

ಕಿರುವಾರ ಎಸ್.ಸುದರ್ಶನ್ ಕೋಲಾರ
ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಸಮೀಪದ ಮಾರ್ಕಂಡೇಯ ನದಿ ನೀರು ತಮಿಳುನಾಡಿಗೆ ಹರಿದು ವ್ಯರ್ಥವಾಗುವುದನ್ನು ತಡೆದು ಬಂಗಾರಪೇಟೆ ಪಟ್ಟಣ, ಕೋಲಾರ ನಗರ ಸೇರಿ 45 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯರಗೋಳ್ ಡ್ಯಾಂ ಯೋಜನೆಯು ಹಳ್ಳಹಿಡಿಯುತ್ತಿದ್ದು, ಅಸಮರ್ಪಕ ಪೈಪ್ಲೈನ್ ಕಾಮಗಾರಿಯಿಂದ ಎಲ್ಲೆಂದರಲ್ಲಿ ಯೋಜನೆಯ ನೀರು ಪೋಲಾಗುತ್ತಿದೆ.
ಡ್ಯಾಂ ನಿರ್ಮಾಣಕ್ಕೂ ಮೊದಲೇ ಪೈಪ್ಲೈನ್ ಕಾಮಗಾರಿ:
ಡ್ಯಾಂ ನಿರ್ಮಾಣಕ್ಕೂ ಮೊದಲೇ ಪೈಪ್ಲೈನ್ ಅಳವಡಿಸಿದ್ದ ಪರಿಣಾಮ ಸುಮಾರು ಕಡೆ ಪೈಪ್ಲೈನ್ಗಳಿಗೆ ಹಾನಿಯಾಗಿವೆ. ಇದರಿಂದ ಬಂಗಾರಪೇಟೆ ಹೊರತು ಪಡಿಸಿದರೆ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಕೋಲಾರ ನಗರದಲ್ಲಿ ಪೈಪ್ಲೈನ್ ಕಾಮಗಾರಿ ಪರಿಶೀಲನೆ ಜವಾಬ್ದಾರಿ ವಹಿಸಿಕೊಂಡಿರುವ ನಗರ ಕುಡಿಯುವ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳು ನೀರು ಪೋಲಾಗುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿಲ್ಲ. ಕೋಲಾರದಲ್ಲಿನ ಓವರ್ ಹೆಡ್ ಟ್ಯಾಂಕ್ಗಳಿಗೆ ನೀರು ತುಂಬಿಸಿ ಪೈಪ್ಲೈನ್ ಮೂಲಕ ಮನೆಗಳಿಗೆ ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದೆಯಾದರೂ ನಗರದಲ್ಲಿ ಈಗಾಗಲೇ ಅಳವಡಿಸಿರುವ ಪೈಪ್ಲೈಪ್ ಬಹುತೇಕ ಕಡೆ ಹಾನಿಯಾಗಿದೆ. ಯರಗೋಳ್ ಯೋಜನೆಯಡಿ ಆಯ್ದ ಭಾಗಗಳಲ್ಲಿ ಪೈಪ್ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಇದರ ಜತೆಗೆ ನಗರದಲ್ಲಿ ಒಟ್ಟು 9 ಓವರ್ ಹೆಡ್ ಟ್ಯಾಂಕ್ಮೂಲಕ ನೀರು ಹರಿಸಲು ಕ್ರಮವಹಿಸಿದ್ದು, 6 ಟ್ಯಾಂಕ್ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನು 3 ಟ್ಯಾಂಕ್ಗಳ ಕಾಮಗಾರಿ ಪ್ರಗತಿಯಲ್ಲಿದೆ. ಸಮರ್ಪಕವಾಗಿ ಪೈಪ್ಲೈನ್ ಇರುವ ವಾರ್ಡ್ಗಳಿಗೆ ಯರಗೋಳ್ ನೀರು ಸರಬರಾಜು ಮಾಡುತ್ತಿಲ್ಲ, ನಗರಸಭೆ ಹಾಗೂ ನಗರ ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಶಾಸಕರು ಹೇಳಿದ ಹಾಗೆ ರಾಜಕೀಯ ಮಾಡುತ್ತಿದ್ದಾರೆ ಎಂದು ನಗರಸಭೆ ಸದಸ್ಯರೇ ಆರೋಪಿಸುತ್ತಿದ್ದಾರೆ.
ಕಾಮಗಾರಿಯೂ ಕುಂಟುತ್ತಾ ಸಾಗಿತ್ತು!
2008ರಲ್ಲಿ ಅಂದಿನ ಜೆಡಿಎಸ್&ಬಿಜೆಪಿ ಸಮ್ಮಿಶ್ರ ಸರ್ಕಾರವು ಮಾರ್ಕಂಡೇಯ ನದಿಗೆ ಯರಗೋಳ್ ಡ್ಯಾಂ ಯೋಜನೆ ಅನುಷ್ಠಾನಕ್ಕೆ ತೀರ್ಮಾನಿಸಿ, 315 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ತಯಾರಿಸಿ, ಯೋಜನೆಯನ್ನು ಕೈಗೆತ್ತಿಕೊಂಡಿತು. ಆದರೆ ಕಾಮಗಾರಿಯು ಕುಂಟುತ್ತಾ ಸಾಗುತ್ತಿತ್ತು, ಈ ಹಿಂದಿನ ಶಾಸಕ ಕೆ.ಶ್ರೀನಿವಾಸಗೌಡ ಅವರು ಅಧಿಕಾರಿಗಳು, ಗುತ್ತಿಗೆದಾರನ್ನು ಬೆಂಡೆತ್ತಿ ಕಾಮಗಾರಿಗೆ ವೇಗ ನೀಡಿದರು. ಜತೆಗೆ ಅಗಾಗ ಸ್ಥಳ ಭೇಟಿ ಮಾಡಿ ಯೋಜನೆ ಪೂರ್ಣಗೊಳ್ಳಲು ಕಾರಣೀಭೂತರಾದರು. ಆನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, 2023ರ ನ.11ರಂದು ಡ್ಯಾಂ ಉದ್ಘಾಟಿಸುವ ಮೂಲಕ ದಶಕಗಳ ಬಳಿಕ ಜನರ ಬಹುವರ್ಷಗಳ ಕನಸು ನನಸು ಮಾಡಿದರು. ಆದರೆ ಯೋಜನೆಯ ಉದ್ದೇಶದಂತೆ ಕೋಲಾರ ನಗರದ ನಿವಾಸಿಗಳಿಗೆ ನೀರು ಲಭ್ಯವಾಗದಿರುವುದು ವಿಪರ್ಯಾಸ.