ಸಿಐಡಿ ಮುಂದೆ ನಾಳೆ ಯಡಿಯೂರಪ್ಪ ಹಾಜರ್

ex cm B.S.Yadiyurappa
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
Published on

ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಸಿಐಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ.
ಪ್ರಕರಣ ಸಂಬಂಧ ವಿಚಾರಣೆಗೆ ಬರುವಂತೆ ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಈ ನೋಟಿಸ್‌ಗೆ ವಕೀಲರ ಮೂಲಕ ಉತ್ತರ ನೀಡಿದ್ದ ಯಡಿಯೂರಪ್ಪ, ಪಕ್ಷದ ಪೂರ್ವ ನಿಗದಿತ ಕಾರ್ಯಕ್ರಮಕ್ಕಾಗಿ ಹೊಸದಿಲ್ಲಿಗೆ ಹೋಗಿದ್ದೇನೆ. ಜೂ.೧೭ರಂದು ವಿಚಾರಣೆಗೆ ಬರುತ್ತೇನೆ ಎಂದು ಸಿಐಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ನಗರದ ಒಂದನೇ ತ್ವರಿತ ನ್ಯಾಯಾಲಯವು ಯಡಿಯೂರಪ್ಪರ ಬಂಧನಕ್ಕೆ ಜಾಮೀನುರಹಿತ ವಾರಂಟ್ ಜಾರಿ ಮಾಡಿತ್ತು. ಹೀಗಾಗಿ, ಯಡಿಯೂರಪ್ಪ ಅವರು ಬಂಧನದ ಭೀತಿಯಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಮತ್ತು ಪ್ರಕರಣದ ರದ್ದು ಕೋರಿ ಹೈಕೋರ್ಟ್‌ನ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ಯಡಿಯೂರಪ್ಪರನ್ನು ಬಂಧಿಸದಂತೆ ಸಿಐಡಿಗೆ ನಿರ್ದೇಶನ ನೀಡಿತ್ತು ಮತ್ತು ಅಧೀನ ನ್ಯಾಯಾಲಯ ಹೊರಡಿಸಿದ್ದ ಜಾಮೀನು ರಹಿತ ಬಂಧನದ ವಾರಂಟ್ ಅಮಾನತಿನಲ್ಲಿ ಇರಿಸಿತ್ತು. ಅಲ್ಲದೆ, ಜೂ.೧೭ರಂದು ಸಿಐಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿ ತನಿಖೆ ಸಹಕರಿಸಬೇಕೆಂದು ಯಡಿಯೂರಪ್ಪ ಅವರಿಗೆ ಆದೇಶಿಸಿತ್ತು. ಬಂಧನದಿಂದ ರಿಲ್ೀ ಸಿಕ್ಕ ಬೆನ್ನಲ್ಲೇ ಶನಿವಾರ ದಿಲ್ಲಿಯಿಂದ ಬೆಂಗಳೂರಿಗೆ ಮರಳಿದ್ದ ಯಡಿಯೂರಪ್ಪ, ಸೋಮವಾರ ಸಿಐಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದರು. ಅದರಂತೆ ಅವರು ಸಿಐಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲಿದ್ದು, ಪೊಲೀಸ್ ಅಧಿಕಾರಿಗಳು ವಿಚಾರಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net