ಹೊಸ ವರ್ಷಕ್ಕೆ ಬೆಲೆ ಬರೆ; ಗ್ರಾಹಕ ಸರಕು ಶೇ.4-10ರವರೆಗೆ ತುಟ್ಟಿ ಸಾಧ್ಯತೆ

cvbcvbf
Published on

ನವದೆಹಲಿ: ಕೋವಿಡ್ ರೂಪಾಂತರಿ ಒಮಿಕ್ರಾನ್ ಆತಂಕದ ನಡುವೆಯೂ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ದ ದೇಶದ ಜನತೆಗೆ ಬೆಲೆ ಏರಿಕೆಯ ಆಘಾತ ಎದುರಾಗಿದೆ. ವೇಗವಾಗಿ ಬಿಕರಿಯಾಗುವ ಗ್ರಾಹಕ ಸರಕು (ಎಫ್​ಎಂಸಿಜಿ) ತಯಾರಿಕಾ ಕಂಪನಿಗಳು ಉತ್ಪನ್ನಗಳ ದರವನ್ನು ಮುಂದಿನ ಮೂರು ತಿಂಗಳಲ್ಲಿ ಶೇ. 4ರಿಂದ 10ವರೆಗೆ ಏರಿಸುವ ನಿರ್ಧಾರಕ್ಕೆ ಬಂದಿವೆ. ಇದರಿಂದಾಗಿ ರೆಫ್ರಿಜರೇಟರ್, ವಾಷಿಂಗ್ ಮಷಿನ್ ಇತ್ಯಾದಿ ಅನೇಕ ಗೃಹೋಪಯೋಗಿ ವಸ್ತುಗಳ ಬೆಲೆ ಹೆಚ್ಚುವ ಸುಳಿವು ಸಿಕ್ಕಿದೆ.

2020ರ ಡಿಸೆಂಬರ್​ನಿಂದ ಈವರೆಗೆ ಒಟ್ಟು ನಾಲ್ಕು ಬಾರಿ ಎಫ್​ಎಂಸಿಜಿ ಬೆಲೆ ಏರಿಕೆ ಆಗಿದ್ದು, ಪ್ರಸಕ್ತ ತಿಂಗಳಲ್ಲಿ ರೆಫ್ರಿಜರೇಟರ್, ವಾಷಿಂಗ್ ಮಷಿನ್​ಗಳು ಶೇ. 3ರಿಂದ 5 ದುಬಾರಿ ಆಗಿವೆ. ಮುಂದಿನ ಮೂರು ತಿಂಗಳಲ್ಲಿ ಇವುಗಳ ಬೆಲೆ ಶೇ. 6ರಿಂದ ಶೇ.10 ಏರಿಕೆ ಆಗಬಹುದು ಎಂದು ಹೇಳಲಾಗಿದೆ. ಅಡುಗೆ ಎಣ್ಣೆ ದರ ದ್ವಿಗುಣವಾಗಿರುವುದು ಮತ್ತು ಪ್ಯಾಕಿಂಗ್ ವೆಚ್ಚ ಹೆಚ್ಚಳದ ಕಾರಣ ಹಿಂದೂಸ್ತಾನ್ ಯುನಿಲಿವರ್, ಡಾಬರ್, ಬ್ರಿಟಾನಿಯಾ, ಮೊರಾಕೊ ಇನ್ನಿತರ ಕಂಪನಿಗಳು ಕಳೆದ ಎರಡು ತ್ರೖೆಮಾಸಿಕದಲ್ಲಿ ಶೇ. 5ರಿಂದ 12ರವರೆಗೆ ಬೆಲೆ ಏರಿಕೆ ಮಾಡಿವೆ.

ಈಗ ಡಾಬರ್ ಕಂಪನಿ ಮತ್ತೆ ಬೆಲೆ ಪರಿಷ್ಕರಣೆಗೆ ಸಿದ್ಧವಾಗಿದೆ. ಹಣದುಬ್ಬರದ ಪರಿಸ್ಥಿತಿ ಸುಧಾರಿಸದಿದ್ದರೆ ಅನಿವಾರ್ಯವಾಗಿ ಮತ್ತೆ ಬೆಲೆ ಏರಿಸಬೇಕಾಗುತ್ತದೆ ಎಂದು ಈ ಕಂಪನಿಯ ಸಿಇಒ ಮೋಹಿತ್ ಮಲ್ಹೋತ್ರಾ ತಿಳಿಸಿದ್ದಾರೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ತಯಾರಿಕಾ ವೆಚ್ಚದಲ್ಲಿನ ಹೆಚ್ಚಳದಿಂದಾಗಿ ಲಾಭಾಂಶದ ಗೆರೆ ತೀರಾ ತೆಳುವಾಗಿದೆ. ದರ ಏರಿಕೆ ಮಾಡದಿದ್ದರೆ ಕಂಪನಿ ನಷ್ಟದ ಸುಳಿಗೆ ದೂಡಲ್ಪಡುತ್ತದೆ. ಆದ್ದರಿಂದ ಬೆಲೆ ಪರಿಷ್ಕರಣೆ ಅನಿವಾರ್ಯ ಎಂದು ಪಾರ್ಲೆ ಕಂಪನಿಯ ಹಿರಿಯ ಅಧಿಕಾರಿ ಕೃಷ್ಣರಾವ್ ಬುದ್ಧ ಹೇಳಿದ್ದಾರೆ.

