ವ್ಯಕ್ತಿತ್ವ ನಿರ್ವಣದ ತಳಪಾಯ ಯಮ-ನಿಯಮ

Meditation
Published on
ಒಂದು ಕಟ್ಟಡ ನಿರ್ವಣಕ್ಕೆ ಹೇಗೆ ಭದ್ರವಾದ ತಳಪಾಯ- ಪಂಚಾಂಗ ಅಗತ್ಯವೋ ಹಾಗೆಯೇ ಪತಂಜಲಿ ಮಹರ್ಷಿ ಪ್ರಣೀತ ಅಷ್ಟಾಂಗಯೋಗ ಅಥವಾ ರಾಜಯೋಗದಲ್ಲಿ ಗುರಿ ತಲುಪಲು ತಳಗಟ್ಟೆಂದರೆ ಮೊದಲ ಮೆಟ್ಟಿಲುಗಳಾದ ಯಮ ನಿಯಮಗಳು.

ಯಮಗಳು: ‘ಯಮ’ ಎಂದರೆ ನಾವು ಕಲ್ಪಿಸಿಕೊಳ್ಳುವ ಮಹಿಷ ವಾಹನ ಯಮ ಅಲ್ಲ. ವ್ಯಕ್ತಿ ಮತ್ತು ಸಮಾಜದ ಸಂಬಂಧ, ಸಾಮರಸ್ಯ ಉತ್ತಮಗೊಳ್ಳಬೇಕಾದರೆ ನಮ್ಮ ನಡಾವಳಿಯಲ್ಲಿ ಅನುಸರಿಸಬೇಕಾದ ಮೌಲ್ಯಗಳನ್ನು ಯಮಗಳು ಎನ್ನುತ್ತೇವೆ. ಯಮಗಳು ಐದು. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ.

ಅಹಿಂಸೆ: ಅರ್ಥಾತ್ ಹಿಂಸೆಯನ್ನು ಮಾಡದಿರುವುದು. ಹೊಡೆದು ಬಡಿದು ಹಿಂಸಿಸುವುದು ಶಾರೀರಿಕ ಹಿಂಸೆಯಾದರೆ ಬಾಯಿಗೆ ಬಂದಂತೆ ಬೈದು ಅವಮಾನಿಸುವುದು ವಾಚಿಕ ಹಿಂಸೆ. ಕಾಯಾ ವಾಚಾ ಮನಸಾ ಹಿಂಸೆಯನ್ನು ಮಾಡದಿರುವುದೇ ಅಹಿಂಸೆ.

ಸತ್ಯ: ನಡೆನುಡಿಗಳಲ್ಲಿ ಸತ್ಯ ಮಾರ್ಗವನ್ನು ಅನುಸರಿಸುವುದು. ಅಸ್ತೇಯ: ಸ್ತೇಯ ಎಂದರೆ ಕಳ್ಳತನ. ಅಸ್ತೇಯ ಎಂದರೆ ಕಳ್ಳತನ ಮಾಡದಿರುವುದು. ತನ್ನದಲ್ಲದ ವಸ್ತುವನ್ನು ಅಪೇಕ್ಷಿಸದಿರುವುದು. ನನ್ನ ವಸ್ತುವನ್ನು ಇತರರು ನನಗೆ ತೊಳಿಯದಂತೆ ಅಪಹರಿಸಿದಾಗ ನೋವಾಗುತ್ತದೆ ಎಂದಾದಲ್ಲಿ ಇತರರ ವಸ್ತುಗಳನ್ನು ಅವರಿಗೆ ಅರಿಯದಂತೆ ನಾವು ಅಪಹರಿಸಿದರೆ ಅವರಿಗೂ ನೋವಾಗುತ್ತದೆ ಎಂದು ಅರ್ಥೈಸಿಕೊಂಡರೆ ಆ ಕೆಲಸಕ್ಕೆ ನಾವು ಕೈ ಹಾಕುವುದಿಲ್ಲ. ಇದೇ ಅಸ್ತೇಯ.

