ದ್ವಾದಶ ರಾಶಿಗಳ ವರ್ಷ ಭವಿಷ್ಯ: ರಾಜಗುರು ಬಿ.ಎಸ್. ದ್ವಾರಕಾನಾಥ್

Horoscope 2
Published on

ಮೇಷ

ಈ ಸಂವತ್ಸರವು ನಿಮಗೆ ಶುಭಾರಂಭವಾಗಿದ್ದು, ಏಪ್ರಿಲ್ 5ರಿಂದಲೇ ಗುರುವು ಏಕಾದಶ ಸ್ಥಾನದಲ್ಲಿ ನಿಂತು ಸುಖಸಂತೋಷ ನೀಡುವುದರಲ್ಲಿ ಸಂದೇಹವಿಲ್ಲ. ಶನಿಯು ಸ್ವಕ್ಷೇತ್ರ ದಶಮ ಸ್ಥಾನದಲ್ಲಿದ್ದು, ನ. 20ರವರೆಗೆ ಗುರುವು ಮತ್ತೆ ಮಕರಕ್ಕೆ ಬರುವುದರಿಂದ ಆ ಎರಡು ತಿಂಗಳು ಎಚ್ಚರವಾಗಿರಬೇಕು. ಮೇಷಕ್ಕೆ ಅಧಿಪತಿ ಸುಬ್ರಹ್ಮಣ್ಯ ದೇವರು. ಅವರು ಕೊಟ್ಟರೆ ವರ, ಇಟ್ಟರೆ ಶಾಪ. ಸುಬ್ರಹ್ಮಣ್ಯನನ್ನು ಪೂಜಿಸಿ. ಸಮಯ ನೋಡಿಕೊಂಡು ಸುಬ್ರಹ್ಮಣ್ಯ ಕ್ಷೇತ್ರವನ್ನು ಸಂದರ್ಶಿಸಿ. ಆರೋಗ್ಯಕ್ಕೆ ಕೊರತೆಯಿಲ್ಲ. ಸಮತೋಲನದ ಆದಾಯ. ಸೆ. 20ರಿಂದ ವಿಶೇಷ ಲಾಭ. ಭೂಮಿಯಿಂದ ಸಂಪತ್ತು ವೃದ್ಧಿಯಾಗಲಿದೆ.

ವೃಷಭ

ಲಗ್ನದಲ್ಲೇ ರಾಹುವಿದ್ದು, ಕೆಲವೊಂದು ವಿಘ್ನ, ಅಡ್ಡಿಗಳು ಬಂದು ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುತ್ತವೆ. ಹಡಗಿನಲ್ಲಿ ಪ್ರಯಾಣಿಸುವವರಿಗೆ ದಡ ಮುಟ್ಟಲು ದೈವಕೃಪೆ ಬೇಕು. ಮಧ್ಯಮ ವರ್ಗದ ಗ್ರಹಗಳು ನಿಮ್ಮ ರಾಶಿಯನ್ನು ಸುತ್ತುವರಿದಿರುವುದರಿಂದ ಜೀವನೋಪಾಯಕ್ಕೆ ಕಷ್ಟ ಕೊಡದೆ ದೇವರು ಮುನ್ನಡೆಸುತ್ತಾನೆ. ದುರ್ಗೆ, ಶಾರದೆಯನ್ನು ಪೂಜಿಸಿ. ದುರ್ಗೆಯ ಭಕ್ತಿಯಲ್ಲಿ ಲೀನವಾಗಿ ಏನನ್ನು ಬೇಕಾದರೂ ಪಡೆದುಕೊಳ್ಳಬಹುದು. ಆರೋಗ್ಯವು ಸ್ವಲ್ಪ ಕಾಲ ಹದಗೆಟ್ಟು, ಆಲಸ್ಯ ತಂದೊಡ್ಡಬಹುದು. ಭಗವದ್ ಚಿಂತನೆ ಇರಲಿ.

