ಮೊಟ್ಟೆ ಇಡದೇ ಜನ್ಮ ನೀಡುವ ಜೀವಿ ಯಾವುದು? 2ನೇ ತರಗತಿ ವಿದ್ಯಾರ್ಥಿ ಬರೆದ ಉತ್ತರ ನೋಡಿ ಶಿಕ್ಷಕಿ ಶಾಕ್! Teacher and Student

Teacher and Student
Published on

Teacher and Student : ಯಾವುದೇ ಕಾರಣಕ್ಕೂ ಮಕ್ಕಳನ್ನು ಕಡಿಮೆ ಅಂದಾಜು ಮಾಡಬಾರದು ಅನ್ನೋದಕ್ಕೆ ವೈರಲ್​ ಆಗುತ್ತಿರುವ ಉತ್ತರ ಪತ್ರಿಕೆಯೇ ತಾಜಾ ಉದಾಹರಣೆಯಾಗಿದೆ. ಸದ್ಯ ಸೈಬರ್ ಲೋಕದಲ್ಲಿ ಹಾಟ್ ಟಾಪಿಕ್ ಆಗಿರುವ ಉತ್ತರ ಪತ್ರಿಕೆ ಎರಡನೇ ತರಗತಿ ವಿದ್ಯಾರ್ಥಿನಿಯರಿಬ್ಬರಿಗೆ ಸಂಬಂಧಿಸಿದ್ದು. ವಿದ್ಯಾರ್ಥಿನಿಯರು ಬರೆದ ಉತ್ತರ ಮೊದಲು ನಿಮ್ಮ ಮುಖದಲ್ಲಿ ನಗು ಅರಳಿಸಿದರು ಕೂಡ ಒಂದು ಕ್ಷಣ ಯೋಚಿಸುವಂತೆ ಮಾಡುತ್ತದೆ.

ಮೊಟ್ಟೆಯನ್ನು ಇಟ್ಟು ಮತ್ತು ನೇರವಾಗಿ ಮರಿಗೆ ಜನ್ಮ ನೀಡುವ ಪ್ರಾಣಿಗಳನ್ನು ಪಟ್ಟಿ ಮಾಡುವಂತೆ ವಿದ್ಯಾರ್ಥಿಗಳಿಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಉದಾಹರಣೆಯಾಗಿ ಕೋಳಿ ಮತ್ತು ಬೆಕ್ಕು ಎರಡು ಪ್ರಾಣಿಗಳ ಹೆಸರನ್ನು ಪ್ರಶ್ನೆ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿತ್ತು. ಅದನ್ನು ನೋಡಿಕೊಂಡು ವಿದ್ಯಾರ್ಥಿಗಳು ಸೂಕ್ತ ಉತ್ತರಗಳನ್ನು ಬರೆಯಬೇಕಾಗಿತ್ತು.

ಎರಡನೇ ತರಗತಿಯ ವಿದ್ಯಾರ್ಥಿನಿಯರು ತನ್ನ ಸುಂದರವಾದ ಕೈಬರಹದಲ್ಲಿ ಆಕರ್ಷಕ ಉತ್ತರಗಳನ್ನು ಬರೆದಿದ್ದಾರೆ. ಮೊಟ್ಟೆ ಇಟ್ಟು ಜನ್ಮ ನೀಡುವ ಪ್ರಾಣಿಗಳಲ್ಲಿ ಬಾತುಕೋಳಿ, ಹಾವು, ಮೀನು ಮತ್ತು ಕಾಗೆ ಹೆಸರುಗಳನ್ನು ಬರೆದರೆ, ಮೊಟ್ಟೆ ಇಡದೇ ನೇರವಾಗಿ ಜನ್ಮ ನೀಡುವ ಪ್ರಾಣಿಗಳಾಗಿ ಆನೆ, ನಾಯಿ, ಹಸು ಮತ್ತು ಸುನಿತಾ ಎಂದು ಬರೆದಿದ್ದಾರೆ. ಈ ಉತ್ತರ ಪತ್ರಿಕೆಯನ್ನು ನೋಡಿದ ಶಿಕ್ಷಕಿ, ಸುನಿತಾ ಎಂಬ ಹೆಸರನ್ನು ನೋಡಿ ಒಂದು ಕ್ಷಣ ಶಾಕ್​ ಆಗುತ್ತಾರೆ. ಏಕೆಂದರೆ, ಉತ್ತರ ಪತ್ರಿಕೆಯನ್ನು ಪರಿಶೀಲಿಸಿದ ಶಿಕ್ಷಕಿಯ ಹೆಸರು ಕೂಡ ಸುನಿತಾ.

ಸುನಿತಾ ಅವರು 2ನೇ ತರಗತಿಯ ಕ್ಲಾಸ್​ ಟೀಚರ್​. ನೇರವಾಗಿ ಜನ್ಮ ನೀಡುವವರ ಹೆಸರನ್ನು ಬರೆಯುವುದು ಪ್ರಶ್ನೆಯಾಗಿತ್ತು. ಮನುಷ್ಯರು ಕೂಡ ನೇರವಾಗಿ ಜನ್ಮ ನೀಡುತ್ತಾರೆ ಎಂಬುದನ್ನು ಅರಿತ ವಿದ್ಯಾರ್ಥಿನಿಯರು ಶಿಕ್ಷಕಿಯ ಹೆಸರನ್ನು ಸಹ ಬರೆದಿದ್ದಾರೆ. ಇಲ್ಲಿ ಉತ್ತರ ತಪ್ಪು ಅಂತಾ ಹೇಳಲು ಸಾಧ್ಯವೇ ಇಲ್ಲ. ಹೀಗಾಗಿ ಶಿಕ್ಷಕಿ, ವಿದ್ಯಾರ್ಥಿನಿಯರಿಗೆ ಪೂರ್ಣ ಅಂಕ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಶಿಕ್ಷಕಿ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ವೈರಲ್​ ಆಗಿದೆ.

ಸುತ್ತಮುತ್ತಲಿನ ವಾತಾವರಣವನ್ನು ಗಮನಿಸಿ ಉತ್ತರ ಬರೆಯಲು ಹೇಳಿದ್ದೆ. ಆದರೆ, ನಾನಿದ್ದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಶಿಕ್ಷಕಿ ಸುನಿತಾ ಅವರು ಫೇಸ್​ಬುಕ್​ನಲ್ಲಿ ಬರೆದುಕೊಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಜಿ.ಎಸ್.ಸುನಿತಾ ಅವರು ತಿರುವನಂತಪುರಂನ ಥೈಕಾಡ್ ಮಾಡೆಲ್ ಎಚ್‌ಎಸ್‌ಎಲ್‌ಪಿಎಸ್‌ನಲ್ಲಿ ಶಿಕ್ಷಕಿಯಾಗಿದ್ದಾರೆ. ಎರಡನೇ ತರಗತಿಯ ಮಕ್ಕಳಾದ ಸಮೀರ ಮತ್ತು ಅನಘಾ ಶಿಕ್ಷಕಿಯ ಹೆಸರನ್ನು ಉತ್ತರವಾಗಿ ಬರೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net