ಬ್ರಹ್ಮಚರ್ಯ: ಬ್ರಹ್ಮನ ಕಡೆ ಚರಿಸುವುದು. ಸದಾಚಾರ, ಸದ್​ಗ್ರಂಥಗಳ ಅಧ್ಯಯನ, ಸತ್ಸಂಗ ಇತ್ಯಾದಿಗಳ ಮೂಲಕಬ್ರಹ್ಮಜ್ಞಾನದ ಅರಿವು ಪಡೆದು ಮನಸ್ಸನ್ನು ಊರ್ಧ್ವ ಮುಖಿಯನ್ನಾಗಿಸುವುದು. ಮತ್ತೊಂದರ್ಥ ಇಂದ್ರಿಯ ನಿಗ್ರಹ. ಅಧ್ಯಯನದ ಅವಧಿಯಲ್ಲಿ ಕಾಮನೆಗಳಿಗೆ, ಲಾಲಸೆಗಳಿಗೆ ಇಂದ್ರಿಯ, ಮನಸ್ಸನ್ನು ಹರಿಯಬಿಡದೆ ಅವುಗಳನ್ನು ನಿಗ್ರಹಿಸಿ ಊರ್ಧ್ವಮುಖಿಯನ್ನಾಗಿಸುವುದು ಬ್ರಹ್ಮ ಚರ್ಯ. ಇದರಿಂದ ವೀರ್ಯಲಾಭವಾಗಿ ಶಾಂತಿ ಶಕ್ತಿ, ಧೈರ್ಯ ಬೆಳೆಸಿಕೊಂಡು ವಿವೇಕದ ಪ್ರಭೆಯನ್ನು ವರ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ.

ಅಪರಿಗ್ರಹ: ಪರಿಗ್ರಹ ಎಂದರೆ ಸ್ವೀಕರಿಸು. ಅಪರಿಗ್ರಹ ವೆಂದರೆ ತನಗೆ ಅಗತ್ಯವಾದುದಕ್ಕಿಂತ ಹೆಚ್ಚಿನದನ್ನು ಸ್ವೀಕರಿಸದಿರುವ, ಸಂಗ್ರಹಿಸದಿರುವ ನಿಷ್ಠೆ. ಅಗತ್ಯವಿರುವವರಿಗೆ ಆ ವಸ್ತುಗಳು ದೊರಕುವಂತಾದಾಗ ಸಿಗುವ ತೃಪ್ತಿ ನಿಜಕ್ಕೂ ಹೆಚ್ಚಿನದು. ಈ ‘ಯಮ’ದ ಐದು ಮೌಲ್ಯಗಳನ್ನು ಅನುಷ್ಠಾನದಲ್ಲಿ ತಂದುಕೊ ಳ್ಳುವುದರಿಂದ ವ್ಯಕ್ತಿ ಮತ್ತು ಸಮಾಜದ ಸಂಬಂಧ ಉತ್ತಮಗೊಳ್ಳುತ್ತದೆ.

ನಿಯಮಗಳು: ವ್ಯಕ್ತಿ ತಾನೊಬ್ಬ ‘ಮಾಡೆಲ್’ ಹಾಗೂ ‘ಮಾರೆಲ್’ ಆಗಬೇಕಾದರೆ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಜೀವನ ಮೌಲ್ಯಗಳ ನಿಬಂಧನೆಗಳನ್ನು ತಿಳಿಸುವ ಅಂಶಗಳು ನಿಯಮಗಳು. ಈ ನಿಯಮಗಳಲ್ಲಿ ಬರುವ ಮೌಲ್ಯಗಳೂ ಐದು. ಶೌಚ, ಸಂತೋಷ, ತಪ, ಸ್ವಾಧ್ಯಾಯ, ಈಶ್ವರ ಪ್ರಣಿದಾನ.

ಶೌಚ: ಶೌಚ ಎಂದರೆ ಶುದ್ಧತೆ. ಎರಡು ವಿಧ. ಬಾಹ್ಯ ಹಾಗೂ ಆಂತರಿಕ ಶೌಚ. ಪ್ರತಿನಿತ್ಯ ಸ್ನಾನ ಇತ್ಯಾದಿಗಳಿಂದ ಬಾಹ್ಯ ಶುದ್ಧಿಯನ್ನು ಮಾಡಿಕೊಳ್ಳುತ್ತೇವೆ. ಇದರ ಜತೆಗೆ ಮುಖ್ಯವಾದುದು ಆಂತರಿಕ ಶೌಚ. ಅಂದರೆ ಭಾವನೆಗಳ ಶುದ್ಧಿ. ಅರಿಷಡ್ವರ್ಗಗಳನ್ನು ನಿಗ್ರಹಿಸಿ, ಶುದ್ಧ ಮಾತು, ಶುದ್ಧ ಆಲೋಚನೆಗಳ ಮೂಲಕ ಭಾವನೆಗಳ ಸಂಸ್ಕಾರ ಮುಖ್ಯ.

