

ದೈಹಿಕ, ಮಾನಸಿಕ ವಿಕಾಸಕ್ಕೆ ಪೂರಕವಾಗಿರುವ, ವ್ಯಕ್ತಿತ್ವವನ್ನು ಗಟ್ಟಿಗೊಳಿಸುವ, ಸಕಾರಾತ್ಮಕ ಮನೋಭಾವ ಬೆಳೆಸುವ ಯೋಗ ಉತ್ತಮ ಜೀವನಶೈಲಿಯ ಕೀಲಿಕೈ ಇದ್ದಂತೆ. ಯೋಗವನ್ನು ನಿಯಮಿತವಾಗಿ ಮುಂದುವರಿಸಿದಂತೆಲ್ಲ ಮಾನಸಿಕ ಶಾಂತಿ, ಮನಸ್ಸಿನ ನಿರಾಳತೆ, ಸಕಾರಾತ್ಮಕ ಚಿಂತನೆಗಳು ಒಡಮೂಡಿ ವ್ಯಕ್ತಿ, ಆ ಮೂಲಕ ಸಮುದಾಯದ ಸ್ವಾಸ್ಥ್ಯ ಉತ್ತಮಗೊಳ್ಳುತ್ತದೆ. ಯೋಗ ಜೀವನಕ್ರಮದಿಂದ ಉತ್ತಮ ಆರೋಗ್ಯವನ್ನಷ್ಟೇ ಅಲ್ಲ, ಆರೋಗ್ಯದ ಪರಮಸ್ಥಿತಿಯಾದ ಪರಿಪೂರ್ಣ ಆನಂದವನ್ನೂ ಪಡೆಯಲು ಸಾಧ್ಯ ಎಂಬುದು ಕ್ಷೇತ್ರತಜ್ಞರ ಅಭಿಮತ. ಜನಜೀವನಕ್ಕೆ ಸಂಜೀವಿನಿಯಾಗಿ ಕೆಲಸ ಮಾಡುವ ಯೋಗ, ಜೀವನಮಂತ್ರವಾಗಿ ಬದಲಾಗಬೇಕಿದೆ. ಭಾರತದ ಈ ವಿದ್ಯೆಯನ್ನು ಹಲವು ರಾಷ್ಟ್ರಗಳು ಯಶಸ್ವಿಯಾಗಿ ಜೀವನಶೈಲಿಯಲ್ಲಿ ಅಳವಡಿಸಿ ಕೊಂಡಿವೆ. ಹಾಗಾಗಿ, ಯೋಗದ ಅನುಷ್ಠಾನ ಎಲ್ಲ ವಲಯಗಳಿಗೂ ವ್ಯಾಪಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಳೆದಿರುವ ನಿರ್ಧಾರ ಮಹತ್ವಪೂರ್ಣವಾಗಿದೆ. ಕ್ರೀಡಾರಂಗದಲ್ಲೂ ಈ ಕ್ಷೇತ್ರಕ್ಕೆ ಮನ್ನಣೆ ದೊರೆತಿರುವುದರಿಂದ, ಹೊಸ ಪ್ರತಿಭೆಗಳ ಆಗಮನಕ್ಕೆ ಅನುಕೂಲವಾಗಲಿದೆ.
ಹಾಗೇ ಒಂದು ಎಚ್ಚರಿಕೆಯ ಜತೆಗೆ ಸಾಗಬೇಕು. ಯೋಗದ ಮೂಲಜ್ಞಾನ ಅಥವಾ ಮೂಲತಿರುಳನ್ನು ಆಧುನಿಕತೆ ಅಥವಾ ಕ್ರೀಡೆಯ ಹೆಸರಲ್ಲಿ ಯಾವುದೇ ಕಾರಣಕ್ಕೂ ತಿರುಚಬಾರದು. ಮೂಲವನ್ನು ಬಿಟ್ಟು ಕೃತಕತೆ ಅಳವಡಿಸಿಕೊಂಡರೆ ಮತ್ತೆ ಅಪಸವ್ಯಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ತರಬೇತುದಾರರು, ಯೋಗಪಟುಗಳು ರೂಪುಗೊಳ್ಳಬೇಕು.