ಮಿಥುನ

ಮಿಥುನ ರಾಶಿಯಲ್ಲಿ ಜನಿಸಿದ ನೀವು ಅಷ್ಟಮದಲ್ಲಿ ಶನಿಯಿಂದ ಕೆಲವು ಸಂಕಟವನ್ನು, ಗುರುವಿನಿಂದ ಅಲ್ಪ ಸುಖ ಕಾಣುತ್ತೀರಿ. ಸೆಪ್ಟೆಂಬರ್​ನಲ್ಲಿ ಸ್ವಲ್ಪ ಆರೋಗ್ಯ ಕೈಕೊಟ್ಟರೂ ಪ್ರಗತಿ ಸಾಧಿಸುತ್ತೀರಿ. ಕಾರ್ತಿಕ ಮಾಸದಲ್ಲಿ ವಿಶೇಷ ಯೋಗ ಬಂದು, ಧನಲಾಭ ಕೊಟ್ಟು, ದೇವರು ಕಾಪಾಡುತ್ತಾನೆ. 2022ರ ಜನವರಿಯಲ್ಲಿ ದೊಡ್ಡದಾದ ವ್ಯಾಪಾರವು ಕೈಗೂಡಿ ನಿಮ್ಮನ್ನು ಆರ್ಥಿಕವಾಗಿ ಸದೃಢ ಮಾಡುತ್ತದೆ. ಹೊಸ ಜನ ಪರಿಚಯವಾಗಿ ಅವರಿಂದ ಅನುಕೂಲವಾಗುವ ಸಂಭವವಿದೆ. ನವೆಂಬರ್ 2021ರಲ್ಲಿ ಪ್ರಯಾಣದಲ್ಲಿ ಎಚ್ಚರ ವಹಿಸಿ. ಕುಲಪುರೋಹಿತರನ್ನು ಕಂಡು ಪವಮಾನ ಹೋಮ ಮಾಡಿಸಿ, ವಿಷ್ಣುಸಹಸ್ರನಾಮ ಪಠಿಸಿ.

ಕಟಕ

ಸಪ್ತಮ ಶನಿ, ಅಷ್ಟಮ ಗುರುವು ಚಿಂತೆ ತರುತ್ತಾನೆ. ಜಲರಾಶಿ ಯವರಾದ ನೀವು ಯಾವುದಕ್ಕೂ ಚಿಂತೆ ಮಾಡುವುದು ಸೂಕ್ತವಲ್ಲ. ಯಾವುದೇ ಮನುಷ್ಯನು ಪ್ರಾತಃಕಾಲದಲ್ಲಿ ಸ್ನಾನಮಾಡಿದರೆ ಶಕ್ತಿಯು ಜಾಗೃತವಾಗಿ ಮುನ್ನಡೆಸುತ್ತದೆ. ಮನಸ್ಸಿನಲ್ಲಿ ದೃಢ ಸಂಕಲ್ಪವಿರಲಿ. ಕೂಲಂಕಷವಾಗಿ ಯೋಚಿಸಿ ನಿರ್ಧಾರಕ್ಕೆ ಬನ್ನಿ. ಅನ್ಯರು ನಿಮ್ಮ ಮೇಲೆ ಹಿಡಿತ ಸಾಧಿಸಬಾರದು. ಆರೋಗ್ಯದ ವಿಚಾರದಲ್ಲಿ ಸಮತೋಲನ ಕಾಪಾಡಿಕೊಳ್ಳಿ. ಸೆಪ್ಟೆಂಬರ್​ನಿಂದ ನವೆಂಬರ್​ವರೆಗೆ ಗುರುವು ಮಕರಕ್ಕೆ ಬಂದು ಮತ್ತೆ ನಿಮ್ಮನ್ನು ಸದೃಢವಾಗಿ ನಿಲ್ಲಿಸುತ್ತಾನೆ. ಶಿವನು ಗಂಗೆಯನ್ನು ತಲೆಯ ಮೇಲೆ ಧರಿಸಿದ್ದಾನೆ. ‘ಸರ್ವ ಔಷಧಂ ಗಂಗಾಜಲಂ’ ಎಂಬಂತೆ ಶಿವಧ್ಯಾನದಲ್ಲಿ ಆಸಕ್ತರಾಗಿ ಸುಖ, ಲಾಭ ಕಾಣಬಹುದು.