ಸಂತೋಷ: ಆನಂದ ಮನುಷ್ಯನ ಮೂಲ ಸ್ವಭಾವ. ಅತಿಯಾದ ಕಾಮನೆಗಳಿಗೆ ಮನಸ್ಸನ್ನು ಹರಿಯಬಿಡದೆ ಇದ್ದುದರಲ್ಲಿ ತೃಪ್ತಿಪಡುವ, ಸಂತಸವನ್ನೇ ಹಂಚುವ ಗುಣ ಬೆಳೆಸಿಕೊಂಡಾಗ ಇಡೀ ಪರಿಸರವನ್ನು ಸುಂದರವಾಗಿಸಬಹುದು.

ತಪ: ತಪ ಎಂದರೆ ಒಂದರ್ಥ ಸುಡುವುದು. ಗುರಿ ಸಾಧನೆಯಲ್ಲಿ ಅಡಚಣೆಯಾಗಿರುವ ಅತಿಯಾದ ಕಾಮನೆಗಳನ್ನು, ಲಾಸೆಗಳನ್ನು ಸುಡುವುದು. ಮತ್ತೊಂದರ್ಥ ನಿಗ್ರಹ. ಮನಸ್ಸು ಬೇರೆ ಬೇರೆ ವಿಷಯಗಳ ಕಡೆಗೆ ಓಡದಂತೆ ನಿಗ್ರಹಿಸಿ, ಕೇಂದ್ರೀಕರಿಸುವ ದಿಶೆಯಲ್ಲಿ ಯತ್ನಿಸುವುದು. ಮೂರು ವಿಧಗಳಲ್ಲಿ ಇದನ್ನು ರೂಢಿಸಿಕೊಳ್ಳಬಹುದಾಗಿದೆ. ಬ್ರಹ್ಮಚರ್ಯ, ಅಹಿಂಸಾಪಾಲನೆ ಇವುಗಳನ್ನು ಕಾಯಕ ತಪಸ್ಸೆಂದೂ, ಸತ್ಯಕ್ಕೆ ಪ್ರಾಧಾನ್ಯ ನೀಡಿ ಇತರರಿಗೆ ನೋವಾಗದಂತೆ ನುಡಿದ ಮಾತಿನ ಶುದ್ಧತೆಯನ್ನು ವಾಚಿಕ ತಪಸ್ಸೆಂದೂ, ಜೀವನದ ದ್ವಂದಗಳಲ್ಲಿ ಮನಸ್ಸನ್ನು ಸಮತೋಲನವಾಗಿಟ್ಟುಕೊಳ್ಳುವುದನ್ನು ಮಾನಸಿಕ ತಪಸ್ಸೆಂದೂ ಅರ್ಥೈಸಲಾಗುತ್ತದೆ.

ಸ್ವಾಧ್ಯಾಯ: ಸಜ್ಜನರ ಸಹವಾಸ, ಸದ್ಗ ›ಂಥಗಳ ಅಧ್ಯಯನದ ಮೂಲಕ ಜ್ಞಾನವನ್ನು ವರ್ಧಿಸಿಕೊಳ್ಳುವುದು. ಅಲ್ಲದೆ ಸ್ವ-ಅಧ್ಯಾಯ ಎಂದರೆ ತನ್ನನ್ನು ತಾನು ಓದಿಕೊಳ್ಳುವುದು ಎಂಬುದು ಬಹುಮುಖ್ಯ ಅರ್ಥ.

ಈಶ್ವರ ಪ್ರಣಿದಾನ: ಸರ್ವಶಕ್ತನಾದ ಭಗವಂತನಲ್ಲಿ ಸರ್ವಸಮರ್ಪಣ ಮಾಡುವುದು-ಈಶ್ವರ ಪ್ರಣಿದಾನ. ‘ಅನ್ಯಥಾ ಶರಣಂ ನಾಸ್ತಿ, ತ್ವಮೇವ ಶರಣಂ ಮಮ’ ನೀನಲ್ಲದೆ ಶರಣು ಹೋಗಲು ಅನ್ಯರಿಲ್ಲ ಎಂಬ ಭಾವನೆ ಹೋಂದಿ, ನಾನು, ನನ್ನದು ಎಂಬ ಭಾವನೆಗಳಿಂದ ಮುಕ್ತನಾಗಿ, ಸರ್ವವನ್ನು ಸರ್ವಶಕ್ತನಲ್ಲಿ ಸಮರ್ಪಿಸುವುದು. ಹೀಗೆ ಯಮ ನಿಯಮ ಅಳವಡಿಸಿಕೊಳ್ಳುವುದರಿಂದ ಸಮಾಜಕ್ಕೆ ಉಪ ಯುಕ್ತವಾದ, ಆದರ್ಶವಾದ ವ್ಯಕ್ತಿತ್ವನ್ನು ರೂಪಿಸಿಕೊಳ್ಳುವುದು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net