ಜವಾಬ್ದಾರಿ ನಿರ್ವಹಣೆಗೆ ಯೋಗ, ಯೋಗ್ಯತೆ ಅವಶ್ಯ

byr
ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕೇಂದ್ರ ಹಿಂದಿ ಸಲಹಾ ಸಮಿತಿ ಸದಸ್ಯೆ ಡಾ.ಬಿ.ಸರೋಜಾ ಅವರನ್ನು ಬಿ.ವೈ.ರಾಘವೇಂದ್ರ ಸನ್ಮಾನಿಸಿದರು. ಎಸ್.ಚಂದ್ರಕಾಂತ್, ಎಂ.ಎನ್.ಸುಂದರರಾಜ್, ಉಷಾ ನಟೇಶ್ ಇತರರಿದ್ದರು.
Published on

ಶಿವಮೊಗ್ಗ: ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕೇಂದ್ರ ಹಿಂದಿ ಸಲಹಾ ಸಮಿತಿ ಸದಸ್ಯರಾಗಿ ನೇಮಕಗೊಂಡ ಡಾ. ಜಿ.ಎಸ್.ಸರೋಜಾ ಅವರನ್ನು ಅಖಿಲ ಭಾರತ ಕವಯಿತ್ರಿಯರ ಸಂಸ್ಥೆ ಪರವಾಗಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ರಾಘವೇಂದ್ರ, ಸರೋಜಾ ಅತ್ಯಂತ ಪ್ರತಿಭಾವಂತರು. ಅವರನ್ನು ಕೇಂದ್ರ ಸರ್ಕಾರ ಗುರುತಿಸಿರುವುದು ಸಂತಸ ತಂದಿದೆ. ಸಂಸ್ಕೃತಿಯ ತವರೂರು ಶಿವಮೊಗ್ಗದವರಾದ ಸರೋಜಾ ಅವರು ಹಿಂದಿ ಸಲಹಾ ಸಮಿತಿ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಲಿ ಎಂದು ಹೇಳಿದರು.

ಡಾ. ಜಿ.ಎಸ್.ಸರೋಜಾ ಮಾತನಾಡಿ, ಇದು ಅತ್ಯಂತ ಸಂಭ್ರಮದ ದಿನ. ಯೋಗ್ಯತೆ, ಯೋಗ ಎರಡೂ ಇದ್ದರೆ ಮಾತ್ರ ಗೌರವ, ಹೆಚ್ಚಿನ ಜವಾಬ್ದಾರಿಗಳು ನಮನ್ನು ಅರಸಿಕೊಂಡು ಬರುತ್ತವೆ. ವೃತ್ತಿಯ ಜತೆಗೆ ಉತ್ತಮ ಪ್ರವೃತ್ತಿಯನ್ನು ಬೆಳೆಸಿಕೊಂಡು ಬದ್ಧತೆ, ಕ್ರಿಯಾಶೀಲತೆ, ಶ್ರದ್ಧೆಯಿಂದ ಕೆಲಸ ಮಾಡಿದರೆ ಯಶಸ್ಸು ಪಡೆಯಬಹುದು ಎಂದರು.

ಕನ್ನಡ ನಮಗೆ ತಾಯಿ ಭಾಷೆ. ಹಾಗೆಯೇ ಎಲ್ಲ ಭಾಷೆಗಳೂ ಶ್ರೇಷ್ಠವೇ ಆಗಿರುತ್ತವೆ. ಹಿಂದಿ ನನಗೆ ಅನ್ನದ ಭಾಷೆಯಾಗಿದೆ. ಯಾವುದೇ ಭಾಷೆಗಳನ್ನು ಕಲಿತರೂ ಮಾತೃಭಾಷೆಯನ್ನು ಗೌರವಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಹಿಂದಿ ಒಂದು ಪ್ರಬುದ್ಧ ಭಾಷೆ. ವಿಶೇಷವೆಂದರೆ ಹಿಂದಿ ಮಾತೃಭಾಷೆ ಅಲ್ಲದವರೇ ಹಿಂದಿಯನ್ನು ಬೆಳೆಸಿದ್ದಾರೆ ಎಂದು ಹೇಳಿದರು.

ಇದೊಂದು ಅಪೂರ್ವ ಕ್ಷಣ. ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಪತ್ರಕರ್ತ ಎಸ್.ಚಂದ್ರಕಾಂತ್ ಹೇಳಿದರು. ಎಐಪಿಸಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಉಷಾ ನಟೇಶ್ ಕಾಸರವಳ್ಳಿ, ಸಾಹಿತಿ ಎಂ.ಎನ್.ಸುಂದರ್‌ರಾಜ್, ಎನ್‌ಇಎಸ್ ನಿರ್ದೇಶಕ ಅಶ್ವತ್ಥ ನಾರಾಯಣಶೆಟ್ಟಿ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net