ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ: ಕಣಿವೆ ರಾಜ್ಯದಿಂದ ಯೋಗ ಸಂದೇಶ ಸಾರಿದ ಪ್ರಧಾನಿ ಮೋದಿ

PM Modi
Published on

ಶ್ರೀನಗರ: ಇದೇ ಮೊದಲ ಬಾರಿಗೆ ಕಣಿವೆ ರಾಜ್ಯ ಕಾಶ್ಮೀರದಲ್ಲಿ ನಡೆಯುತ್ತಿರುವ 10ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದರು.

ಶ್ರೀನಗರದ ದಾಲ್​ ಸರೋವರದ ದಡದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಗದ ಮಹತ್ವ ಮತ್ತು ಅದರ ಆರೋಗ್ಯ ಪ್ರಯೋಜನಗಳನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ಯೋಗವು ಸ್ವಯಂ ಮತ್ತು ಸಮಾಜಕ್ಕಾಗಿ ಎಂಬ ಸಂದೇಶವನ್ನು ಸಾರಿದರು.

ಯೋಗದ ಮೂಲಕ ನಾವು ಪಡೆಯುವ ಶಕ್ತಿಯನ್ನು ಶ್ರೀನಗರದಲ್ಲಿ ನಾವಿಂದು ಅನುಭವಿಸಬಹುದು. ಯೋಗ ದಿನದಂದು ದೇಶದ ಜನರಿಗೆ ಮತ್ತು ಪ್ರಪಂಚದ ಮೂಲೆ ಮೂಲೆಗಳಲ್ಲಿ ಯೋಗ ಮಾಡುವ ಜನರಿಗೆ ನಾನು ಶುಭಾಶಯಗಳನ್ನು ಸಲ್ಲಿಸುತ್ತೇನೆ. ಅಂತಾರಾಷ್ಟ್ರೀಯ ಯೋಗ ದಿನವು 10 ವರ್ಷಗಳ ಐತಿಹಾಸಿಕ ಪ್ರಯಾಣವನ್ನು ಪೂರ್ಣಗೊಳಿಸಿದೆ. 2014ರಲ್ಲಿ ನಾನು ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರಸ್ತಾಪಿಸಿದೆ. ಭಾರತದ ಈ ಪ್ರಸ್ತಾಪವನ್ನು 177 ರಾಷ್ಟ್ರಗಳು ಬೆಂಬಲಿಸಿದವು ಮತ್ತು ಇದು ಸ್ವತಃ ಒಂದು ದಾಖಲೆಯಾಗಿದೆ. ಅಂದಿನಿಂದ ಯೋಗ ದಿನ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ವರ್ಷ ಭಾರತದಲ್ಲಿ ಫ್ರಾನ್ಸ್‌ನ 101 ವರ್ಷದ ಮಹಿಳಾ ಯೋಗ ಶಿಕ್ಷಕಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಕೆ ಭಾರತಕ್ಕೆ ಬಂದಿರಲಿಲ್ಲ ಆದರೆ ಯೋಗದ ಬಗ್ಗೆ ಜಾಗೃತಿ ಮೂಡಿಸಲು ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಇಂದು ಪ್ರಪಂಚದಾದ್ಯಂತದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳಲ್ಲಿ ಯೋಗದ ಕುರಿತು ಸಂಶೋಧನೆಗಳನ್ನು ಮಾಡಲಾಗುತ್ತಿದೆ ಮತ್ತು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಲಾಗುತ್ತಿದೆ ಎಂದರು.

ಕಳೆದ 10 ವರ್ಷಗಳಲ್ಲಿ ಯೋಗದ ವಿಸ್ತರಣೆಯು ಯೋಗಕ್ಕೆ ಸಂಬಂಧಿಸಿದ ಅನೇಕ ಗ್ರಹಿಕೆಯನ್ನು ಬದಲಾಯಿಸಿದೆ. ಇಂದು ಜಗತ್ತು ಹೊಸ ಯೋಗ ಆರ್ಥಿಕತೆಯನ್ನು ನೋಡುತ್ತಿದೆ. ಭಾರತದಲ್ಲಿ ಋಷಿಕೇಶ ಮತ್ತು ಕಾಶಿಯಿಂದ ಕೇರಳಕ್ಕೆ ಯೋಗ ಪ್ರವಾಸೋದ್ಯಮದ ಹೊಸ ಸಂಪರ್ಕವನ್ನು ಕಾಣಬಹುದು. ಪ್ರಪಂಚದಾದ್ಯಂತದ ಪ್ರವಾಸಿಗರು ಭಾರತಕ್ಕೆ ಬರುತ್ತಿದ್ದಾರೆ. ಏಕೆಂದರೆ, ಅವರು ಭಾರತದಲ್ಲಿ ಯೋಗವನ್ನು ಕಲಿಯಲು ಬಯಸುತ್ತಾರೆ. ಜನರು ತಮ್ಮ ಫಿಟ್‌ನೆಸ್‌ಗಾಗಿ ವೈಯಕ್ತಿಕ ಯೋಗ ತರಬೇತುದಾರರನ್ನು ಸಹ ಇರಿಸುತ್ತಿದ್ದಾರೆ. ಇವೆಲ್ಲವೂ ಯುವಕರಿಗೆ ಹೊಸ ಅವಕಾಶಗಳನ್ನು, ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ ಎಂದು ಮೋದಿ ಹೇಳಿದರು.

ಶ್ರೀನಗರವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ನನಗೆ 'ಯೋಗ' ಮತ್ತು 'ಸಾಧನ' ಭೂಮಿಗೆ ಬರಲು ಅವಕಾಶ ಸಿಕ್ಕಿದೆ. ಶ್ರೀನಗರದಲ್ಲಿ ಯೋಗದಿಂದ ನಾವು ಪಡೆಯುವ 'ಶಕ್ತಿ'ಯನ್ನು ಅನುಭವಿಸಬಹುದು ಎಂದು ಹೇಳಿದರು.

ಅಂದಹಾಗೆ ದಾಲ್ ಸರೋವರದ ದಡದಲ್ಲಿರುವ ಶೇರ್-ಇ-ಕಾಶ್ಮೀರ್ ಇಂಟರ್‌ನ್ಯಾಶನಲ್ ಕಾನ್ಫರೆನ್ಸ್ ಸೆಂಟರ್ (ಎಸ್‌ಕೆಐಸಿಸಿ) ಯಲ್ಲಿ ಬೆಳಗ್ಗೆ 6.30ಕ್ಕೆ ಯೋಗ ಕಾರ್ಯಕ್ರಮ ಆರಂಭವಾಗಬೇಕಿತ್ತು. ಆದರೆ, ನಗರದಲ್ಲಿ ಭಾರೀ ಮಳೆಯಿಂದಾಗಿ ಕಾರ್ಯಕ್ರಮ ಆರಂಭವಾಗುವುದು ಕೊಂಚ ವಿಳಂಬವಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net