

ಬೆಂಗಳೂರು: ಬಿಜೆಪಿಯಿಂದ ಮಾಜಿ ಶಾಸಕಿ ಪೂರ್ಣಿಮಾ ಕಾಂಗ್ರೆಸ್ ಸೇರುತ್ತಿದ್ದಂತೆ, ಕೈ ಪಾಳಯದಲ್ಲಿ ಅಸಮಾಧಾನ ಹೊಗೆಯಾಡಲು ಆರಂಭವಾಗಿದೆ.
ಯಾದವ ಸಮುದಾಯದ ಮುಖಂಡರು ಇಷ್ಟು ದಿನ ಪಕ್ಷಕ್ಕೆ ಮಣ್ಣುಹೊತ್ತಿದ್ದು, ಈಗ ಬಿಜೆಪಿ ಮುಖಂಡರನ್ನು ಕರೆತಂದು ಮೆರೆಸುವುದು ಎಷ್ಟು ಸರಿ ಎಂದು ಕೆಲವು ಮುಖಂಡರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ತುಮಕೂರು, ಚಿತ್ರದುರ್ಗ ಭಾಗದಲ್ಲಿ ಗೊಲ್ಲ ಸಮುದಾಯ ಹೆಚ್ಚಿದ್ದು, ಅವರನ್ನು ಗುರಿಯಾಗಿಸಿಕೊಂಡು ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತ ಗಳಿಕೆ ಉದ್ದೇಶದಿಂದ ಪೂರ್ಣಿಮಾ ಅವರನ್ನು ಪಕ್ಷಕ್ಕೆ ಕರೆತರಲಾಗಿದೆ. ಪಕ್ಷದಲ್ಲಿ ಈಗ ಇರುವ ಯಾರನ್ನೂ ಕಡೆಗಣಿಸುವುದಿಲ್ಲ ಎಂದು ಪ್ರಮುಖ ನಾಯಕರು ಸಮಜಾಯಿಷಿಯನ್ನೂ ನೀಡಿದ್ದಾರೆ.
ಇನ್ನೊಂದೆಡೆ, ಪೂರ್ಣಿಮಾ ಶ್ರೀನಿವಾಸ್ ಅವರ ಪಕ್ಷ ಸೇರ್ಪಡೆ ಹಾಗೂ ಕಾಡುಗೊಲ್ಲ ಸಮುದಾಯದ ವಿರೋಧ ವಿಚಾರವಾಗಿ ಡಿ.ಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಪ್ರಬಲವಾಗಿರುವವರನ್ನು ಪ್ರಬಲವಾಗಿ ವಿರೋಧ ಮಾಡುವುದು ರಾಜಕೀಯದಲ್ಲಿ ಸಹಜ. ರಾಜಕೀಯದಲ್ಲಿ ಪ್ರಬಲರಿಗೆ ವಿರೋಧಿಗಳು ಹೆಚ್ಚು. ಪೂರ್ಣಿಮಾ ಶ್ರೀನಿವಾಸ್ ಅವರು ಶಾಸಕಿಯಾಗಿದ್ದರು, ಅವರದೇ ಆದ ಶಕ್ತಿ ಇದೆ. ಅವರ ತಂದೆ ನಮ್ಮ ಪಕ್ಷದಲ್ಲಿದ್ದು, ಮಂತ್ರಿಯಾಗಿದ್ದರು. ಇಂದು ಬಿಜೆಪಿ ಜೆಡಿಎಸ್ ಮೈತ್ರಿ ಸರಿಯಿಲ್ಲ ಎಂದು ಭಾವಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ.
