

ಕನ್ನಡ ನಾಡಿನಲ್ಲಿ ಮಠ ಸಂಸ್ಕೃತಿಗೆ ವಿಶೇಷ ನೆಲೆಗಟ್ಟಿದೆ. ಆ ಸಂಸ್ಕೃತಿಯ ವಿಸ್ತರಣೆಗೆ ಬಹುದೊಡ್ಡ ಆಯಾಮವನ್ನು ತಂದು ಕೊಟ್ಟಿದ್ದು 12ನೇ ಶತಮಾನದ ಶರಣ ಪರಂಪರೆ. ಶರಣ ಸಂಸ್ಕೃತಿಯನ್ನು ಎತ್ತಿ ಹಿಡಿದ ವೀರಶೈವ ಮಠಗಳು ನಾಡಿನಾದ್ಯಂತ ಇವೆ. ಅವುಗಳ ಪೈಕಿ ಕನಕಪುರದ ಶ್ರೀದೇಗುಲಮಠವೂ ಒಂದು.
ಧಾರ್ವಿುಕ ಪರಂಪರೆಯಲ್ಲಿ ಮಠ-ಮಂದಿರ ಎಂಬ ಜೋಡಿಪದವಿದೆ. ದೇಗುಲ ಎಂದರೆ ದೇವಸ್ಥಾನ, ಮಠ ಎಂದರೆ ಗುರುಸ್ಥಾನ. ದೇವರು ಮತ್ತು ಗುರುವಿನ ಸ್ಥಾನ ಸಂಯುಕ್ತವಾಗಿರುವ ಸ್ಥಳ ದೇಗುಲಮಠ. ಕನಕಪುರದ ಸುತ್ತಮುತ್ತಲಿರುವ ಎಲ್ಲ ದೇವಾನುದೇವತೆಗಳ ಉತ್ಸವ ಮೂರ್ತಿಗಳು ವರ್ಷಕ್ಕೊಮ್ಮೆ ಮಠಕ್ಕೆ ಬರುವುದರಿಂದ ದೇಗುಲಮಠ ಎಂದು ಪ್ರಸಿದ್ಧಿಯಾಗಿದೆ.
ಮೈಸೂರು ಕರ್ನಾಟಕ ಭಾಗದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಿ ಮಠಗಳಲ್ಲಿ ಒಂದಾಗಿರುವ ದೇಗುಲ ಮಠಕ್ಕೆ 700 ವರ್ಷಗಳ ಇತಿಹಾಸವಿದೆ. 12ನೇ ಶತಮಾನದಲ್ಲಿ ಅಲ್ಲಮ ಪ್ರಭುಗಳಿಂದ ಆರಂಭವಾದ ಶೂನ್ಯಸಿಂಹಾಸನದ ವಿರಕ್ತ ಪರಂಪರೆಗೆ ಸೇರಿದ ಈ ಮಠದ ಸಂಸ್ಥಾಪಕರು ಶ್ರೀ ಆದಿ ನಿರ್ವಾಣ ಸ್ವಾಮಿಗಳು. ಈ ಮಠದ ವಾರ್ಷಿಕ ಜಾತ್ರೆಯು ಪ್ರತಿವರ್ಷ ಮಾಘ ಮಾಸದ ಪೌರ್ಣಿಮೆಯಂದು ಅದ್ಧೂರಿಯಾಗಿ ನಡೆಯುತ್ತದೆ. ಇಂದು
(ಫೆ.5) ಶ್ರೀ ಆದಿನಿರ್ವಾಣ ಸ್ವಾಮಿಗಳ ಜಾತ್ರೆ. ಸುತ್ತೂರು ಮತ್ತು ಸಿದ್ಧಗಂಗೆ ಶ್ರೀಗಳ ಸಾನ್ನಿಧ್ಯ ಹಾಗೂ ದೇಗುಲಮಠದ ಉಭಯ ಪೂಜ್ಯರ ಸಮ್ಮುಖದಲ್ಲಿ ಅಂದು ಧಾರ್ವಿುಕ ವಿಧಿಗಳೊಂದಿಗೆ ರಥೋತ್ಸವ ನಡೆಯಲಿದೆ.
