ಯೋಗ ದರ್ಶನ-ದೇಶ ಧರ್ಮಗಳ ಗಡಿಮೀರಿದ ವೈಶ್ವಿಕ ಶಾಸ್ತ್ರ

sudina
Published on
 ಯೋಗ ವಿದ್ಯೆಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ ಇದೆ. ಭಾರತೀಯ ತತ್ವಜ್ಞಾನವನ್ನು ಮನಗಾಣಿಸುವ ಆರು ದರ್ಶನಗಳಲ್ಲಿ ಯೋಗವೂ ಒಂದು. ಯೋಗಶಾಸ್ತ್ರವು ಅತಿ ಪ್ರಾಚೀನ ಭಾರತೀಯ ಶಾಸ್ತ್ರವಾಗಿದ್ದು ಇದು ಬ್ರಹ್ಮನಿಂದ ಮಾನವರಿಗೆ ದೊರೆತ ವರವಾಗಿದೆ ಎಂಬುದು ಶ್ರದ್ಧೆ. ಯೋಗೇಶ್ವರ ಕೃಷ್ಣ ಹಾಗೂ ಯೋಗೀಶ್ವರ ಈಶ್ವರರಿಂದ ಬಳುವಳಿ ಎಂಬುದು ಪರಂಪರೆ. ಕ್ರಿ.ಪೂ. 200 ವರ್ಷಗಳ ಮೊದಲು ಮಹರ್ಷಿ ಪತಂಜಲಿ ಯೋಗ ಶಾಸ್ತ್ರವನ್ನು ಸೂತ್ರ ಬದ್ಧಗೊಳಿಸಿದರು.

ಅದಕ್ಕೂ ಮೊದಲು ಯೋಗದ ಕುರಿತು ಮಾಹಿತಿ ವೇದಗಳಲ್ಲಿ ಅಲ್ಲಲ್ಲಿ ದೊರಕುತಿತ್ತು. ನಂತರ ಈ ವಿಷಯ ಯೋಗೋಪನಿಷತ್ತುಗಳಲ್ಲಿ, ಸಂಹಿತೆಗಳಲ್ಲಿ ಹಾಗೂ ಹಠಯೋಗ ಪ್ರದೀಪಿಕಾ, ಘೇರಂಡ ಸಂಹಿತೆ, ಶಿವ ಸಂಹಿತೆ, ಹಠಯೋಗ ರತ್ನಾವಳಿ ಇತ್ಯಾದಿ ಗ್ರಂಥಗಳಲ್ಲಿ ದೊರಕಲಾರಂಭಿಸಿತು. ಕಾಲಕ್ರಮೇಣ ಯೋಗ ವಿಷಯದ ಸ್ವರೂಪದಲ್ಲಿ ಬದಲಾವಣೆ ಕಂಡುಬಂದಿತು. ಆದರೆ ತಾತ್ವಿಕವಾಗಿ ಬದ್ಧನಿಷ್ಠವಾಗಿ ಉಳಿದಿದ್ದು ಕಂಡುಬರುತ್ತದೆ. ವ್ಯಕ್ತಿಯಲ್ಲಿ ಶಾರೀರಿಕ, ಮಾನಸಿಕ, ಬೌದ್ಧಿಕ, ನೈತಿಕ ಹಾಗೂ ಆಧ್ಯಾತ್ಮಿಕ ಪರಿವರ್ತನೆ ಮೂಡಿಸಿ, ತನ್ಮೂಲಕ ವ್ಯಕ್ತಿ ಹಾಗೂ ಸಮಾಜದ ಸಾಂಸ್ಕೃತಿಕ ತಳಹದಿಯಲ್ಲಿ ಉನ್ನತ ಮಟ್ಟಕ್ಕೇರಿಸುವ ಸತ್ತ್ವ ಈ ಶಾಸ್ತ್ರದಲ್ಲಿದೆ. ಮನಸ್ಸು, ಬುದ್ಧಿ, ಅಹಂಕಾರ ಹಾಗೂ ಚಿತ್ತ ಇವುಗಳ ಗ್ರಹಣ ಮನುಷ್ಯನ ವೈಶಿಷ್ಟ್ಯ್ಟಾಗಿದೆ. ಅವನು ಪಂಚೇಂದ್ರಿಯಗಳ ಮೂಲಕ ಬಾಹ್ಯ ಸೃಷ್ಟಿ ಘಟನೆಗಳನ್ನು ಅವಲೋಕಿಸಿ ತನ್ಮೂಲಕ ಅದನ್ನು ಆತ್ಮಸ್ಥ ಮಾಡಿಕೊಳ್ಳುತ್ತಾನೆ. ಇದರಿಂದಾಗಿ ಅವನಲ್ಲಿ ಒಳ್ಳೆಯ - ಕೆಟ್ಟ ವೃತ್ತಿಗಳು ನಿರ್ವಣವಾಗುತ್ತವೆ. ಈ ವ್ಯಕ್ತಿಗಳ ಪ್ರಭಾವದಿಂದ ಮನುಷ್ಯ ಅನೇಕ ಬಾರಿ ತನ್ನ ಸತ್ಯ - ಅಸತ್ಯ ತಿಳಿದುಕೊಳ್ಳುವ ಕ್ಷಮತೆಯನ್ನು ಬಳಸಿಕೊಳ್ಳದೆ ನಡೆದುಕೊಳ್ಳುತ್ತಾನೆ ಹಾಗೂ ಇದರಿಂದಾಗಿ ಸುಖಃ -ದುಃಖಗಳು ಹುಟ್ಟಿಕೊಳ್ಳುತ್ತವೆ. ಅಪ್ರವೃತ್ತಿಯ ಪ್ರಭಾವಿ ಆಗಿರುವುದರಿಂದ ಹೆಚ್ಚಿನ ಸಮಯ ‘ಸುಖಃ ಸ್ವಲ್ಪ, ದುಃಖ ಹೆಚ್ಚು’ ಇಂತಹ ಸ್ಥಿತಿ ಉಂಟಾಗಿದೆ.

