

ಬೆಂಗಳೂರು: ರಾಜ್ಯದ ಮೊದಲ ಯಲಹಂಕ ಸಂಯುಕ್ತ ಆವರ್ತ (ಅನಿಲ + ಹಬೆ) ವಿದ್ಯುತ್ ಉತ್ಪಾದನಾ ಘಟಕ ಜುಲೈ ಎರಡನೇ ವಾರದಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಮಾಹಿತಿ ನೀಡಿದ್ದಾರೆ.
ಬೆಸ್ಕಾಂ ‘ಬೆಳಕು ಭವನ’ದಲ್ಲಿ ಇಲಾಖೆ ಪ್ರಗತಿ ಪರಿಶೀಲಿಸಿದ ಅವರು, 370.05 ಮೆಗಾ ವಾಟ್ ಸಾಮರ್ಥ್ಯದ ಈ ಘಟಕ ಕಾರ್ಯಕ್ಷಮತೆ, ಸ್ಥಿರತೆ ಖಚಿತಪಡಿಸಿಕೊಂಡರು. ಕರ್ನಾಟಕ ವಿದ್ಯುತ್ ನಿಗಮದಿಂದ ಸ್ಥಾಪಿತ ಈ ಘಟಕವನ್ನು ಜುಲೈ ಎರಡನೇ ವಾರದಲ್ಲಿ ಲೋಕಾರ್ಪಣೆ ಮಾಡಲು ತೀರ್ಮಾನಿಸಿದರು.
ಒಟ್ಟು ಸಾಮರ್ಥ್ಯದ ಪೈಕಿ ಅನಿಲ ಟರ್ಬೈನ್ ಜನರೇಟರ್ ಮೂಲಕ 236.825 ಹಾಗೂ ಸ್ಟೀಮ್ (ಹಬೆ) ಟರ್ಬೈನ್ ಜನರೇಟರ್ ಮುಖೇನ 133.525 ಮೆಗಾ ವಾಟ್ ವಿದ್ಯುತ್ ಉತ್ಪಾದಿಸುತ್ತದೆ. ಈ ಘಟಕದಲ್ಲಿ ಸಂಯೋಜಿತ ಸಾಮರ್ಥ್ಯದಲ್ಲಿ ಪ್ರಾಯೋಗಿಕ ವಿದ್ಯುತ್ ಉತ್ಪಾದನೆ ಯಶಸ್ವಿಯಾಗಿದೆ.
ರಾಜ್ಯದ ಮೊದಲ ಸಾರ್ವಜನಿಕ ಸ್ವಾಮ್ಯದ ಅನಿಲ, ಹಬೆ ಆಧಾರಿತ ವಿದ್ಯುತ್ ಉತ್ಪಾದನಾ ಸ್ಥಾವರ ಎಂಬ ಹೆಮ್ಮೆಯಿದೆ. ಮಹತ್ವದ ಯೋಜ ಲೋಕಾರ್ಪಣೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಕೆ.ಜೆ.ಜಾರ್ಜ್ ಸೂಚಿಸಿದರು.
ಯಲಹಂಕ ಸಂಯುಕ್ತ ಆವರ್ತ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣಕ್ಕೆ 2016ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು. ಎಂಟು ವರ್ಷಗಳ ನಂತರ ಅವರೇ ಸಿಎಂ ಆಗಿ ಘಟಕವನ್ನು ಲೋಕಾರ್ಪಣೆ ಮಾಡಲಿರುವುದು ಗಮನಾರ್ಹ.
ಬಿಡದಿಯಲ್ಲಿ ಸ್ಥಾಪಿಸಲಾಗಿರುವ ತ್ಯಾಜ್ಯ ಆಧಾರಿತ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಪ್ರಾಯೋಗಿಕ ವಿದ್ಯುತ್ ಉತ್ಪಾದನೆ ಆರಂಭಿಸಿ, ಜುಲೈ ಅಂತ್ಯಕ್ಕೆ ಅಧಿಕೃತ ಕಾರ್ಯಾಚರಣೆಗೆ ಸಜ್ಜುಗೊಳಿಸಲು ಅಧಿಕಾರಿಗಳಿಗೆ ಕೆ.ಜೆ.ಜಾರ್ಜ್ ಸೂಚಿಸಿದರು.
ಕೆಪಿಸಿಎಲ್ ಹಾಗೂ ಬಿಬಿಎಂಪಿ ಸಹಭಾಗಿತ್ವದ ಈ ಘಟಕ 260 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಿದೆ. 600 ಟನ್ ತ್ಯಾಜ್ಯ ಸಂಸ್ಕರಿಸಿ 11.5 ಮೆಗಾ ವಾಟ್ ವಿದ್ಯುತ್ ಉತ್ಪಾದಿಸಲಿದ್ದು, ಈ ಘಟಕ ಕಾರ್ಯಾರಂಭದ ಬಳಿಕ ತ್ಯಾಜ್ಯ ವಿಲೇವಾರಿ ಸಮಸ್ಯೆಯೂ ಬಗೆಹರಿಯಲಿದೆ ಎಂದರು.
ಸಭೆಯಲ್ಲಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಹಣಕಾಸು ನಿರ್ದೇಶಕ ಆರ್.ನಾಗರಾಜ್, ತಾಂತ್ರಿಕ ನಿರ್ದೇಶಕ ಸಿ.ಎಂ.ದಿವಾಕರ್ ಇನ್ನಿತರ ಅಧಿಕಾರಿಗಳು ಇದ್ದರು.