ಪರಂಪರೆ: ಈಗಿನ ಕನಕಪುರವು ಹಿಂದೆ ಕಾನಕನಹಳ್ಳಿ ಎಂದು ಕರೆಯಲ್ಪಡುತ್ತಿತ್ತು. ದಟ್ಟ ಕಾಡುಪ್ರದೇಶವಾಗಿದ್ದ ಅರ್ಕಾವತಿ ನದಿ ತೀರದ ಈ ಪ್ರದೇಶಕ್ಕೆ ಉತ್ತರ ಭಾಗದಿಂದ ಆಗಮಿಸಿದ ಆದಿನಿರ್ವಾಣ ಸ್ವಾಮಿಗಳು ಸಣ್ಣ ಗುಡಿಸಲಲ್ಲಿ ಶಿವಯೋಗ ಮಾಡುತ್ತಾ, ಆಧ್ಯಾತ್ಮ ಸಾಧನೆಯಲ್ಲಿ ತೊಡುಗುತ್ತಾರೆ. ನಿರ್ವಾಣ ಸ್ವಾಮಿಗಳ ತಪಸ್ಸಿನ ಶಕ್ತಿ ಸುತ್ತಮುತ್ತಲ ಪ್ರದೇಶದಲ್ಲಿ ಪ್ರಚಾರವಾಗಿ ಭಕ್ತರು ಅವರ ದರ್ಶನಾಶೀರ್ವಾದ ಪಡೆಯಲು ಆರಂಭಿಸುತ್ತಾರೆ. ಮುಂದೆ ಆದಿನಿರ್ವಾಣ ಸ್ವಾಮಿಗಳು ಐಕ್ಯರಾದ ನಂತರ ಇಲ್ಲಿಯೇ ಗದ್ದುಗೆ ನಿರ್ವಿುಸಲಾಗುತ್ತದೆ.
ದೇಗುಲ ಮಠದ ಪರಂಪರೆಯಲ್ಲಿ 14 ಸ್ವಾಮಿಗಳು ಇದುವರೆಗೂ ಆಗಿದ್ದು, ಅನೇಕ ತಪಸ್ವಿಗಳು, ಪವಾಡ ಪುರುಷರು, ಸಮಾಜದ ಹಿತಚಿಂತಕರಾಗಿದ್ದಾರೆ. ಇಮ್ಮಡಿ ನಿರ್ವಾಣ ಸ್ವಾಮಿಗಳು ಹಾಗೂ ಇಮ್ಮಡಿ ಮಹಾಲಿಂಗ ಸ್ವಾಮಿಗಳ ಕಾಲಾವಧಿಯಲ್ಲಿ ಮಠದ ಚರಿತ್ರೆ ಗಮನಾರ್ಹವಾದ ಬೆಳವಣಿಗೆ ಕಂಡಿದೆ. ಸದ್ಯ 13ನೆಯ ಮುಮ್ಮಡಿ ಡಾ.ನಿರ್ವಾಣ ಮಹಾಸ್ವಾಮಿಗಳು ನಾಲ್ಕು ದಶಕಗಳಿಂದ ಮಠದ ಅಭಿವೃದ್ಧಿಯ ಜೊತೆಗೆ ಉತ್ಕೃಷ್ಟ ಧರ್ಮ ಪರಂಪರೆಯನ್ನು ಮುನ್ನಡೆಸಿದ್ದಾರೆ. ಇವರ ಉತ್ತರಾಧಿಕಾರಿಗಳಾಗಿದ್ದ 14ನೇ ಮುಮ್ಮಡಿ ಮಹಾಲಿಂಗ ಸ್ವಾಮಿಗಳು ಅಕಾಲಿಕವಾಗಿ ಲಿಂಗೈಕ್ಯರಾದ ನಂತರ15ನೇ ಶ್ರೀ ಚನ್ನಬಸವ ಮಹಾಸ್ವಾಮಿಗಳನ್ನು ನೂತನ ಉತ್ತರಾಧಿಕಾರಿಗಳಾಗಿ ಪಟ್ಟಾಧಿಕಾರ ಮಾಡಲಾಗಿದ್ದು, ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಮಠವನ್ನು ಮುನ್ನಡೆಸುತ್ತಿದ್ದಾರೆ.
