

ಯಲಬುರ್ಗಾ: ನಟ ಪುನೀತ್ ರಾಜಕುಮಾರ್ ಸಮಾಜ ಸೇವೆಯನ್ನು ನಾಡಿನ ಜನತೆ ಎಂದಿಗೂ ಮರೆಯುವುದಿಲ್ಲ ಎಂದು ಅಪ್ಪು ಹುಡುಗರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಶರಣಪ್ಪ ಈಳಿಗೇರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪುನೀತ್ ಹುಡುಗರ ಸಂಘ ಪುತ್ಥಳಿ ಅನಾವರಣ ಕಾರ್ಯಕ್ರಮ ನಿಮಿತ್ತ ಆಮಂತ್ರಣ ಪತ್ರಿಕೆ ಬುಧವಾರ ಬಿಡುಗಡೆಗೊಳಿಸಿ ಮಾತನಾಡಿದರು. ಕನ್ನಡ ಕ್ರಿಯಾ ಸಮಿತಿ ವೃತ್ತದ ಬಳಿ ಮೂರು ಅಡಿ ಎತ್ತರದ ಪುನೀತ್ ಕಂಚಿನ ಪ್ರತಿಮೆ ಸ್ಥಾಪಿಸಲಾಗಿದ್ದು, ನ.27ರಂದು ನಟ ರಾಘವೇಂದ್ರ ರಾಜಕುಮಾರ್, ನಿರ್ಮಾಪಕ ಎಸ್.ಎ. ಚಿನ್ನೇಗೌಡ, ವಸ್ತ್ರಾಲಂಕಾರರಾದ ಎನ್.ವೀರಾರಾಜರಿಂದ ಅನಾವರಣಗೊಳ್ಳಲಿದೆ. ಅಂದು ಬೆಳಗ್ಗೆ ರೆಡ್‌ಕ್ರಾಸ್ ಸಂಸ್ಥೆ, ಸ್ನೇಹಜೀವಿ ಗೆಳೆಯರ ಬಳಗ ಹಾಗೂ ವಿವಿಧ ಸಂಘದಿಂದ ರಕ್ತದಾನ, ನೇತ್ರದಾನ ಶಿಬಿರ ಆಯೋಜಿಸಲಾಗಿದೆ. ಸಂಜೆ 4ಕ್ಕೆ ಸ.ಪ.ಪೂ. ಕಾಲೇಜು ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. 10 ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಸಂಸ್ಥಾನ ಹಿರೇಮಠ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್, ಸಚಿವ ಹಾಲಪ್ಪ ಆಚಾರ್, ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಗಾಯಕರಾದ ಅಶೋಕ ಬಸ್ತಿ, ಶಿವಶರಣಯ್ಯಸ್ವಾಮಿ ಮ್ಯಾಗಳಮಠ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಅಪ್ಪು ಹುಡುಗರ ಸಂಘದ ಪದಾಧಿಕಾರಿಗಳಾದ ಶಿವಶರಣಯ್ಯಸ್ವಾಮಿ ಮ್ಯಾಗಳಮಠ, ಫರೀದ್ ಎಲಿಗಾರ, ಕಳಕೇಶ ಕುಂಬಾರ, ಶಿವರಾಜ ಬಾವಿಮನಿ, ಮಲ್ಲಿಕಾರ್ಜುನ ನಿಡಗುಂದಿ, ಸಂಗಮೇಶ ಹವಳದ, ಬಾಬಾ ಕಲಂದರ ಇದ್ದರು.