ಪೂರ್ಣಿಮಾ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಟಿ.ಶ್ರೀನಿವಾಸ್, ಹಟ್ಟಿಗಳಲ್ಲಿ ವಾಸ ಮಾಡುವ ನನ್ನ ಸಮಾಜವನ್ನು ಎಸ್ಟಿ ವಿಭಾಗಕ್ಕೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಇತ್ತೀಚೆಗೆ ಅನೇಕ ಸಮಾಜಗಳ ಕುಲಶಾಸ್ತ್ರೀಯ ಅಧ್ಯಯನವಾಗಿ ಕೇಂದ್ರಕ್ಕೆ ರವಾನೆಯಾಗುತ್ತಿದೆ. ಕನಿಷ್ಠ ಜೀವನ ನಡೆಸುತ್ತಿರುವ ಪ್ರವರ್ಗ 1ರಲ್ಲಿ ಅಲೆಮಾರಿ ಜೀವನ ನಡೆಸುತ್ತಿರುವ 46 ಸಮುದಾಯಗಳು ಗೊಲ್ಲ, ದೊಂಬಿದಾಸ, ಶಿಳ್ಳಕ್ಯಾತ, ಜೋಗಿ ಸಮಾಜಗಳ ಸಂಘಟನೆ ಮಾಡಿಕೊಂಡು ರಾಜ್ಯವನ್ನು ಸುತ್ತಿದ್ದೇನೆ. ನಮ್ಮನ್ನು ಅನೇಕರು ಟೀಕೆ ಮಾಡುತ್ತಾರೆ. ಸಮಾಜದ ಒಂದು ಭಾಗದ ಕುಲಶಾಸ್ತ್ರಿಯ ಅಧ್ಯಯನ ಕೇಂದ್ರವನ್ನು ಸೇರಿದೆ. ಮತ್ತೊಂದು ಭಾಗ ಹಂದಿಗೊಲ್ಲರು, ಹಾವಾಡಿಗಗೊಲ್ಲ, ಕೊಲಿ ಬಸವ ಸಮುದಾಯಗಳ ಪ್ರಸ್ತಾವನೆ ಕೇಂದ್ರಕ್ಕೆ ಹೋಗಬೇಕಿದೆ ಎಂದರು.
ಈ ಸಮುದಾಯದ ಜನರಿಗೆ ನೆಲ ಕಲ್ಪಿಸಲು ನಾನು ಪೂರ್ಣಿಮಾ ಬಹಳ ಶ್ರಮಿಸಿದ್ದೇವೆ. 2008ರಿಂದಲೂ ಇದಕ್ಕಾಗಿ ಸರ್ಕಸ್ ಮಾಡುತ್ತಲೇ ಇದ್ದೇವೆ. ಇದಕ್ಕಾಗಿ ಬಹಳ ನೋವಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕುಲಶಾಸ್ತ್ರ ಅಧ್ಯಯನಕ್ಕೆ 2 ಕೋಟಿ ನಿಗದಿ ಮಾಡಿಸಿದ್ದು, ಇದನ್ನು 5 ಕೋಟಿಗೆ ಹೆಚ್ಚಿಸಿ ಭಾಕಿ ಉಳಿದಿರುವ ಎಲ್ಲಾ ಸಮಾಜಗಳ ಕುಲಶಾಸ್ತ್ರ ಅಧ್ಯಯನ ಮಾಡಿ ಅದನ್ನು ಕೇಂದ್ರಕ್ಕೆ ಪ್ರಸ್ತಾವನೆಗೆ ಕಳುಹಿಸಬೇಕು. ಪ್ರವರ್ಗ 1 ಹಿಂದುಳಿದ ವರ್ಗಗಳಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಪೈಪೋಟಿ ನಡೆಸುವಾಗ ಎಂಬಿಸಿಗಳನ್ನು ಪ್ರತ್ಯೇಕವಾಗಿಟ್ಟು ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದರು.
ಕಾಡುಗೊಲ್ಲರನ್ನು ಕೇಂದ್ರ ಸರ್ಕಾರ ಒಬಿಸಿಯಲ್ಲಿ ಸೇರಿಸುವ ಬದಲು ಆರ್ಥಿಕವಾಗಿ ಹಿಂದುಳಿದ ವರ್ಗದಲ್ಲಿ ಸೇರಿಸಿದೆ. ಅದು ಖಂಡನೀಯ. ಇತ್ತೀಚೆಗೆ ಸರ್ಕಾರ ಕುಂಚಿಟಿಗ ಸಮುದಾಯವನ್ನು ಒಬಿಸಿ ವರ್ಗಕ್ಕೆ ಸೇರಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಅದೇ ರೀತಿ ಕಾಡುಗೊಲ್ಲರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.