ಸಿಂಹ

ಆರನೇ ಮನೆಯ ಶನಿ, ಏಳನೇ ಮನೆಯ ಗುರು, ನೀವು ಬಯಸಿದ್ದನ್ನೆಲ್ಲ ಕೊಡುತ್ತಾರೆ. ಜೀವನವು ಉತ್ತಮ ಮಟ್ಟದಲ್ಲಿ ಸಾಗಿ ಧನ, ಕೀರ್ತಿ ಸಂಪಾದಿಸಲು ಅನುವು ಮಾಡಿಕೊಡುತ್ತದೆ. ಉದ್ಯೋಗದಲ್ಲಿ ವರ್ಗಾವಣೆ ಆಗಬಹುದು. ಅದಕ್ಕಾಗಿ ಚಿಂತಿಸಬೇಡಿ. ಖರ್ಚುವೆಚ್ಚವನ್ನು ಸಮತೋಲನ ಮಾಡಲು ಕೊಲ್ಹಾಪುರದ ಮಹಾಲಕ್ಷ್ಮಿಯನ್ನು ಪೂಜಿಸಿ. ಸಿಂಹ ರಾಶಿಯಲ್ಲಿ ಜನಿಸಿದವರು ಹಲವು ತಾಪಗಳಿಗೆ ಒಳಗಾಗುತ್ತಾರೆ. ಆದರೆ ಶರೀರವನ್ನು ಸದೃಢವಾಗಿಟ್ಟುಕೊಂಡು ಬೇಕಾದ್ದನ್ನು ಪಡೆಯಬಹುದು. ಧನಯೋಗವು ಚೆನ್ನಾಗಿದೆ. ಗ್ರಹಗಳು ಒಳ್ಳೆಯದನ್ನೆ ಮಾಡುತ್ತವೆ. ಕುಂಭಕೋಣಂ ಹತ್ತಿರ ಇರುವ ಸ್ವಾಮಿಮಲೈನ ಸುಬ್ರಹ್ಮಣ್ಯನನ್ನು ದರ್ಶಿಸಿ, ಭಸ್ಮಾಭಿಷೇಕ ಮಾಡಿಸಿ. ಪರಮೇಶ್ವರನು ನಿಮ್ಮನ್ನು ಶುಭಪ್ರದವಾಗಿಟ್ಟು ಕಾಪಾಡುತ್ತಾನೆ.

ಕನ್ಯಾ

ಅಸ್ಥಿರ ಮನಸ್ಸೇ ಕನ್ಯಾ ರಾಶಿಯವರಿಗೆ ದುಃಖಕ್ಕೆ ಕಾರಣ ವಾಗುತ್ತದೆ. ಸದೃಢವಾದ ಮನಸ್ಸಿದ್ದರೆ ಏನನ್ನಾದರೂ ಸಾಧಿಸಬಹುದು. ಪಂಚಮ ಶನಿಯಿಂದ ಹಣಕ್ಕೆ ಕೊರತೆಯಾಗಿ, ಸಾಲ ಪಡೆದರೆ ತಕ್ಷಣಕ್ಕೆ ತೀರಿಸಲು ಸಾಧ್ಯವಾಗದ ಸಂದರ್ಭಕ್ಕೆ ಸಿಲುಕಿಕೊಳ್ಳುತ್ತೀರಿ. ಈ ಸಂವತ್ಸರವು ನಿರಾಶಾದಾಯಕವಲ್ಲ. ಆದರೆ ಗ್ರಹಗಳ ಸ್ಥಾನದಿಂದ ವಿಶೇಷ ಕೀರ್ತಿ, ಫಲ ದೊರೆಯುವುದಿಲ್ಲ. ನಂಜನಗೂಡಿನ ಶ್ರೀಕಂಠೇಶ್ವರನನ್ನು ಪ್ರಾರ್ಥಿಸಿ, ನಿಮ್ಮ ಕೆಟ್ಟ ಗ್ರಹಗಳ ಸಮಯವನ್ನು ದಾಟುತ್ತೀರಿ. ನವೆಂಬರ್ 20ರಿಂದ ಮತ್ತೆ ಗುರುವು ಆರನೇ ಮನೆಗೆ ಬಂದು ಸ್ವಲ್ಪ ಬೇಸರ ತರುತ್ತಾನೆ. ‘ಮನೋಧೈರ್ಯಂ ಮಾಂಡವೀಯಂ’ ಎಂಬಂತೆ ಶ್ರೀರಾಮ ಸಹಸ್ರನಾಮ ಪಾರಾಯಣ ಮಾಡಿದರೆ ನೆಮ್ಮದಿ, ಶಾಂತಿ ಕಾಣುತ್ತೀರಿ.

ತುಲಾ

ತಕ್ಕಡಿಯಲ್ಲಿ ತೂಗಬೇಕಾದರೆ ಅಳತೆಗೆ ಸಾಕಾಗುವಷ್ಟು ಸಾಮಗ್ರಿ ಇರಬೇಕು, ಮನಸ್ಸಿಗೆ ಬಂದಿದ್ದನ್ನು ತಕ್ಕಡಿಯಲ್ಲಿ ತೂಗಿ ನಿರ್ಣಯ ಮಾಡುವ ಕಾಲವಲ್ಲ. ರಾಶ್ಯಾಧಿಪತಿ ಶುಕ್ರನು ಮೇ 4ರಂದು ವೃಷಭಕ್ಕೆ ಬಂದು ನಿಮ್ಮನ್ನು ತಿದ್ದಿ, ಶುದ್ಧ ಗಾಳಿ, ಬೆಳಕನ್ನು ನೀಡಿ ಆರ್ಥಿಕವಾಗಿ ಮುನ್ನಡೆಸುತ್ತಾನೆ. ಶರೀರದ ಮೇಲೆ ದುರಭಿಮಾನವಿರಬಾರದು. ಶರೀರವು ಪವಿತ್ರವಾದ ದೇವಸ್ಥಾನವಿದ್ದಂತೆ. ದೇವರನ್ನು ಕಾಣಲು ಸಂಕಲ್ಪ ಮಾಡಿದರೆ ಸಾಧನೆಯಾಗುತ್ತದೆ. ನ್ಯಾಯಾಂಗ ವಿಚಾರದಲ್ಲಿ ತೀರ್ಪು ನಿಮ್ಮಂತೆ ಬಂದು, ಮನಃಶಾಂತಿ ಕೊಡುತ್ತದೆ. ಚಾಮುಂಡೇಶ್ವರಿ, ಶಾರದೆಯನ್ನು ನಿತ್ಯ ಪೂಜಿಸಿ.

ವೃಶ್ಚಿಕ

ಲಗ್ನದಲ್ಲಿ ಕೇತುವಿದ್ದು, ನಿಮ್ಮ ನಾಲಗೆಯ ಹತೋಟಿಯನ್ನು ತಪ್ಪಿಸುತ್ತಾನೆ. ಈ ರಾಶಿಯಲ್ಲಿ ಜನಿಸಿದವರು ಸ್ಥಿರ ಮನಸ್ಸನ್ನು, ಗೌಪ್ಯವನ್ನು ಕಾಪಾಡಿಕೊಂಡು ವ್ಯವಹರಿಸಿದರೆ ಒಳಿತು. ನಿಮ್ಮ ರಾಶಿಯಲ್ಲಿ ಕೇತುಗ್ರಹವಿರುವುದರಿಂದ ಸರ್ಕಾರಿ ಕೆಲಸದಲ್ಲಿ ಹೊಂದಿಕೊಂಡು ಕೆಲಸ ಮಾಡಿ. ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೇರುತ್ತೀರಿ. ರೈತಾಪಿ ವರ್ಗದವರಿಗೆ ಹೆಚ್ಚು ಪರಿಶ್ರಮ, ಧನ, ಸುಖ ಬಂದು ಸೇರುತ್ತದೆ. ಗುರುಶಾಂತಿಯನ್ನು ಮಾಡಿಸಿ. ದುರ್ಗಾರಾಧನೆ, ದುರ್ಗಾದೀಪ ನಮಸ್ಕಾರ, ‘ದುಂ ದುರ್ಗಾಯೈ ನಮಃ’ ಎಂಬ ಮಂತ್ರವನ್ನು ದಿನವೂ ಪಠಿಸಿದರೆ ಬೇಕಾದ ಧನವು ಬಂದು ಸೇರಿ ಅನುಕೂಲವಾಗುತ್ತದೆ.

