ಆಲೂರು: ಬಸವ ಸಂಸ್ಕೃತಿ ಯಾತ್ರೆ ತಂಡ ದುರುದ್ದೇಶ ಇಟ್ಟುಕೊಂಡು ಸಮಾಜಕ್ಕೆ ತಪ್ಪು ಸಂದೇಶ ಕೊಡುತ್ತಿದೆ. ಬಸವ ಸಂಸ್ಕೃತಿ ಯಾತ್ರೆ ಹೆಸರಿನಲ್ಲಿ, ಬಸವಣ್ಣನವರ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ನಡೆಯುತ್ತಿರುವುದು ಖಂಡನೀಯ ಎಂದು ರಂಭಾಪುರಿ ವೀರ ಸಿಂಹಾಸನ ಹಿರೇಮಠ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಬಸವ ಸಂಸ್ಕೃತಿ ಯಾತ್ರೆ ಮಾಡುತ್ತಿರುವವರು ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗಾಗಿ ಸಮಾವೇಶಗಳನ್ನು ಮಾಡುತ್ತಿದ್ದರು. ಈಗ ಬಸವ ಧರ್ಮ ಸ್ಥಾಪನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಕೆಲವರು ಲಿಂಗಾಯತ ಧರ್ಮವೆಂದರೆ ಕೆಲವರು ಬಸವ ಧರ್ಮವೆನ್ನುತ್ತಾರೆ. ಅವರಲ್ಲಿ ಬದ್ಧತೆಯ ಕೊರತೆ ಇದೆ. ಸಮಾಜವನ್ನು ವಿಘಟನೆ ಮಾಡುವುದು ಅವರ ಗುರಿಯಾಗಿದೆ ಎಂಬುದು ಕೆಲವರಲ್ಲಿ ಗೊಂದಲವನ್ನುಂಟು ಮಾಡಿದ್ದಾರೆ. ಆದ್ದರಿಂದ ಈ ಬಸವ ಸಂಸ್ಕೃತಿ ಯಾತ್ರೆಯು ಯಾವ ತಳಹದಿಯ ಮೇಲೆ ನಡೆಯುತ್ತಿದೆ ಎಂಬುದನ್ನು ಇದರ ಆಯೋಜಕರು ಸ್ಪಷ್ಟಪಡಿಸಬೇಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವಾದಿ ಶರಣರು ಎಂದೂ ಸಹ ಸ್ಥಾವರ ಲಿಂಗ ಪೂಜೆಯನ್ನು ವಿರೋಧಿಸಿರಲಿಲ್ಲ. ಜತೆಗೆ ಕೆಲವು ವಚನಗಳಲ್ಲಿ ಸ್ಥಾವರ ಲಿಂಗಗಳ ಹೆಸರುಗಳನ್ನು ಅಂಕಿತನಾಮಗಳನ್ನಾಗಿ ಇಟ್ಟುಕೊಂಡಿದ್ದನ್ನು ನಾವು ಕಾಣಬಹುದಾಗಿದೆ ಎಂದು ತಿಳಿಸಿದ್ದಾರೆ.