ಯತ್ನಾಳ್ ವಿರುದ್ದ ಹರಿಹಾಯ್ದ ಹರತಾಳು ಹಾಲಪ್ಪ

Published on

ಬೆಂಗಳೂರು:
ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ದ ಕಂಡಕಂಡಲ್ಲಿ ಮಾತನಾಡುವುದನ್ನು ಹಿರಿಯ ನಾಯಕರಾದ ಬಸನಗೌಡ ಯತ್ನಾಳ್ ಮತ್ತು ಅವರ ಸಂಗಡಿಗರು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಹೈಕಮಾಂಡ್‌ಗೆ ದೂರು ನೀಡಬೇಕಾಗುತ್ತದೆ ಎಂದು ಮಾಜಿ ಸಚಿವ ಮತ್ತು ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯರಂಥ ದೊಡ್ಡ ನಾಯಕರನ್ನು ತುದಿಗಾಲ ಮೇಲೆ ನಿಲ್ಲಿಸಿದ ಶಕ್ತಿ ವಿಜಯೇಂದ್ರ ಅವರದ್ದು ಎನ್ನುವುದನ್ನು ಹಿರಿಯ ನಾಯಕರು ಅರ್ಥ ಮಾಡಿಕೊಂಡು ಕಿರಿ ಕಿರಿ ಮಾಡುವುದನ್ನು ಬಿಡಬೇಕು ಎಂದು ಮನವಿ ಮಾಡಿದರು.
ಅನುಭವ ಇಲ್ಲ, ಚಿಕ್ಕವರು, ಯಡಿಯೂರಪ್ಪ ಅವರ ಮಗ ಎಂಬ ಕಾರಣಕ್ಕೆ ಒಪ್ಪುವುದಿಲ್ಲ ಎನ್ನುತ್ತಾರೆ. ಬಿಜಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ, ನರೇಂದ್ರ ಮೋದಿ ಅವರು ನಿರ್ಣಯಿಸಿ ವಿಜಯೇಂದ್ರ ಅವರಿಗೆ ನೇಮಕ ಮಾಡಿವುದನ್ನು ಇವರು ಒಪ್ಪುವುದಿಲ್ಲ ಎಂದರೆ ಹೇಗೆ? ಭಿನ್ನಾಭಿಪ್ರಾಯ ಇದ್ದರೆ ದೆಹಲಿಗೆ ಹೋಗಿ ಹೈಕಮಾಂಡನ್ನು ಭೇಟಿ ಮಾಡಿ ಸಲಹೆ, ಸೂಚನೆ ಕೊಡಬೇಕು. ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ರಸ್ತೆಯಲ್ಲಿ, ಹೋದಲ್ಲಿ ಬಂದಲ್ಲಿ ಯಾವ್ಯಾವುದೋ ಸಭೆಗೆ ಹೋದಲ್ಲಿ ಮಾತನಾಡುವುದು ಸರಿಯಲ್ಲ. ಈಶ್ವರಪ್ಪ ಅವರನ್ನು ಪಕ್ಷವು ಉಚ್ಚಾಟಿಸಿದೆ. ಬಿಜೆಪಿಯಲ್ಲಿ ಇದ್ದುಕೊಂಡು ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳುತ್ತಾರೆ. ಇದೆಲ್ಲವೂ ಪಕ್ಷಕ್ಕೆ ಮುಜುಗರ ತರುವ ಮತ್ತು ವಿಜಯೇಂದ್ರ ಅವರಿಗೆ ಮಾನಸಿಕ ಕಿರಿಕಿರಿ ಉಂಟು ಮಾಡುವ ಉದ್ದೇಶ ಯತ್ನಾಳರದ್ದಾಗಿದೆ ಎಂದು ವಾಗ್ದಾಳಿ ನಡೆಸಿದರು.
42-44 ವರ್ಷದ ಎ.ಕೆ.ಸುಬ್ಬಯ್ಯನವರು ಅಧ್ಯಕ್ಷರಾಗಿದ್ದರು. ಯಡಿಯೂರಪ್ಪನವರು ಅಧ್ಯಕ್ಷರಾದಾಗ ಅವರಿಗೆ 48 ವರ್ಷ. ಈಗ ವಿಜಯೇಂದ್ರರಿಗೆ 49 ವರ್ಷ. ಯತ್ನಾಳರು ಕೇಂದ್ರ ಸಚಿವರಾದಾಗ 40 ವರ್ಷದ ಆಜು ಬಾಜಿನಲ್ಲಿದ್ದರು. ಒಂದು ಸಾರಿ ತಾವೇನು ಎಂದು ತಮ್ಮ ಬಗ್ಗೆ ಯೋಚಿಸುವುದಿಲ್ಲ ಎಂದರು.