ಧನು

ಈ ರಾಶಿಯಲ್ಲಿ ಹುಟ್ಟಿದವರು ದ್ವಂದ್ವ ಸ್ವಭಾವದವರು. ಇನ್ನೂ ಸಾಡೆಸಾತಿ ಶನಿ ನಡೆಯುತ್ತಿದ್ದು, ಷಷ್ಠದಲ್ಲಿ ರಾಹುವಿದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಿದೆ. ನರದೌರ್ಬಲ್ಯ, ಸ್ನಾಯುಸೆಳೆತಗಳ ಬಾಧೆಯಿಂದ ಖಿನ್ನರಾಗಿ ದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಕಷ್ಟವಾಗಬಹುದು. ಅನವಶ್ಯಕ ಪರಸ್ಪರ ಮಾತಿನಿಂದ ಎದುರಾಳಿಗಳು ನಿಮ್ಮನ್ನು ದೂಷಿಸಬಹುದು. ಎಲ್ಲದಕ್ಕೂ ಮೌನವೇ ಉತ್ತರವಾಗಿರಲಿ. ಗುರು ರಾಶಿಯವರಾದ ನೀವು ಗುರುವನ್ನು ಆರಾಧಿಸಿ. ಕಷ್ಟಕ್ಕೆ ಪರಿಹಾರ ಸಿಗುತ್ತದೆ. ರಾಹು ಕೇತುವಿಗೆ ಸುಬ್ರಹ್ಮಣ್ಯನನ್ನು, ದತ್ತನನ್ನು ಅಗತ್ಯವಾಗಿ ಪ್ರಾರ್ಥಿಸಿ. ಕಡಲೆಬೇಳೆ, ಬೆಲ್ಲವನ್ನು ದಾನ ಕೊಟ್ಟು ಮನೋಚಿಂತಿತ ಕಾರ್ಯವನ್ನು ಸಾಧ್ಯವಾಗಿಸಿಕೊಳ್ಳಿ.

ಮಕರ

ಮಕರ ರಾಶಿಯಲ್ಲಿ ಶನಿಯಿದ್ದು, ಎರಡನೇ ಮನೆಯ ಗುರು ನಿಮ್ಮನ್ನು ಲಾಭಕ್ಕೆ ಕೊಂಡೊಯ್ಯುತ್ತಾನೆ. ಮನೆಯಲ್ಲಿ ಅಶಾಂತಿ ನೆಲೆಸುವ ಸಾಧ್ಯತೆಯಿದೆ, ಎಚ್ಚರ ತಪ್ಪಿದರೆ ವಾಹನದಿಂದ ಅಪಘಾತ ಸಂಭವಿಸುವ ಅಪಾಯವಿದೆ. ರಾಶಿಯಲ್ಲಿ ಶನಿ ಇರುವುದರಿಂದ ದುಃಖವು ಒಮ್ಮೆಲೇ ಬಂದು ಹಣದ ಮುಗ್ಗಟ್ಟು ಉಂಟಾಗಿ ಚಿಂತೆಗೊಳಗಾಗುತ್ತೀರಿ. ಮನಸ್ಸಿಗೆ ಅಶಾಂತಿಯಾದಾಗ ಮನುಷ್ಯನಿಗೆ ರೋಗವು ಬಂದೊದಗುತ್ತದೆ. ಯಾವುದೂ ನಿಮ್ಮ ಸ್ವಂತ ತೀರ್ಮಾನಕ್ಕೆ ಬರದೇ ಇದ್ದಾಗ 2ನೇ ಮನೆಯ ಗುರುವು ಸಂಯಮ, ತಾಳ್ಮೆಯಿಂದ ವರ್ತಿಸಿದರೆ, ಸಾಡೆಸಾತಿಯಿದ್ದರೂ ಎಲ್ಲ ಸುಖ ಕಾಣಬಹುದು.