ಕಾರಣಗಳೇನು?
  •  ಕರೊನಾ 2ನೇ ಅಲೆ ಬಳಿಕ ಎಫ್​ಎಂಸಿಜಿ ಮಾರುಕಟ್ಟೆ ಶೇ.12 ವಿಸ್ತರಣೆ ಕಂಡಿದ್ದರೂ ತಯಾರಿಕಾ ವೆಚ್ಚ ಶೇ.22ರಿಂದ 23 ಏರಿಕೆ ಆಗಿರುವುದು
  •  ಉಕ್ಕು, ತಾಮ್ರ, ಅಲ್ಯುಮಿನಿಯಂ, ಪ್ಲಾಸ್ಟಿಕ್ ಮತ್ತು ಬಿಡಿಭಾಗಗಳ ಬೆಲೆ ಸಾರ್ವಕಾಲಿಕ ಏರಿಕೆ

ವಾಹನಗಳೂ ತುಟ್ಟಿ: ಜನವರಿಯಿಂದ ದ್ವಿಚಕ್ರ ಮೋಟಾರು ವಾಹನ ಮತ್ತು ಕಾರುಗಳ ಬೆಲೆ ಪರಿಷ್ಕರಿಸುವುದಾಗಿ ಆಟೊಮೊಬೈಲ್ ಕಂಪನಿಗಳು ಘೋಷಿಸಿವೆ. ಲೋಹ ಮತ್ತಿತರ ಕಚ್ಚಾ ಸಾಮಗ್ರಿಗಳ ಏರಿಕೆ ಕಾರಣ ದರ ಹೆಚ್ಚಳ ಅನಿವಾರ್ಯ ಎಂದು ತಿಳಿಸಿವೆ. ಪ್ರಸಕ್ತ ವರ್ಷದಲ್ಲಿ 2-3 ಸಾರಿ ದರ ಪರಿಷ್ಕರಣೆ ಆಗಿದೆ. ಎಲ್ಲ ಮಾಡಲ್​ಗಳ ದ್ವಿಚಕ್ರ ಮೋಟಾರು ವಾಹನದ ಬೆಲೆ ಕನಿಷ್ಠ 2 ಸಾವಿರ ರೂ.ಏರಿಕೆ ಆಗಲಿದೆ ಎಂದು ಹೀರೋ ಮೋಟೋಕಾರ್ಪ್ ತಿಳಿಸಿದೆ. ಪ್ರಯಾಣಿಕರ ಕಾರಿನ ದರ ಶೇ. 2ರಿಂದ 5ರಷ್ಟು ಹೆಚ್ಚಳ ಆಗಲಿದೆ ಎಂದು ಫೋಕ್ಸ್​ವ್ಯಾಗನ್ ಹೇಳಿದೆ.

ಮಾರುತಿ ಸುಜುಕಿ ಇಂಡಿಯಾ ಡಿಸೆಂಬರ್​ನಲ್ಲಿ ದರ ಪರಿಷ್ಕರಣೆ ಮಾಡಿದ್ದು ಇದೂ ಸೇರಿ ಕಳೆದ 18 ತಿಂಗಳಲ್ಲಿ ಆರು ಬಾರಿ ದರ ಏರಿಸಿದೆ. ಹೊಸ ವರ್ಷದಲ್ಲೂ ದರ ಪರಿಷ್ಕರಣೆಗೆ ಮುಂದಾಗಿದೆ. ಪ್ರಸಕ್ತ ವರ್ಷದಲ್ಲಿ ಶೇ. 4.9ರಷ್ಟು ದರ ಏರಿಕೆ ಆಗಿದೆ. ಆದರೆ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಹೆಚ್ಚಳದ ಪ್ರಮಾಣ ಅತ್ಯಲ್ಪ ಎಂದು ಮಾರುತಿ ಸುಜುಕಿ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.

ಲೋಹದ ಬೆಲೆ ಹೋಲಿಕೆ‘ ಏಪ್ರಿಲ್-ಮೇನಲ್ಲಿ ಉಕ್ಕಿನ ದರ ಪ್ರತಿ ಕೆ.ಜಿ.ಗೆ 38 ರೂ. ಇದ್ದದ್ದು, ಈಗ 77 ರೂ.ಗೆ ಹೆಚ್ಚಿದೆ. ಪ್ರತಿ ಕ್ವಿಂಟಾಲ್ ಕೋಕಿಂಗ್ ಕಲ್ಲಿದ್ದಲಿನ ಬೆಲೆ 180 ರೂ.ನಿಂದ 432 ರೂ.ಗೆ ಏರಿದೆ. 2020ರಲ್ಲಿ ತಾಮ್ರದ ದರ ಪ್ರತಿ ಟನ್​ಗೆ 3.92 ಲಕ್ಷ ರೂ. (5,200 ಡಾಲರ್) ಇದ್ದದ್ದು, 7.31 ಲಕ್ಷ ರೂ. (9,700 ಡಾಲರ್)ಗೆ ಹೆಚ್ಚಳ ಕಂಡಿದೆ. ಅಲ್ಯುಮಿನಿಯಂ ದರ ಟನ್​ಗೆ 1.28 ಲಕ್ಷ ರೂ.(1,700 ಡಾಲರ್)ನಿಂದ 2.03 ಲಕ್ಷ ರೂ. (2,700 ಡಾಲರ್)ಗೆ ಹೆಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net