ಆಧುನಿಕ ಸೌಕರ್ಯಗಳು ಜೀವನವನ್ನು ಸುಗಮಗೊಳಿಸಿವೆ, ಆದರೆ ಬದುಕನ್ನು ದುರ್ಗಮಗೊಳಿಸಿವೆ. ಅವಸರ, ಒತ್ತಡ, ಗೊಂದಲ, ವೇಗ, ಪ್ರಕ್ಷುಬ್ಧತೆ ಇವುಗಳ ಪ್ರವಾಹದಿಂದ ಚಿಂತೆ ಹಾಗೂ ನಿರಾಶೆಗಳು ಮನುಷ್ಯನನ್ನು ಹೃದಯ ರೋಗ, ರಕ್ತದ ಒತ್ತಡ ಹಾಗೂ ಸಿಹಿಮೂತ್ರ ರೋಗಗಳ ಸುಳಿಯಡೆ ಸೆಳೆಯುತ್ತವೆ. ಕೆಲಸದ ಸ್ಥಳದಲ್ಲಿ ಸತತವಾಗಿ ನಿಂತು ಅಥವಾ ಒಂದೇ ಕಡೆ ಕುರ್ಚಿಯಲ್ಲಿ ಕುಳಿತು ಕಾರ್ಯಭಾರ ನಡೆಯಿಸಬೇಕಾದ ಪ್ರಸಂಗ ಬರುವುದರಿಂದ ಶರೀರದ ಮುಕ್ತ ಸಂಚಾಲನೆಗೆ ಅವಕಾಶ ಇಲ್ಲವಾಗಿ ಮಂಡಿಗಳ ನೋವು, ಸಂಧಿವಾತ, ವಾತ ಮೈ-ಕೈ ನೋವುಗಳು ಹೆಚ್ಚಾಗಿವೆ. ಬೌದ್ಧಿಕ ಚಟುವಟಿಕೆಗಳಲ್ಲಿ ಸತತ ನಿರತರಾದವರಿಗೆ ತಲೆನೋವು, ಮಾನಸಿಕ ವಿಕಾರತೆ ಮುಂತಾದ ಉಡುಗೊರೆಗಳು ಲಭಿಸಿದವು.

