

ಬೆಂಗಳೂರು:
ಅಂತಾರಾಷ್ಟ್ರೀಯ ಯೋಗದಿನಾಚರಣೆ ನಿಮಿತ್ತ ವಿಧಾನಸೌಧದ ಮುಂಭಾಗ ಶುಕ್ರವಾರ ನಡೆದ ಯೋಗೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೊಟ್, ಡಿಸಿಎಂ ಡಿಕೆ ಶಿವಕುಮಾರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಶರವಣ, ಕ್ರೀಡಾಪಟು ಅಶ್ವಿನಿ ನಾಚಪ್ಪ, ಕ್ರಿಕೆಟಿಗ ಮನೀಶ್ ಪಾಂಡೆ, ಚಿತ್ರನಟಿ ಅನು ಪ್ರಭಾಕರ್, ನಟ ಶರಣ್ ಮತ್ತಿತರರು ಭಾಗವಹಿಸಿದ್ದರು.
ಯೋಗ ಈ ದೇಶದ ಆಸ್ತಿ:
ಇದೇ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಯೋಗಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದ್ದು, ದೇಶ ಮಾತ್ರವಲ್ಲದೇ ಇಡೀ ವಿಶ್ವ ನಮ್ಮ ಧರ್ಮ, ಸಂಸ್ಕೃತಿ, ಪದ್ಧತಿಯಾಗಿರುವ ಯೋಗವನ್ನು ಒಪ್ಪಿದೆ ಎಂದರು.
ಅನೇಕ ಹಿರಿಯರು, ಋಷಿಗಳು ಇದಕ್ಕೆ ಕೊಡುಗೆ ನೀಡಿದ್ದು, ಯೋಗಕ್ಕೆ ಯಾವುದೇ ಜಾತಿ, ಕುಲ, ಧರ್ಮದ ಎಲ್ಲೆ ಇಲ್ಲ. ನನಗೆ ಯೋಗಾಭ್ಯಾಸವಿಲ್ಲ. ಶಾಲಾ ದಿನಗಳಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದೆ ಎಂದರು.
ಯೋಗ ಈ ದೇಶದ ಆಸ್ತಿ. ನನ್ನ ಮನೆಯಲ್ಲಿ ಯೋಗಭ್ಯಾಸ ಮಾಡುತ್ತಾರೆ. ಯೋಗಕ್ಕೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಹತ್ತು ದಿನಗಳ ಕಾಲ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ನೀವು ಆರೋಗ್ಯವಂತರಾಗಿರಬೇಕು, ಮಾನಸಿಕವಾಗಿ ಶಕ್ತಿಶಾಲಿಯಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ಕಾರ್ಯಕ್ರಮ ಆಯೋಜಿಸಿದೆ. ಹಿರಿಯರು, ಕಿರಿಯರು ಸೇರಿದಂತೆ ಎಲ್ಲಾ ವರ್ಗದ ಜನರು ಯೋಗಾಭ್ಯಾಸ ಮಾಡಿ ಆರೋಗ್ಯವಂತರಾಗಿರಲಿ ಎಂದು ಮನವಿ ಮಾಡುತ್ತೇನೆ ಎಂದರು.