

ಅರಸೀಕೆರೆ: ತಾಲೂಕಿನ ಹಬ್ಬನಘಟ್ಟ ರೈಲ್ವೆ ನಿಲ್ದಾಣ ಹಾಗೂ ಮೈಲನಹಳ್ಳಿ ಗ್ರಾಮದ ಕೂಗಳತೆ ದೂರದಲ್ಲಿ ಸ್ಥಗಿತಗೊಂಡಿದ್ದ ಎತ್ತಿನಹೊಳೆ ನಾಲೆ ನಿರ್ಮಾಣ ಕಾಮಗಾರಿಗೆ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿದೆ.
ಸದ್ಯದ ಬೆಳವಣಿಗೆಯಿಂದಾಗಿ ಬಹುಕಾಲದಿಂದ ನನೆಗುದಿಗೆ ಬಿದ್ದಿದ್ದ ದೊಡ್ಡಮಟ್ಟದ ಕೆಲಸ ಮೊದಲ ಹಂತದಲ್ಲಿ ಹಬ್ಬನಘಟ್ಟ ಬಳಿ ಮಂಗಳವಾರ ಆರಂಭವಾಗಿದೆ.
ಅರಸೀಕೆರೆ, ಹಾಸನ ಮಾರ್ಗವಾಗಿ ಮೈಸೂರು ಹಾಗೂ ಅರಸೀಕೆರೆ-ಬೆಂಗಳೂರು ಸಂಪರ್ಕಿಸುವ ರೈಲ್ವೆ ಮಾರ್ಗದಲ್ಲಿ ನಾಲೆ ಹಾದು ಹೋಗಬೇಕಿದ್ದ ಹಿನ್ನೆಲೆಯಲ್ಲಿ ಅನುಮತಿ ಪಡೆಯವುದು ಕಡ್ಡಾಯವಾಗಿತ್ತು. ತ್ವರಿತಗತಿಯಲ್ಲಿ ಕೆಲಸ ಪೂರ್ಣಗೊಳಿಸಲು ಪಣ ತೊಟ್ಟಿದ್ದ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಸಮಸ್ಯೆಯ ಗಂಭೀರತೆಯನ್ನು ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಗಮನಕ್ಕೆ ತಂದಿದ್ದರು. ಕೆಲ ದಿನಗಳ ಹಿಂದಷ್ಟೇ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದ ಶಾಸಕ ಕೆಎಂಶಿ ಹಾಗೂ ವಿಜೆಎನ್‌ಎಲ್ ಅಧಿಕಾರಿಗಳ ತಂಡ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟಿತ್ತು. ಕುಡಿಯುವ ನೀರಿನ ಸಂಕಷ್ಟ ಆಲಿಸಿದ ಕೇಂದ್ರ ಸಚಿವರು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿ ಪೂರ್ಣಗೊಳಿಸಲು ಅನುವು ಮಾಡಿಕೊಡುವಂತೆ ಸೂಚಿಸಿದ್ದರು. ಇದರಿಂದಾಗಿ ಹಬ್ಬನಘಟ್ಟ ಗ್ರಾಮದ ಬಳಿ 72 ಮೀ. ಹಾಗೂ ಮೈಲನಹಳ್ಳಿ ಸಮೀಪ 60 ಮೀ. ಕಾಲುವೆ ತೆಗೆಯುವ ಕೆಲಸ ಶೀಘ್ರವೇ ಪೂರ್ಣಗೊಳ್ಳಲಿದೆ. ಬೃಹತ್ ಯೋಜನೆಗೆ ಎದುರಾಗಿದ್ದ ಬಹುದೊಡ್ಡ ತೊಡಕು ನಿವಾರಣೆಯಾಗಿರುವುದು ಕೆರೆ ಪಾತ್ರದ ಜನರಲ್ಲಿ ನೀರು ಹರಿಯುವ ವಿಶ್ವಾಸ ಹೆಚ್ಚು ಮಾಡಿದೆ.