

ಶಿವಮೊಗ್ಗ: ವಿನೋಬನಗರದ ಶುಭಮಂಗಳ ಸಮುದಾಯ ಭವನದಲ್ಲಿ ಜೂ.21ರ ಬೆಳಗ್ಗೆ 5.30ರಿಂದ 8.30ರವರೆಗೆ ಕನ್ನಡದ ನಂಬರ್ ಒನ್ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ನಗರದ ವಿವಿಧ ಯೋಗ ಸಂಸ್ಥೆಗಳ ಆಶ್ರಯದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ದಿ ಆರ್ಟ್ ಆಫ್ ಲಿವಿಂಗ್ ಜಿಲ್ಲಾ ಶಾಖೆ ಯೋಗ ಪರಿಚಾರಕ ಶಬರೀಶ್ ಕಣ್ಣನ್ ಹೇಳಿದರು.
ಮಹಿಳಾ ಸಬಲೀಕರಣಕ್ಕಾಗಿ ಯೋಗ ಎನ್ನುವ ಧ್ಯೇಯವಾಕ್ಯದೊಂದಿಗೆ ದಿ ಆರ್ಟ್ ಆ್ ಲಿವಿಂಗ್, ಸುಮೇರು ಯೋಗ ಕೇಂದ್ರ, ಅಮೃತ ಯೋಗ ಕೇಂದ್ರ, ಎಸ್‌ಪಿವೈಎಸ್‌ಎಸ್, ನಿಹಾರಿಕಾ ಯೋಗ ಕೇಂದ್ರ, ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಆಶ್ರಯದಲ್ಲಿ ವಿಶ್ವ ಯೋಗ ದಿನ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯೋಗದ ಬಗ್ಗೆ ಜಾಗೃತಿ ಮೂಡಿಸಲು ಬುಧವಾರ ಯೋಗ ನಡಿಗೆ ಹಮ್ಮಿಕೊಂಡು 600ರಿಂದ 800 ಮನೆಗಳಿಗೆ ಭೇಟಿ ಕೊಟ್ಟು ಕರಪತ್ರ ನೀಡಿದ್ದು, ಯೋಗ ದಿನಾಚರಣೆಯಲ್ಲಿ ಭಾಗವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಷನ್‌ನ ಅನಿಲ್‌ಕುಮಾರ್ ಎಚ್. ಶೆಟ್ಟರ್ ಮಾತನಾಡಿ, ಪ್ರತಿ ವರ್ಷ ಜೂ.21ರಂದು ವಿಶ್ವ ಯೋಗ ದಿನ ಆಚರಿಸುತ್ತಿದ್ದು ಯೋಗಾಸಕ್ತರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಬಿಳಿ ಉಡುಪು ಧರಿಸಿ ಪಾಲ್ಗೊಳ್ಳಬೇಕು. ನೀರಿನ ಬಾಟಲ್, ಯೋಗ ಮ್ಯಾಟ್ ತರಬೇಕು ಎಂದು ತಿಳಿಸಿದರು.
ಯೋಗ ಎಲ್ಲರನ್ನೂ ಒಂದುಗೂಡಿಸಲಿದೆ. ಯೋಗವು ನಮ್ಮ ದೇಹ ಮತ್ತು ಮನಸ್ಸನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ದಿನ ಯೋಗ ಮಾಡುವುದರಿಂದ ನಮ್ಮ ಚೈತನ್ಯವು ಹೆಚ್ಚಲಿದೆ ಮತ್ತು ಮನಸ್ಸು ಸಂಪೂರ್ಣ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ನಾಲ್ಕು ವರ್ಷಗಳಿಂದ ನಗರದ ಎಲ್ಲ ಸಂಘಟನೆಗಳನ್ನು ಸೇರಿಸಿಕೊಂಡು ಯೋಗಾಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ವಿಶೇಷ ಉಪನ್ಯಾಸ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ವಿಶೇಷವಾಗಿ ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನ ಟ್ರಸ್ಟ್, ಭಜನಾ ಪರಿಷತ್(ಶಿವಮೊಗ್ಗ ನಗರದ ಭಜನಾ ಮಂಡಳಿಗಳ ಒಕ್ಕೂಟ), ಸಂಸ್ಕಾರ ಪ್ರತಿಷ್ಠಾನ ಹಾಗೂ ಧರ್ಮವರ್ಧಿನಿ ಸಹಕಾರ ನೀಡುತ್ತಿವೆ ಎಂದು ವಿವರಿಸಿದರು.
ಮಾಹಿತಿಗೆ ಶಬರೀಶ್ ಕಣ್ಣನ್(9964072793), ಅನಿಲ್‌ಕುಮಾರ್ ಶೆಟ್ಟರ್(9886674375) ಅವರನ್ನು ಸಂಪರ್ಕಿಸಬಹುದು. ವಿವಿಧ ಯೋಗ ಸಂಸ್ಥೆಗಳ ಮುಖ್ಯಸ್ಥರಾದ ಸುಧಾ ಮಂಜುನಾಥ್, ಶಾಂತಾ ಶೆಟ್ಟಿ, ಮಮತಾ ಚಂದ್ರಶೇಖರ್, ಶೈಲಜಾ, ಬೆಲಗೂರು ಮಂಜುನಾಥ್, ಶಿವಶಂಕರ್ ಸುದ್ದಿಗೋಷ್ಠಿಯಲ್ಲಿದ್ದರು.
ಡಾ. ಪ್ರೀತಂ ಗೌಡ ಉಪನ್ಯಾಸ
ಯೋಗ ದಿನಾಚರಣೆಯಲ್ಲಿ ಸಾಮೂಹಿಕ ಯೋಗಾಭ್ಯಾಸ, ಸೂರ್ಯನಮಸ್ಕಾರ, ಆಸನ, ಪ್ರಾಣಾಯಾಮ, ಧ್ಯಾನ ಮತ್ತು ಉಪನ್ಯಾಸ ಗುರುವಂದನೆ ಜರುಗಲಿದೆ. ಕಾರ್ಯಕ್ರಮದಲ್ಲಿ ಡಾ. ಬಿ.ಪ್ರೀತಮ್ ಅವರು ಡಯಾಬಿಟಿಸ್ ರಿವರ್ಸಲ್ ಮಾಡುವ ಕುರಿತು ವಿಶೇಷ ಉಪನ್ಯಾಸ ನೀಡುವರು ಎಂದು ಶಬರೀಶ್ ಕಣ್ಣನ್ ತಿಳಿಸಿದರು.