ಕುಂಭ

ದ್ವಾದಶ ಶನಿ ಸಂಚಾರದಲ್ಲಿದ್ದು, ಚತುರ್ಥ ರಾಹು, ದಶಮ ಕೇತು ಜತೆಯಲ್ಲಿ ಸಾಡೆಸಾತಿ ಶನಿ ಇರುವುದರಿಂದ ಸಾಲದ ಬಾಧೆ ಹೆಚ್ಚಾಗಿ ಯಾವ ಕಾರ್ಯಗಳಲ್ಲೂ ಹಾನಿ ಉಂಟು ಮಾಡಿಕೊಳ್ಳದೆ ನೀವು ಸಾಗಬೇಕು. ಜನ್ಮ ಗುರು ನಿಮ್ಮ ಜಂಘಾಬಲವನ್ನು ಉಡುಗಿಸಿ ಬಿಡುತ್ತದೆ. ದೈವಕ್ಕೆ ಮೊರೆ ಹೋಗಲೇಬೇಕು. ಪ್ರತಿ ಮಾಸದ ಶುದ್ಧ ಚತುರ್ಥಿಯಂದು ಅನಂತಪದ್ಮನಾಭ ವ್ಯಾಖ್ಯಾನ ಓದಿ. ಅನನ್ಯವಾಗಿ ದತ್ತ ಸಹಸ್ರನಾಮ ಪಾರಾಯಣ ಮಾಡಿ, ದುಃಖವನ್ನು ನೀಗಿಸಿಕೊಳ್ಳಿ. ಕೆಲಸವು ನಿರ್ವಿಘ್ನವಾಗಿ ನಡೆಯುವುದಕ್ಕೆ ಇಡಗುಂಜಿ ಗಣೇಶನನ್ನು ಪೂಜಿಸಿ.

ಮೀನ

ಮೀನರಾಶಿ ಅಧಿಪತಿಯು 12ಕ್ಕೆ ಬಂದು ನಿಮ್ಮ ನೆಮ್ಮದಿ, ಶಾಂತಿಯನ್ನು ಕದಡುತ್ತಾನೆ. ಆದರೆ ಏಕಾದಶ ಶನಿಯಿಂದ ಪಡೆಯಬೇಕಾದ್ದು ಬಹಳವಿದೆ. 12ರ ಗುರುವಿನಿಂದ ಮನೆಯಲ್ಲಿ ಹೆಂಡತಿ, ಮಕ್ಕಳ ನೆಮ್ಮದಿ ಕೆಡಿಸಿಕೊಳ್ಳಬೇಡಿ. ನಿತ್ಯವೂ ಶಿವನ ದಾರಿದ್ರ್ಯದಹನ ಸ್ತೋತ್ರ ಪಠಿಸಿ. ಕನಕಧಾರಾ ಸ್ತೋತ್ರ ಪಠಿಸಿ. ಆರೋಗ್ಯ ಕೆಟ್ಟರೆ ಔಷಧಿಯೇ ಮದ್ದಲ್ಲ. ಮನಸ್ಸನ್ನು ದೃಢವಾಗಿಟ್ಟುಕೊಂಡು ಪ್ರಾತಃಕಾಲದಲ್ಲಿ ಧ್ಯಾನ-ಧಾರಣವನ್ನು ಮರೆಯದಿರಿ. ಕಾರ್ಖಾನೆ, ಸ್ವಂತ ಉದ್ಯಮ ನಡೆಸುವವರಿಗೆ ಕಷ್ಟಕಾಲ. ವೈದ್ಯರು, ನ್ಯಾಯಾಧೀಶರಿಗೆ ಕೀರ್ತಿ ಬರುವ ಕಾಲ. ರಾಜಕೀಯ ವ್ಯಕ್ತಿಗಳಿಗೆ ವಿಶೇಷವಾದ ಯೋಗ ಬಂದು ಉಚ್ಚ ಸ್ಥಾನಕ್ಕೇರುತ್ತಾರೆ. ಉದ್ಯೋಗದಲ್ಲಿ ಮುಂಬಡ್ತಿ ಸಿಕ್ಕಿ, ನೀವು ಇರುವ ಜಾಗದಿಂದ ಪಲ್ಲಟವಾಗುತ್ತೀರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net