

ಬೀಜಿಂಗ್: ಹುಬೈ ಪ್ರಾಂತ್ಯದ ವುಹಾನ್ನಲ್ಲಿನ ಜೀವಂತ ವನ್ಯಜೀವಿಗಳ ಮಾರಾಟದಿಂದ ಜಾಗತಿಕವಾಗಿ ಕರೊನಾ ವೈರಾಣು ಹಬ್ಬಿದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಚೀನಾ ವನ್ಯಜೀವಿಗಳ ಮಾರಾಟವನ್ನು ಸಂಪೂರ್ಣ ನಿಷೇಧಿಸಿತ್ತು. ಅಲ್ಲದೆ, ಅವುಗಳ ಮಾಂಸ ತಿನ್ನದಂತೆ ನಿರ್ಬಂಧಿಸಿತ್ತು. ಆದರೆ, ಈಗ ಇದನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದು, ಕುಟುಂಬವನ್ನು ಸಾಕುವ ಸಲುವಾಗಿ ವ್ಯಾಪಾರಿಗಳು ವನ್ಯಜೀವಿಗಳ ಮಾರಾಟವನ್ನು ಪುನರಾರಂಭಿಸಿದ್ದಾರೆ. ಇದರಿಂದಾಗಿ, ಮತ್ತೊಂದು ಸುತ್ತಿನ ಕರೊನಾ ವೈರಾಣು ಹರಡುವಿಕೆಯ ಭೀತಿ ಮೂಡಿಸಿದೆ.
ಹುನನ್ ಸಮುದ್ರಜೀವಿಗಳ ಸಗಟು ಮಾರಾಟ ಕೇಂದ್ರವನ್ನು ಚೀನಾ ಸರ್ಕಾರ ಜನವರಿ 1ರಿಂದ ಸಂಪೂರ್ಣ ಮುಚ್ಚಿತ್ತು. ಅಲ್ಲದೆ, ಜೀವಂತ ಪ್ರಾಣಿಗಳ ಮಾರಾಟವನ್ನೂ ನಿಷೇಧಿಸಿತ್ತು. ಆದರೆ, ವ್ಯಾಪಾರಿಗಳು ಈಗ ಹುನನ್ ಮಾರುಕಟ್ಟೆಯಿಂದ 15 ಕಿ.ಮೀ. ದೂರದಲ್ಲಿ ತಮ್ಮದೇ ಆದ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಆರಂಭಿಸಿದ್ದಾರೆ.
ಆದರೆ, ಹೊಸ ಮಾರುಕಟ್ಟೆಗೆ ಗ್ರಾಹಕರು ಬರುವುದು ಕಡಿಮೆಯಾಗಿದೆ. ಜತೆಗೆ ವನ್ಯಜೀವಿಗಳ ಮಾಂಸ ತಿನ್ನುವುದರ ಮೇಲೆ ನಿರ್ಬಂಧ ಇರುವ ಕಾರಣ ಜನರು ಕೂಡ ಅವುಗಳನ್ನು ಖರೀದಿಸಲು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ. ಇದರಿಂದಾಗಿ ವ್ಯಾಪಾರ ಇಲ್ಲದಾಗಿ ವ್ಯಾಪಾರಿಗಳು ಭಾರಿ ನಷ್ಟ ಅನುಭವಿಸುತ್ತಿದ್ದಾರೆ.
ಮುಳ್ಳುನಳ್ಳಿ (ಕ್ರೇ ಫಿಶ್) ಮಾರಾಟದಿಂದಲೇ ಜೀವನ ಸಾಗಿಸುತ್ತಿದ್ದ ವ್ಯಾಪಾರಿಯೊಬ್ಬರು ಆರು ಜನರ ಕುಟುಂಬವನ್ನು ಸಾಕಬೇಕಾಗಿದೆ. ಅನಿವಾರ್ಯವಾಗಿ ಮತ್ತೆ ಮಾರಾಟ ಆರಂಭಿಸಿದ್ದೇನೆ. ಆದರೂ ಇವನ್ನು ಖರೀದಿಸುವವರೇ ಇಲ್ಲವಾಗಿ, ವ್ಯಾಪಾರ ತುಂಬಾ ಕಡಿಮೆಯಾಗಿದೆ ಎಂದು ಅಲವತ್ತುಕೊಳ್ಳುತ್ತಾರೆ.
ಮುಳ್ಳುನಳ್ಳಿ ಅಷ್ಟೇ ಅಲ್ಲ, ನರಿ, ಮೊಸಳೆ, ತೋಳಗಳ ಮರಿ, ದೊಡ್ಡ ಸಲ್ಮಾಂಡರ್ಗಳು, ಹಾವು, ಇಲಿ, ನವಿಲು, ಮುಳ್ಳುಹಂದಿ, ಕೊಹಲಾಗಳು ಸೇರಿ ನಾನಾ ಬಗೆಯ ಪ್ರಾಣಿಗಳ ಮಾರಾಟ ಕೇಂದ್ರಗಳೂ ಮರುಆರಂಭಗೊಂಡಿವೆ.
ಚೀನಾದ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ತಡೆ ವಿಭಾಗದ ಅಧಿಕಾರಿಗಳು ವನ್ಯಪ್ರಾಣಿಗಳ ದೇಹದಿಂದಲೇ ಮಾನವರಿಗೆ ಕರೊನಾ ಸೋಂಕು ಹಬ್ಬಿದೆ ಎಂದು ಹೇಳಿ, ಇವುಗಳ ಪ್ರಮುಖ ಮಾರುಕಟ್ಟೆಯಾದ ಹುನನ್ ಮಾರುಕಟ್ಟೆಯನ್ನು ಮುಚ್ಚಿಸಿದ್ದರು. ಹಾಗಾಗಿ, 2003ರಲ್ಲಿ ಸಾರ್ಸ್ ವೈರಾಣು ಹರಡುವಿಕೆಗೆ ಕಾರಣವಾಗಿದ್ದ ಸಿವಿಟ್ಗಳು ಸೇರಿ ಎಲ್ಲ ಬಗೆಯ ಪ್ರಾಣಿಗಳ ಮಾರಾಟವನ್ನೂ ನಿಷೇಧಿಸಿದ್ದರು. ಆದರೂ ವ್ಯಾಪಾರಿಗಳು ಮಾತ್ರ ಹೊಟ್ಟೆಪಾಡಿನ ನೆಪ ಮಾಡಿಕೊಂಡು ಹೊಸದಾಗಿ ತಮ್ಮದೇ ಮಾರುಕಟ್ಟೆ ರೂಪಿಸಿಕೊಂಡು ಅಲ್ಲಿ ವನ್ಯಜೀವಿಗಳ ಮಾರಾಟವನ್ನು ಪುನರಾರಂಭಿಸಿದ್ದಾರೆ. ಇದನ್ನು ತಡೆಯಲು ಚೀನಾದ ಅಧಿಕಾರಿಗಳು ಕೂಡ ವಿಫಲರಾಗಿದ್ದಾರೆ. ಇದು ಮತ್ತೊಂದು ಸುತ್ತಿನ ಕರೊನಾ ಸೋಂಕು ಹರಡುವಿಕೆಯ ಆತಂಕ ಉಂಟು ಮಾಡಿದೆ.