

ತುಮಕೂರು/ ಶಿರಾ: ಶಿರಾ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಹೈಕಮಾಂಡ್ ಸಮೀಕ್ಷೆ ಜತೆಗೆ ಕಾರ್ಯಕರ್ತರ ಅಭಿಪ್ರಾಯ ಪಡೆದು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ದಾವಣಗೆರೆಗೆ ತೆರಳುವ ಮಾರ್ಗಮಧ್ಯೆ ಶಿರಾ ನಗರದಲ್ಲಿ ಶುಕ್ರವಾರ ಕಾರ್ಯಕರ್ತರೊಬ್ಬರ ಮನೆಯಲ್ಲಿ ಉಪಾಹಾರ ಸೇವಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಕಾಂಗ್ರೆಸ್ ಹಿರಿಯ ನಾಯಕ ಟಿ.ಬಿ.ಜಯಚಂದ್ರಗೆ ಟಿಕೆಟ್ ನೀಡೋದು, ಬಿಡೋದು ಹೈಕಮಾಂಡ್ ತಿರ್ಮಾನಿಸಲಿದೆ, ಈವರೆಗೆ ಟಿಕೆಟ್ ಯಾರಿಗೂ ಅಂತಿಮಗೊಳಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದು ರಾಜಕೀಯ ವಲಯದಲ್ಲಿ ತರಹೇವಾರಿ ಚರ್ಚೆ ಹುಟ್ಟುಹಾಕಿದೆ.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಜಯಚಂದ್ರ ನಾನೇ ನಂ.2 ಎಂದು ಹೇಳಿಕೊಳ್ಳುತ್ತಿದ್ದರು, ಅವರು ಪ್ರತಿನಿಧಿಸುತ್ತಿರುವ ಶಿರಾ ಟಿಕೆಟ್ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟ ತೀರ್ಮಾನ ಹೇಳದಿರುವುದು ಕ್ಷೇತ್ರದಲ್ಲಿ ಹೊಸ ಅನುಮಾನಕ್ಕೆ ಕಾರಣವಾಗಿದೆ. ಅಹಿಂದ ಹೆಸರು ಹೇಳಿಕೊಂಡು ಶಿರಾದಲ್ಲಿ ಸಂಘಟನೆಯಲ್ಲಿ ತೊಡಗಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕಾಡುಗೊಲ್ಲ ಸಮುದಾಯದ ಡಾ.ಸಾಸಲು ಸತೀಶ್ ಕುರಿತು ಸುದ್ದಿಗಾರರ ಪ್ರಶ್ನೆಗೆ ಸಿದ್ದರಾಮಯ್ಯ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರ ನೀಡಿದ್ದು ಊಹಾಪೋಹಕ್ಕೆ ನಾಂದಿಯಾಗಿದೆ.
ಶಾಸಕ ಜಮೀರ್ ಅಹ್ಮದ್, ರೂಪೇಶ್ ಕೃಷ್ಣಯ್ಯ, ಹಾರೋಗೆರೆ ಮಹೇಶ್ ಮತ್ತಿತರರು ಇದ್ದರು.
ಸಂತೋಷ್ ಪಾಟೀಲ್ ಕೇಸ್ ನ್ಯಾಯಾಂಗ ತನಿಖೆ ಆಗಲಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಕ್ಲೀನ್‌ಚಿಟ್ ನೀಡಿರುವುದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೆಂಡಾಮಂಡಲರಾದರು. ಮೊಬೈಲ್ನಲ್ಲಿ ಡೆತ್‌ನೋಟ್ ಸಿಕ್ಕಿದ್ದರೂ ಬಿ ರಿಪೋರ್ಟ್ ಹೇಗೆ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು. ಸರ್ಕಾರಿ ಕಾಮಗಾರಿ ಮಾಡಿ ದುಡ್ಡು ಬರಲಿಲ್ಲ, ಈಶ್ವರಪ್ಪ ಲಂಚ ಕೇಳಿದ್ರು, ನನಗೆ ದುಡ್ಡು ಕೊಡೊದಿಕ್ಕೆ ಆಗಲಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಡೆತ್‌ನೋಟ್ ಬರೆದಿದ್ದಾರೆ. ಆದರೂ ಪ್ರಕರಣ ಮುಚ್ಚಿಹಾಕಿದ್ದಾರೆ ಎಂದರು. ನಾನು ಈ ಮೊದಲೇ ನ್ಯಾಯಾಂಗ ತನಿಖೆ ಮಾಡ್ಬೇಕು ಅಂಥ ಆಗ್ರಹಿಸಿದ್ದೆ, ಈಗಲೂ ಹೇಳುತ್ತಿದ್ದೇನೆ, ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ಮಾಡ್ಬೇಕು ಎಂದು ಪುನರುಚ್ಚರಿಸಿದರು.
ಸಿದ್ದರಾಮೋತ್ಸವ ನನಗೆ 75 ವರ್ಷ ತುಂಬುತ್ತಿರುವ ಕಾರಣ ಸ್ನೇಹಿತರು, ಅಭಿಮಾನಿಗಳು ಸೇರಿ ಮಾಡುತ್ತಿರುವ ಕಾರ್ಯಕ್ರಮ. ನಾನು ಈವರೆಗೂ ಹುಟ್ಟಿದ ಹಬ್ಬ ಮಾಡಿಕೊಂಡಿಲ್ಲ. ಇದು ವಿಶೇಷ ಸಂದರ್ಭ ಅಂತ ನನ್ನನ್ನೂ ಒಪ್ಪಿಸಿದ್ದಾರೆ. ಇದು ಯಾವುದೇ ಅಧಿಕಾರಕ್ಕೆ ಬರುವ ಉದ್ದೇಶದಿಂದಲ್ಲ.
-ಸಿದ್ದರಾಮಯ್ಯ, ವಿಪಕ್ಷ ನಾಯಕ