ಅರ್ಕಾವತಿ ತೀರದಲ್ಲಿ ಜ್ಞಾನ-ಕೃಷಿ ಕ್ರಾಂತಿ: ಅರ್ಕಾವತಿ ತೀರದಲ್ಲಿರುವ ಕನಕಪುರ ದೇಗುಲಮಠವು ಧಾರ್ವಿುಕ, ಸಾಮಾಜಿಕವಾಗಿ ಹಲವು ಮಹತ್ವದ ಕೊಡುಗೆಯನ್ನು ನೀಡಿದೆ. 5 ದಶಕಗಳ ಹಿಂದೆ ಸ್ಥಾಪನೆಗೊಂಡಿರುವ ಶ್ರೀನಿರ್ವಾಣಸ್ವಾಮಿ ವಿದ್ಯಾಪೀಠವು ಬಡವಿದ್ಯಾರ್ಥಿಗಳ ಪಾಲಿಗೆ ಜ್ಞಾನಗಂಗೆಯಾಗಿದೆ.
1962ರಲ್ಲಿ ಇಮ್ಮಡಿ ಮಹಾಲಿಂಗ ಸ್ವಾಮಿಗಳು ಸ್ಥಾಪಿಸಿದ 3 ಪ್ರೌಢಶಾಲೆಗಳು, 1970ರಲ್ಲಿಯೇ ಉಚಿತ ವಸತಿನಿಯಲವನ್ನು ತೆರೆದು 400 ಬಡ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದ್ದರು. ಸದ್ಯ ಶ್ರೀಮಠದ ಉಚಿತ ವಿದ್ಯಾರ್ಥಿ ನಿಲಯದಲ್ಲಿ ಒಂದೂವರೆ ಸಾವಿರ ವಿದ್ಯಾರ್ಥಿಗಳಿದ್ದಾರೆ. ನಿರ್ವಾಣ ಸ್ವಾಮಿ ವಿದ್ಯಾಪೀಠದ ಅಧೀನದಲ್ಲಿ 9 ಪ್ರೌಢಶಾಲೆ, 6 ಪ್ರಾಥಮಿಕ ಶಾಲೆ, 3 ಪಿಯುಸಿ ಕಾಲೇಜು, 6 ಸಂಸ್ಕೃತ ಪಾಠಶಾಲೆ ಹಾಗೂ ಐಟಿಐ, ಬಿಎಡ್ ಮತ್ತು ನರ್ಸಿಂಗ್ ಸೇರಿದಂತೆ ಒಟ್ಟು 33 ಸಂಸ್ಥೆಗಳು ನಡೆಯುತ್ತಿವೆ. ಸಿಬಿಎಸ್ಸಿ ಶಾಲೆಯನ್ನು ಸಹ ಶ್ರೀಮಠ ನಡೆಸುತ್ತಿದೆ. ಇಲ್ಲಿ ಕರ್ನಾಟಕ, ಆಂಧ್ರ ಮತ್ತು ತಮಿಳುನಾಡಿನ ಬಡವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ.
ಔಪಚಾರಿಕ ಶಿಕ್ಷಣದ ಜೊತೆಗೆ ಯೋಗ, ಧ್ಯಾನ, ಗುರು ಹಿರಿಯರಿಂದ ದೇಶ, ಧರ್ಮ, ಸಂಸ್ಕೃತಿಯ ನೈತಿಕ ಶಿಕ್ಷಣವನ್ನು ನೀಡಲಾಗುತ್ತಿದೆ. ಜತೆಗೆ ಮೈಸೂರು ಮಹಾರಾಜರು ನೀಡಿರುವ ನೂರಾರು ಎಕರೆ ಭೂಮಿಯಲ್ಲಿ ಉತ್ತಮ ಕೃಷಿಚಟುವಟಿಕೆಯನ್ನು ಶ್ರೀಮಠ ನಡೆಸುತ್ತಿದೆ.