡಿ ಯನ್ನು ತೆಗೆದುಕೋ, ಒಂದು ತಟ್ಟೆಗೆ ಭಾರ ಹಾಕಿದರೆ ಕೆಳಗಿನ ಮತ್ತು ಮೇಲಿನ ಮುಳ್ಳು ಒಂದು ಮುಖವಾಗಿರುವುದಿಲ್ಲ. ಕೆಳಗಿನ ಮುಳ್ಳು ಮನಸ್ಸು, ಮೇಲಿನ ಮುಳ್ಳೇ ಭಗವಂತ. ಎರಡೂ ಮುಳ್ಳುಗಳು ಒಂದೇ ಮುಖವಾಗುವುದಕ್ಕೆ ಯೋಗ ಎಂದು ಹೇಳುವುದು. ಜನಸಾಮಾನ್ಯರು ಕಾಣುವ ತಕ್ಕಡಿಯ ಮುಳ್ಳುಗಳನ್ನು ವಿವರಿಸುತ್ತಾ ಯೋಗಿಯ ಚಿತ್ತವನ್ನು ವಿವರಿಸುತ್ತಾರೆ ಪರಮಹಂಸರು. ಚಿತ್ತವೆಂದರೆ ಮನಸ್ಸು, ಅದು ಮೂಲ ಗುರಿಯಾದ ಆತ್ಮ, ಭಗವದ್ ಶಕ್ತಿ ಎನ್ನುವ ಗುರಿಯತ್ತ ನಿಲ್ಲಬೇಕಾದರೆ ತಕ್ಕಡಿಯ ಎರಡೂ ಮುಳ್ಳುಗಳು ಏಕಪ್ರಕಾರವಾಗಿ ಸಂಧಿಸಬೇಕು. ಈ ಸಂಧಿಸುವಿಕೆಯೇ ಪರಮಹಂಸರ ಪ್ರಕಾರ ಯೋಗ.
ಯೋಗದ ಬಗ್ಗೆ ಪರಮಹಂಸರು ಶಿಷ್ಯರಿಗೆ ವಿವರಿಸಿದ ಈ ರೀತಿಯೂ ಸರಳ: ‘ಯೋಗಿಗಳ ಮನಸ್ಸು ಸರ್ವದಾ ಭಗವಂತನ ಅಡಿದಾವರೆಯಲ್ಲಿ ನೆಲಸಿರುತ್ತದೆ, ಮುಖವನ್ನು ವೀಕ್ಷಿಸಿದರೇ ಅರಿವಾಗುತ್ತದೆ. ಈ ವ್ಯಕ್ತಿ ಯೋಗಿ ಎಂದು. ಕಣ್ಣುಗಳೇನೋ ತೆರೆದಿರುತ್ತದೆ, ದೃಷ್ಟಿ ಮಾತ್ರ ಬಹಿರ್ಜಗತ್ತಿನ ಕಡೆಗೇ ಇರುವುದಿಲ್ಲ. ಹೇಗೆ ಹಕ್ಕಿ ಕಾವಿಗೆ ಕುಳಿತಿರುವಾಗ ಅದರ ಇಡೀ ಮನಸ್ಸು ತನ್ನ ಮೊಟ್ಟೆಯ ಮೇಲೆ ನೆಲೆಸಿ ಅದರ ಕಣ್ಣುಗಳುಮಾತ್ರ ಸುಮ್ಮನೆ ಮೇಲಕ್ಕೆ ನೋಡುತ್ತಿರುವುದೋ ಹಾಗೆ ಕಾಣಿಸುತ್ತದೆ. ಇದು ನಿಜವಾದ ಯೋಗಿಯ ಸ್ಥಿತಿ. ಅದೊಂದು ದಿನ ಯೋಗದ ಮತ್ತೊಂದು ಅರ್ಥವನ್ನು ನೆರೆದ ಸಾಧಕರಿಗೆ ರಾಮಕೃಷ್ಣರು ಹೀಗೆ ವಿವರಿಸುತ್ತಾರೆ.
‘ಕಾಮ ಕಾಂಚನ ಇವೇ ಮಾಯೆ. ಇವು ಮನಸ್ಸನ್ನು ಬಿಟ್ಟು ತೊಲಗಿದವು ಎಂದರೆ ಯೋಗ ಉಂಟಾಗಿದೆ ಎಂದರ್ಥ. ಆತ್ಮ ಎಂದರೆ ಪರಮಾತ್ಮ ಸೂಜಿಗಲ್ಲು. ಜೀವಾತ್ಮ ಸೂಜಿ. ಪರಮಾತ್ಮ ಎಳೆದುಕೊಂಡರೆ ಯೋಗ. ಆದರೆ ಸೂಜಿಗೆ ಮಣ್ಣು ಮೆತ್ತಿಕೊಂಡಿದ್ದರೆ ಅದನ್ನು ತೊಳೆದರೆ ಮಾತ್ರ ಸೂಜಿಗಲ್ಲು ತಕ್ಷಣ ಸೆಳೆದುಕೊಂಡು ಬಿಡುತ್ತದೆ’. ಬಹುಶಃ ಯೋಗದ ಬಗ್ಗೆ ಇಷ್ಟು ಸರಳ ವ್ಯಾಖ್ಯಾನವನ್ನು ಬೇರಾರೂ ನೀಡಿರಲಿಲ್ಲ ಎನಿಸುತ್ತದೆ.