Uttar Pradesh Rain: ಉತ್ತರ ಪ್ರದೇಶದಲ್ಲಿ ಭಾರಿ ಮಳೆ, ಗುಡುಗು-ಸಿಡಿಲಿನ ಅಬ್ಬರಕ್ಕೆ ಕಳೆದ 60 ಗಂಟೆಗಳಲ್ಲಿ 56 ಮಂದಿ ಮೃತಪಟ್ಟಿದ್ದು, 46 ಜನರು ಗಾಯಗೊಂಡಿದ್ದಾರೆ. 107 ಪ್ರಾಣಿಗಳು ಮೃತಪಟ್ಟಿದ್ದು, 1,021 ಮನೆಗಳಿಗೆ ಹಾನಿಯಾಗಿದೆ ಎಂದು ಪರಿಹಾರ ಆಯುಕ್ತ ಡಾ. ಹೃಷಿಕೇಶ್ ಭಾಸ್ಕರ್ ಯಶೋದ್ ತಿಳಿಸಿದ್ದಾರೆ.
ಮಳೆ ಅವಾಂತರದಲ್ಲಿ ಸೀತಾಪುರದಲ್ಲಿ 7 ಸಾವು ವರದಿಯಾಗಿದ್ದು, ಲಖಿಂಪುರ ಖೇರಿ, ಬಹ್ರೈಚ್ ಮತ್ತು ಬಲರಾಮ್‌ಪುರದಲ್ಲಿ ತಲಾ 5 ಮಂದಿ ಮೃತಪಟ್ಟಿದ್ದಾರೆ. ಅಯೋಧ್ಯೆ ಮತ್ತು ಗೋರಖ್‌ಪುರದಲ್ಲಿ ತಲಾ 4 ಸಾವು ಸಂಭವಿಸಿದೆ. ಹರ್ದೋಯಿಯಲ್ಲಿ 7 ಮಂದಿ ಗಾಯಗೊಂಡಿದ್ದು, ಮೈನ್‌ಪುರಿ ಮತ್ತು ಶ್ರಾವಸ್ತಿಯಲ್ಲಿ ತಲಾ 5 ಜನರಿಗೆ ಗಾಯಗಳಾಗಿವೆ.
ಸೆಪ್ಟೆಂಬರ್ 25ರಿಂದ 27ರ ಬೆಳಗ್ಗಿನವರೆಗೆ ರಾಜ್ಯದಲ್ಲಿ 66.5 ಮಿ.ಮೀ ಮಳೆ ದಾಖಲಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 7.6 ಮಿ.ಮೀ ಮಳೆಯಾಗಬೇಕಿತ್ತು. ಅಂದರೆ ಶೇ.775ರಷ್ಟು ಹೆಚ್ಚು ಮಳೆಯಾಗಿದೆ. 75 ಜಿಲ್ಲೆಗಳ ಪೈಕಿ 56 ಜಿಲ್ಲೆಗಳಲ್ಲಿ ಅಧಿಕ ಮಳೆ ದಾಖಲಾಗಿದೆ. ಫರೂಕಾಬಾದ್‌ನಲ್ಲಿ ಶೇ.7,385, ಕನ್ನೌಜ್‌ನಲ್ಲಿ ಶೇ.5,664 ಮತ್ತು ಶಹಜಹಾನ್‌ಪುರದಲ್ಲಿ ಶೇ.4,408ರಷ್ಟು ಅಧಿಕ ಮಳೆಯಾಗಿದೆ.
ಮಳೆಯಿಂದ ರಾಜ್ಯಾದ್ಯಂತ 1,021 ಮನೆಗಳು ಹಾನಿಗೊಂಡಿವೆ. ಹರ್ದೋಯಿಯಲ್ಲಿ 272 ಹಾಗೂ ಸೀತಾಪುರದಲ್ಲಿ 108 ಮನೆಗಳಿಗೆ ಹಾನಿಯಾಗಿದೆ. ಹರ್ದೋಯಿಯಲ್ಲಿ 28 ಪ್ರಾಣಿಗಳು ಮೃತಪಟ್ಟಿದ್ದು, ಸೀತಾಪುರದಲ್ಲಿ 16 ಮತ್ತು ಕನ್ನೌಜ್‌ನಲ್ಲಿ 14 ಪ್ರಾಣಿಗಳ ಸಾವು ವರದಿಯಾಗಿದೆ.
ಜಲಾವೃತ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಸಿಲುಕಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ನೆರವು ನೀಡಲಾಗುತ್ತಿದೆ. ಹಾನಿಗೊಳಗಾದ ಮನೆಗಳು ಮತ್ತು ಬೆಳೆಗಳ ಪರಿಶೀಲನೆ ನಡೆಸಿ, ನಿಯಮದಂತೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ನೀರು ನಿಂತಿರುವ ಪ್ರದೇಶಗಳಿಗೆ ಅನಗತ್ಯವಾಗಿ ತೆರಳದಂತೆ ಹಾಗೂ ವೇಗವಾಗಿ ಹರಿಯುವ ನದಿಗಳು, ಹಳ್ಳಗಳು ಮತ್ತು ಚರಂಡಿಗಳಿಂದ ದೂರ ಇರುವಂತೆ ಅಧಿಕಾರಿಗಳು ಜನರಿಗೆ ಮನವಿ ಮಾಡಿದ್ದಾರೆ. (ಏಜೆನ್ಸೀಸ್)