

ಬೆಂಗಳೂರು: ಬಿಜೆಪಿಯ ಆಂತರಿಕ ವಿಚಾರಗಳನ್ನು ನಾನು ಏಕೆ ಮಾತನಾಡಲಿ? ಅವರ ಪಕ್ಷದ ಮುತ್ತು ರತ್ನಗಳನ್ನು ಇಟ್ಟುಕೊಳ್ಳಲಿ ಅಥವಾ ಆಚೆಯಾದರೂ ಬಿಸಾಡಲಿ ಡಿಸಿಎಂ DK ಶಿವಕುಮಾರ್ ಎಂದು ಕುಟುಕಿದರು.
ವಿಧಾನಸೌಧದ ಆವರಣಲ್ಲಿ ಬುಧವಾರ ಸಂಜೆ ಮಾತನಾಡಿದರು. ಯತ್ನಾಳ್ ಅವರು ನಮ್ಮಲ್ಲಿ ಇದ್ದಿದ್ದರೆ ಇಷ್ಟೊತ್ತಿಗಾಗಲೇ ನಾನು ಪಕ್ಷದಿಂದ ಉಚ್ಚಾಟನೆ ಮಾಡುತ್ತಿದ್ದೆ ಎನ್ನುವ ಹಿಂದಿನ ಹೇಳಿಕೆ ಬಗ್ಗೆ ಕೇಳಿದಾಗ, "ಒಂದಷ್ಟು ಜನ ಶೋಭೆಗೆ ಎಂದು ಓಲೆ, ಮೂಗುತಿ, ಹಣೆಗೆ ಕುಂಕುಮ ಇಟ್ಟುಕೊಳ್ಳುತ್ತಾರೆ. ಅದೇ ರೀತಿ ಒಂದಷ್ಟು ಜನ ಪಕ್ಷದಲ್ಲಿ ಇದ್ದರೆ ಒಳ್ಳೆಯದು" ಎಂದು ಮಾರ್ಮಿಕವಾಗಿ ನುಡಿದರು.
ಕುಮಾರಸ್ವಾಮಿ ಹಾಗೂ ದೇವೇಗೌಡರನ್ನು ಸತೀಶ್ ಜಾರಕಿಹೊಳಿ ಅವರು ಭೇಟಿ ಮಾಡಿರುವ ಬಗ್ಗೆ ಕೇಳಿದಾಗ, "ನಾನು ಕಾಂಗ್ರೆಸ್ ಪಕ್ಷದ ವಕ್ತಾರ. ಕುಮಾರಸ್ವಾಮಿ ಹಾಗೂ ಸತೀಶ್ ಜಾರಕಿಹೊಳಿ ಅವರ ಬಳಿ ಈ ಬಗ್ಗೆ ಚರ್ಚೆ ಮಾಡಿದರೆ ಒಳ್ಳೆಯದು. ದೇಶ, ರಾಜ್ಯ, ವೈಯಕ್ತಿಕ ವಿಚಾರಗಳಿಗೆ ಭೇಟಿಯಾಗಿದ್ದರೋ ತಿಳಿದಿಲ್ಲ. ಇದರ ಬಗ್ಗೆ ಅವರನ್ನೇ ಕೇಳಿದರೆ ಬಹಳ ಉತ್ತಮ" ಎಂದರು.
ಕೋವಿಡ್ ಸಮಯದಲ್ಲಿ ನಡೆದಿದ್ದ ಚಾಮರಾಜನಗರ ಆಕ್ಸಿಜನ್ ದುರಂತದ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎ. ಪಾಟೀಲ್ ಏಕಸದಸ್ಯ ನ್ಯಾಯಾಂಗ ಆಯೋಗ ನೀಡಿದ್ದ ವರದಿಯನ್ನು ತಿರಸ್ಕರಿಸಿ ನ್ಯಾ.ಕುನ್ಹಾ ಅವರಿಗೆ ಮರು ತನಿಖೆಯ ಜವಾಬ್ದಾರಿ ನೀಡಲಾಗಿದೆ" ಎಂದರು.
"ಚಾಮರಾಜನಗರ ದುರಂತ ನಡೆದ ವೇಳೆ ನಾನು ಹಾಗೂ ಸಿದ್ದರಾಮಯ್ಯ ಅವರು ಸ್ಥಳಕ್ಕೆ ತೆರಳಿ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದ್ದೆವು. ಮೃತರ ಕುಟುಂಬವರ್ಗದವರನ್ನು ಸಹ ಭೇಟಿ ಮಾಡಲಾಗಿತ್ತು. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅವರು ಯಾರ್ಯಾರ ತಪ್ಪಿದೆ ಎಂದು ಹೇಳಿದ್ದರು" ಎಂದರು.
ವರದಿಯಲ್ಲಿ ಕುನ್ಹಾ ಅವರು ಹೆಸರಿಸಿರುವ ಹಿಂದಿನ ಆರೋಗ್ಯ ಸಚಿವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆಯೇ ಎಂದು ಕೇಳಿದಾಗ, "ಕೋವಿಡ್ ಅಕ್ರಮಗಳ ಬಗ್ಗೆ ಮೈಕೆಲ್ ಕುನ್ಹಾ ಅವರು ಅತ್ಯಂತ ಸಮಗ್ರವಾಗಿ ವರದಿಯನ್ನು ನೀಡಿದ್ದಾರೆ. ಅದನ್ನು ಕೂಲಂಕುಷವಾಗಿ ಅಧ್ಯಯನ ಮಾಡಬೇಕಾಗುತ್ತದೆ. ಇದರಲ್ಲಿ ಕಾನೂನು ಸಂಬಂಧಿತ, ಕ್ರಿಮಿನಲ್ ಸಂಬಂಧಿತ ವಿಚಾರಗಳನ್ನು ಗಮನಿಸಲು ಸಹಾಯ ತೆಗೆದುಕೊಳ್ಳಲಾಗುತ್ತಿದೆ" ಎಂದರು.
"ಸುಮಾರು 29 ಜನ ಅಧಿಕಾರಿಗಳು ಸಮಿತಿ ನೀಡಿರುವ ನೋಟಿಸ್ ಗೆ ಉತ್ತರ ನೀಡಿಲ್ಲ. ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು. ಕುನ್ಹಾ ಅವರು ವರದಿಯಲ್ಲಿ ಅನೇಕ ರಾಜಕಾರಣಿಗಳ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಇದರ ಬಗ್ಗೆ ನಮಗೂ ಅರಿವಿದೆ. ಸೂಕ್ತಕಾಲದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಹೇಳಿದರು.