

ಬೆಂಗಳೂರು: ಯಾದಗಿರಿ ಜಿಲ್ಲೆ ಹುಣಸಿಗಿ ತಾಲೂಕು ಬಪ್ಪರಗಾ ಗ್ರಾಮದಲ್ಲಿ ರೇಪ್ ಕೇಸ್/ಬಹಿಷ್ಕಾರ ಪ್ರಕರಣ ಕುರಿತು ವರದಿ ಕೇಳಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿರುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಬಗ್ಗೆ ವರದಿ ಕೇಳಿದ್ದೇವೆ.ದೂರು ಕೊಟ್ಟ ಕಾರಣಕ್ಕೆ ಊರವರು ಬಹಿಷ್ಕಾರ ಹಾಕಿದ್ದಾರೆ. ಐನೂರು ಜನ ಇರುವ ಗ್ರಾಮ ಅದು. ದಲಿತ ಸಮುದಾಯ ಹೆಚ್ಚು ಇದೆ. ಮಕ್ಕಳಿಗೆ ಪುಸ್ತಕ ತೆಗೆದು ಕೊಳ್ಳಲು ಬಿಟ್ಟಿಲ್ಲ. ಊರಿನಲ್ಲಿ ನೀರು ತೆಗೆದುಕೊಳ್ಳಲು ಆಗಿಲ್ಲ. ಅಧಿಕಾರಿಗಳಿಗೂ ಸೂಚನೆ ಕೊಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ನಾಗಮಂಗಲ ಸದ್ಯಕ್ಕೆ ಶಾಂತಿಯುತವಾಗಿದೆ. ಶಾಂತಿ ಸಭೆ ನಡೆಸಲು ಸೂಚನೆ ಕೊಟ್ಟಿದ್ದೇನೆ. ಯಾವುದೇ ಅಹಿತಕರ ಘಟನೆ ಆಗಬಾರದು ಆ ರೀತಿ ಪೊಲೀಸರಿಗೆ ಸೂಚನೆ ಕೊಟ್ಟಿದ್ದೇನೆ. ಹೆಚ್ಚಿನ ಪೊಲೀಸ್ ಭದ್ರತೆ ಹಾಕಲಾಗಿದೆ ಎಂದರು.
ಎಫ್ಐಆರ್ ಮೇಲೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿರುವ ಕುರಿತ ಪ್ರಶ್ನೆಗೆ, ಕಾನೂನು ಪ್ರಕಾರ ಏನು ಮಾಡಬೇಕು ಮಾಡುತ್ತಾರೆ. ನಾವು ಬೇಕಾದ ರೀತಿ ಮಾಡಲು ಆಗುವುದಿಲ್ಲ. ಅದರಲ್ಲಿ ಅನುಮಾನ ಪಡುವುದೇನಿದೆ ಎಂದು ಪ್ರಶ್ನಿಸಿದರು.
ಬಿಜೆಪಿ ಸತ್ಯಶೋಧನೆ ಮಾಡಿ ತಿಳಿಸಲಿ, ನಮಗೂ ಗೊತ್ತಾಗುತ್ತದೆ. ಸತ್ಯಶೋಧನೆಯಲ್ಲಿ ಸತ್ಯ ಇದ್ದರೆ ಗಮನಿಸುತ್ತೇವೆ. ನಮ್ಮ ಪೊಲೀಸರಿಗೂ ಸುಲಭವಾಗುತ್ತದೆ ಎಂದು ಡಾ.ಪರಮೇಶ್ವರ ಹೇಳಿದರು.