ಅಭೂತಪೂರ್ವ ಹೋರಾಟ:
ವಿಜಯೇಂದ್ರರು ರಾಜ್ಯಾಧ್ಯಕ್ಷರಾದ ಮೇಲೆ ಹಿರಿಯರ ಸಲಹೆ, ಮಾರ್ಗದರ್ಶನ ಪಡೆದು ಹೈಕಮಾಂಡಿನ ಮಾರ್ಗದರ್ಶನ- ಸಲಹೆ ಪಡೆದು ಪಕ್ಷ ಸಂಘಟಿಸಿದ್ದಾರೆ. ಸರ್ಕಾರವನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದಾರೆ. ಮೂಡಾ ಹಗರಣದಲ್ಲಿ ನಡೆಸಿದ ಪಾದಯಾತ್ರೆ ಅಭೂತಪೂರ್ವ ಹೋರಾಟವಾಗಿತ್ತು. ಹಗಲು ರಾತ್ರಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೇನು ಬೇಕು? ಇವರಿಗೆ ಎಂದು ಕೇಳಿದರು.

ಮಂತ್ರಿಯಾದಾಗ ತಾವು ಕಿರಿಯರಿರಲಿಲ್ಲವೇ?
ನಳಿನ್ ಕುಮಾರ್ ಕಟೀಲ್ ಅವರು 52-53 ವರ್ಷವಿದ್ದಾಗ ಅಧ್ಯಕ್ಷರಾದರು. ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಗೋವಾದ ಸಿಎಂ ಸಾವಂತ್ ಅಧ್ಯಕ್ಷರಾಗಿದ್ದಾಗ 45 ವರ್ಷ ಆಗಿತ್ತು. ತ್ರಿಪುರದಲ್ಲಿ 42 ವರ್ಷದ ವಿಪ್ಲವಕುಮಾರ್ ಸಿಎಂ ಆಗಿದ್ದರು. ಇದನ್ನು ಅರ್ಥ ಮಾಡಿಕೊಳ್ಳಬೇಕು. ತಾವು ಕಿರಿಯ ಪ್ರಾಯದಲ್ಲಿ ಕೇಂದ್ರ ಸಚಿವರಾಗಿದ್ದು ಮರೆತುಹೋಯಿತೇ ಎಂದು ಪ್ರಶ್ನಿಸಿದರು.

ನಾವು ರಸ್ತೆಯಲ್ಲಿಯೇ ಉತ್ತರಿಸಬೇಕಾಗುತ್ತೆ:
ಯತ್ನಾಳ್ ಅವರಿಗೆ 60-62 ವರ್ಷವಾಗಿದೆ. ಅವರು ಈ ರೀತಿಯ ನಡವಳಿಕೆ ಸರಿಯಲ್ಲ ಎಂದು ನಾವೂ ಹೇಳಬೇಕಿದೆ. ಲಿಂಬಾವಳಿಯವರೂ ವೆಲ್ ವಿಷರ್ ಇದ್ದರು. ಅವರು ಯಾವ ವಯಸ್ಸಿನಲ್ಲಿ ಎಷ್ಟು ಬಾರಿ ಪ್ರಧಾನ ಕಾರ್ಯದರ್ಶಿ ಆಗಿದ್ದರು? ಅವರು ಕಟ್ಟಿದ ಕಚೇರಿಗೆ ಬಂದು ಸಲಹೆ ಸೂಚನೆ ಕೊಡಲಿ. ಯಡಿಯೂರಪ್ಪ, ಅನಂತಕುಮಾರರ ಜೊತೆ ಕಚೇರಿ, ಪಕ್ಷ ಕಟ್ಟಿಲ್ಲವೇ? ಎಬಿವಿಪಿಯಲ್ಲೂ ಇದ್ದವರು. ಈಗ್ಯಾಕೆ ಹಾಗೆ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಇವರು ಬೀದಿಯಲ್ಲಿ ಪ್ರಶ್ನಿಸಿದರೆ, ನಾವು ರಸ್ತೆಯಲ್ಲಿಯೇ ನಿಂತು ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುಳ್ಳು ಬಾಂಬ್ ನಿಲ್ಲಿಸಲಿ:
ಸಿಎಂ ಆಗಲು ಒಂದು ಸಾವಿರ ಕೋಟಿ ಇಟ್ಕೊಂಡಿದ್ದಾರೆ ಎಂದೆಲ್ಲ ಸುಳ್ಳು ಬಾಂಬ್ ಹಾಕುತ್ತಾರೆ. ಇದರಿಂದ ಪಕ್ಷದ ಕಾರ್ಯಕರ್ತರಿಗೆ ಇರಿಸುಮುರಿಸು ಆಗುತ್ತದೆ. ಈಶ್ವರಪ್ಪ ಅವರ ಜೊತೆ ಖಾಸಗಿ ಕಾರ್ಯಕ್ರಮದಲ್ಲೂ ಬಾಂಬ್ ಹಾಕಿ ಹೋಗಿದ್ದಾರೆ. ಅಲ್ಲಲ್ಲಿ ಪಟಾಕಿ, ಪಟಾಕಿ ಬಾಂಬ್ ಹಚ್ಚುವುದನ್ನು ನಿಲ್ಲಿಸಬೇಕು. ಯತ್ನಾಳ್ ಮತ್ತು ಜೊತೆಗಿರುವವರು ಹಿರಿಯರು. ಅನುಭವಿಗಳು. ಕಂಡಲ್ಲಿ ಗುಂಡು ಹೊಡೆದು ಅಭಾಸಕ್ಕೆ ಕಾರಣ ಆಗಬಾರದು ಎಂದರು.
ರಾಜ್ಯ ವಕ್ತಾರ ಡಾ.ನರೇಂದ್ರ ರಂಗಪ್ಪ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net