ಆಧುನಿಕ ಜೀವನದ ವಿವಿಧ ಗೊಂದಲಗಳಿಂದ ಉಂಟಾಗುವ ದುಃಖದಿಂದ ಮುಕ್ತರಾಗಲು ದಾರಿ ಹುಡುಕುತ್ತಿರುವ ಎಲ್ಲರೂ ಯೋಗ ವಿಷಯದಲ್ಲಿ ಆಸಕ್ತಿ ತಳೆಯುತ್ತಿರುವುದು ಖುಷಿವಿಚಾರ. ಆದರೆ ಯೋಗದ ಕುರಿತು ವಿಧ ವಿಧವಾದ ತಿಳುವಳಿಕೆ - ತಪು್ಪಕಲ್ಪನೆಗಳಿವೆ. ಯೋಗಾಭ್ಯಾಸವನ್ನು ವಯೋವೃದ್ಧರು, ಸನ್ಯಾಸಿಗಳು, ವೈರಾಗ್ಯ ಜೀವನ ಸ್ವೀಕರಿಸಿ ಏಕಾಂತ ವಾಸದಲ್ಲಿ ಮಾಡುವ ಸಾಧನೆ ಎಂಬುದಾಗಿ ಕೆಲವರು ತಿಳಿದಿದ್ದಾರೆ. ಕೆಲವು ಕ್ಷಣದವರೆಗೆ ಸಾಧ್ಯವಾದಷ್ಟು ಒಂದೆಡೆ ಸ್ಥಿರವಾಗಿ ಕುಳಿತುಕೊಳ್ಳುವುದೇ ಯೋಗಸಾಧನೆಯಾಗಿದೆ ಎಂಬುದು ಕೆಲವರ ಅನಿಸಿಕೆ, ಇದೂ ಒಂದು ಪ್ರಕಾರದ ವ್ಯಾಯಾಮ ಎಂದು ಕೆಲವರು ತಿಳಿದಿದ್ದರೆ ರೋಗ ಪರಿಹಾರಕ್ಕಾಗಿ ಇದೊಂದು ಮಾರ್ಗ ಎಂಬುದು ಮತ್ತೆ ಕೆಲವರ ತಿಳಿವಳಿಕೆ. ಆದರೆ ಯೋಗದ ಕುರಿತು ಈ ರೀತಿಯ ಹಗುರ ಭಾವನೆ ಹಾಗೂ ಮೇಲು ಮೇಲಿನ ನೋಟ ಸರಿಯಾದದ್ದಲ್ಲ. ಯಾಕೆಂದರೆ ಯೋಗವು ಒಂದು ಸಂಪೂರ್ಣ ಶಾಸ್ತ್ರವಷ್ಟೇ ಆಗಿರದೆ ವ್ಯಕ್ತಿ ಹಾಗೂ ಸಮಾಜ ಸಂಬಂಧದಲ್ಲಿ ಸ್ವಾಸ್ಥ್ಯ ಬೆಸೆಯುವ ತತ್ವಜ್ಞಾನ ಆಗಿದೆ. ದೇಶ ಧರ್ಮಗಳ ಗಡಿ ಮೀರಿ ಸರ್ವರೂ ಈ ಕಾಲದಲ್ಲಿ ಅನುಸರಿಸಬಹುದಾದ್ದೆಂದರೆ ಯೋಗ ದರ್ಶನ ಅರ್ಥಾತ್ ಅಷ್ಟಾಂಗಯೋಗ. ಇದು ಬಿಟ್ಟು ಈಶ್ವರ ಪ್ರಾಪ್ತಿಯ ಇತರ ಮಾರ್ಗ ಕ್ರಮಿಸುವಾಗ ತಪು್ಪಗಳಾದಲ್ಲಿ ಅಡೆತಡೆಗಳು, ನಿರಾಶೆ ಹಾಗೂ ವೈಫಲ್ಯ ಸಂಭವಿಸಬಹುದು. ಆದರೆ ಪತಂಜಲಿ ಯೋಗ - ಅಷ್ಟಾಂಗ ಯೋಗದಲ್ಲಿ ಹೀಗೆ ಆಗದು. ಯೋಗ ಸಾದಕರು ಈಶ್ವರ ಪ್ರಾಪ್ತಿಯ ಮಟ್ಟದವರೆಗೆ ಹೋಗಲು ಆಗದಿದ್ದರೆ ಕನಿಷ್ಠ ಪಕ್ಷ ಉತ್ತಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಪಡೆದುಕೊಳ್ಳುತ್ತಾರೆ.

( ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net