ಆನೆ ದಾಳಿಗೆ ನಿನ್ನೆ ಯುವತಿ ಬಲಿ; ಇಂದೂ ಆನೆಗಳ ಹಾವಳಿ, ಗ್ರಾಮಸ್ಥರಲ್ಲಿ ಹೆಚ್ಚಾದ ಆತಂಕ!

Elephant F
Published on

ದಾವಣಗೆರೆ: ಜಿಲ್ಲೆಯ ಚನ್ನಗಿರಿಯಲ್ಲಿ ನಿನ್ನೆ ಆನೆ ದಾಳಿಗೆ ಯುವತಿಯೊಬ್ಬಳು ಬಲಿಯಾಗಿದ್ದು, ಇಂದು ಕೂಡ ಮತ್ತೆ ಆನೆಗಳು ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿನ ಆತಂಕವನ್ನು ಹೆಚ್ಚು ಮಾಡಿದೆ.

ಚನ್ನಗಿರಿ ತಾಲೂಕಿನ ತಾಲೂಕಿನ ಸೇವಾ ನಗರದ ಹೊರಭಾಗದಲ್ಲಿ ಮೂರು ಕಾಡಾನೆಗಳು ಕಾಣಿಸಿಕೊಂಡಿವೆ. ನಿನ್ನೆ ಈ ಭಾಗದಲ್ಲಿ ಯುವತಿಯೊಬ್ಬಳನ್ನು ಸಾಯಿಸಿದ್ದ ಆನೆ, ಕೆಲವರನ್ನು ಗಾಯಗೊಳಿಸಿತ್ತು. ಇಂದು ಈಗ ಮತ್ತೆ ಆನೆಗಳು ಕಾಣಿಸಿಕೊಂಡಿದ್ದು, ತೆಂಗಿನ ತೋಟಕ್ಕೆ ದಾಳಿ ಇಟ್ಟು ಬೆಳೆ ನಾಶ ಮಾಡುತ್ತಿವೆ. ಪರಿಣಾಮವಾಗಿ, ಸೇವಾ ನಗರ ಮತ್ತು ಸೂಳೆಕೆರೆ ಸುತ್ತಲಿನ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಆನೆಗಳನ್ನ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದು, ಅವುಗಳನ್ನು ಹಿಡಿಯಲು ಕಾರ್ಯಾಚರಣೆ ಆರಂಭವಾಗಿದೆ. ಕಾಡಾನೆಗಳನ್ನ ಹಿಡಿಯಲು ಅಂಬಾರಿ ಹೊರುವ ಅರ್ಜುನ ಮತ್ತು ಮಹೇಂದ್ರ ಎಂಬ ಆನೆಗಳ ಬಳಸಿಕೊಳ್ಳಲಾಗಿದೆ. ಒಟ್ಟು ನಾಲ್ಕು ಆನೆಗಳು ಸುತ್ತಮುತ್ತಲ ಭಾಗದಲ್ಲಿ ಓಡಾಡುತ್ತಿರುವ ಶಂಕೆ ಇದೆ.

ಈ ಆನೆಗಳು ಸಕಲೇಶಪುರ ಕಾಡಿನಿಂದ ಇಲ್ಲಿಗೆ ವಲಸೆ ಬಂದಿರುವ ಮಾಹಿತಿ ಇದ್ದು, ಚಿಕ್ಕನಾಯಕನಹಳ್ಳಿ ಹಾಗೂ ಹೊಸದುರ್ಗ ಮೂಲಕ ಸಾಗಿ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ದಾರಿ ತಪ್ಪಿ ಹೊಳಲ್ಕೆರೆ ಮೂಲಕ ಚಿಕ್ಕಜಾಜೂರು, ಸಂತೆಬೆನ್ನೂರು ಕಡೆಗೆ ಬಂದಿರುವ ಶಂಕೆ ಕೂಡ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net