

ಬೆಂಗಳೂರು: ಕುಡಿಯುವ ನೀರು ಪೂರೈಕೆ, ಕೆರೆಗಳನ್ನು ತುಂಬಿಸಲು ಉದ್ದೇಶಿತ ಎತ್ತಿನಹೊಳೆ ಯೋಜನೆಯನ್ನು ನಿಗದಿತ ಕಾಲಮಿತಿಯಂತೆ 2027ರ ಮಾರ್ಚ್ ಒಳಗೆ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದರು.
ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಶುಕ್ರವಾರ ಕರೆದಿದ್ದ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಯೋಜನಾ ವ್ಯಾಪ್ತಿಯ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವುದು ಸರ್ಕಾರದ ಗುರಿಯಾಗಿದೆ ಎಂದರು.
ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ ಬೇಕಾದಷ್ಟು ನೀರು ಸರಾಸರಿ ಲಭ್ಯವಿದೆ. ಪ್ರಾರಂಭಿಕ ಹಂತದಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಪೂರ್ಣಗೊಳಿಸಿ, ನಂತರ ಕೆರೆಗಳನ್ನು ಭರ್ತಿ ಮಾಡುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು.
ಯೋಜನಾ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಖಾತ್ರಿಪಡಿಸಬೇಕು. ಕುಡಿಯುವ ನೀರು ಕಾಮಗಾರಿ ಪೂರ್ಣಗೊಳಿಸಲು ಇರುವ ಎಲ್ಲಾ ತಾಂತ್ರಿಕ ಅಡಚಣೆಗಳನ್ನು ನಿವಾರಿಸಬೇಕು ಎಂದು ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ 14.056 ಟಿಎಂಸಿ ಕುಡಿಯುವ ನೀರು, 9.953 ಟಿಎಂಸಿ ನೀರು ಕೆರೆಯನ್ನು ತುಂಬಿಸಲು ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ. ಯೋಜನೆಗೆ 23,251.66 ಕೋಟಿ ರೂ. ಪರಿಷ್ಕೃತ ಅಂದಾಜು ಆಗಿದ್ದು, ಇದುವರೆಗೆ ರೂ.17,147 ಕೋಟಿ ವೆಚ್ಚವಾಗಿದೆ. ಒಂದನೇ ಹಂತದಲ್ಲಿ ನದಿ ಪಾತ್ರದ ಏತ ಕಾಮಗಾರಿಗಳಲ್ಲಿ ಏಳು ಪ್ಯಾಕೇಜ್ ಕಾಮಗಾರಿಗಳು ಪೂರ್ಣಗೊಂಡಿವೆ.
ಹಂತ 2ರಲ್ಲಿ ಗುರುತ್ವ ಮುಖ್ಯ ಕಾಲುವೆ ಕಾಮಗಾರಿಗಳಲ್ಲಿ 33 ಪ್ಯಾಕೇಜ್‌ಗಳ ಪೈಕಿ 11 ಪ್ಯಾಕೇಜ್ ಪೂರ್ಣಗೊಳಿಸಲಾಗಿದೆ. 16 ಕಿಮೀ ವ್ಯಾಪ್ತಿಯ ಕಾಮಗಾರಿ ಪ್ರಾರಂಭಿಸಬೇಕಿದ್ದು, ಇದರಲ್ಲಿ ಆರು ಎಕರೆ ಅರಣ್ಯ ಪ್ರದೇಶ ಹಾಗೂ 10 ಕಿ.ಮೀ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬೇಕಾಗಿದೆ.
ಕಳೆದ ಏಳು ವರ್ಷಗಳಲ್ಲಿ ಸರಾಸರಿ 18.08 ಟಿಎಂಸಿ ನೀರು ಯೋಜನೆಗೆ ಲಭ್ಯವಿದ್ದು, ಉಳಿದ 6ಟಿಎಂಸಿ ನೀರಿನ ಕೊರತೆಯನ್ನು ನೀಗಿಸಲು ಹೆಚ್ಚುವರಿ ನೀರು ತಿರುವುಗೊಳಿಸುವ (ಆಗ್ಮೇಂಟೇಷನ್) ಕುರಿತು ಕಾರ್ಯಸಾಧ್ಯತಾ ವರದಿ ತಯಾರಿಸಲು ಸಮಾಲೋಚಕರನ್ನು ನೇಮಕ ಮಾಡಲಾಗಿದೆ ಎಂದು ಅಧಿಕಾರಿಗಳು ಪ್ರಗತಿ ಮಾಹಿತಿ ನೀಡಿದರು.
ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಕೃಷ್ಣ ಭೈರೇಗೌಡ, ಡಾ.ಎಂ.ಸಿ.ಸುಧಾಕರ್, ಭೈರತಿ ಸುರೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ ಇನ್ನಿತರ ಅಧಿಕಾರಿಗಳು ಇದ್ದರು.