London Thames River: ಥೇಮ್ಸ್ ನದಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಿರುವುದನ್ನು ಕಂಡು ಲಂಡನ್‌ನಲ್ಲಿರುವ ಭಾರತೀಯ ಮಹಿಳೆಯೊಬ್ಬರು ಪರಿಸರ ಕಾಳಜಿ ಬಗ್ಗೆ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ‘ನಾನು ಭಾರತೀಯಳಾಗಿರುವುದಕ್ಕೆ ತುಂಬಾ ಹೆಮ್ಮೆ ಇದೆ’ ಎಂದು ಹೇಳಿರುವ ಅವರ ಇನ್‌ಸ್ಟಾಗ್ರಾಮ್ ವಿಡಿಯೋ ಇದೀಗ ಗಮನ ಸೆಳೆಯುತ್ತಿದೆ.
ವಿಡಿಯೋದಲ್ಲಿ ಥೇಮ್ಸ್ ನದಿಯ ಸ್ವಚ್ಛತೆ ಬಗ್ಗೆ ಮಾತನಾಡಿರುವ ಅವರು, ನೀರಿನಲ್ಲಿ ಕಸ, ಎಲೆ ಕೂಡ ಕಾಣಿಸಲ್ಲ ಎಂದಿದ್ದಾರೆ. ನದಿಯ ಸುತ್ತ ಹಲವು ನಿಯಮಗಳಿದ್ದು, ಇಲ್ಲಿ ಈಜುವುದು ಮತ್ತು ಪಕ್ಷಿಗಳಿಗೆ ಆಹಾರ ನೀಡುವುದಕ್ಕೂ ನಿರ್ಬಂಧವಿದೆ ಎಂದು ಹೇಳಿದ್ದಾರೆ.
ಗಣೇಶ ಚತುರ್ಥಿ ಆಚರಣೆ ಮುಗಿದ ಬಳಿಕ ಗಣೇಶ ಮೂರ್ತಿಯನ್ನು ವಿಸರ್ಜಿಸುವ ಸಂಪ್ರದಾಯದ ಬಗ್ಗೆ ಅವರು ವ್ಯಂಗ್ಯವಾಗಿ ಮಾತನಾಡಿದ್ದಾರೆ. ‘ಸಂಸ್ಕೃತಿಯನ್ನು ಉಳಿಸಬೇಕು ಅಲ್ವಾ? ಹಾಗಾಗಿ ಗಣೇಶ ಮೂರ್ತಿಯನ್ನು ಥೇಮ್ಸ್‌ಗೆ ಹಾಕೋಣ. ಅದರಿಂದ ಥೇಮ್ಸ್ ಕೂಡ ಶುದ್ಧವಾಗುತ್ತೆ, ನಮ್ಮ ಜವಾಬ್ದಾರಿಯೂ ಮುಗಿಯುತ್ತೆ’ ಎಂಬ ಅರ್ಥದಲ್ಲಿ ಅವರು ವ್ಯಂಗ್ಯ ಮಾಡಿದ್ದಾರೆ. ಕೊನೆಯಲ್ಲಿ ‘ವಾವ್! ನನಗೆ ತುಂಬಾ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ.
ತಮ್ಮ ಪೋಸ್ಟ್‌ನ ಕ್ಯಾಪ್ಶನ್‌ನಲ್ಲೂ ಮಹಿಳೆ ವಿಚಾರವನ್ನು ಹೇಳಿದ್ದಾರೆ. ಸಂಸ್ಕೃತಿ ಮತ್ತು ಸಂಪ್ರದಾಯಗಳು ಸುಂದರವಾಗಿವೆ. ಆದರೆ ನಾವು ಎಲ್ಲೇ ಇದ್ದರೂ ಅಲ್ಲಿನ ಪರಿಸರವನ್ನು ಗೌರವಿಸುವ ರೀತಿಯಲ್ಲಿ ಅವುಗಳನ್ನು ಆಚರಿಸಬೇಕು ಎಂಬ ಸಂದೇಶ ನೀಡಿದ್ದಾರೆ.
ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದು, ಸಂಪ್ರದಾಯದ ಆಚರಣೆ ಮತ್ತು ಪರಿಸರ ಕಾಳಜಿಯ ಬಗ್ಗೆ ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)