

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಶ್ರೀ ಕ್ಷೇತ್ರ ಹೆಗಲತ್ತಿಯ ಶ್ರೀ ನಾಗಯಕ್ಷೆ ಸೇವಾ ಸಮಿತಿಯಿಂದ ಶ್ರೀ ನಾಗಯಕ್ಷೆ ದೇವಿ, ನವಗ್ರಹ ಮತ್ತು ಶ್ರೀ ನಾಗದೇವರ 11ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ ಹಾಗೂ ಶತಚಂಡಿಕಾಹವನವು ಬುಧವಾರ ಆರಂಭಗೊಂಡಿದ್ದು ಫೆ.9ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಭಕ್ತ, ಭಾವಸಾರ ಕ್ಷತ್ರಿಯ ಸಮಾಜದ ಮುಖಂಡ ಗಜೇಂದ್ರನಾಥ ಹೇಳಿದರು.
ಬಂಗಾರಮಕ್ಕಿಯ ಧರ್ಮದರ್ಶಿ ಶ್ರೀ ಮಾರುತಿ ಗುರೂಜಿ ಮತ್ತು ಕಲ್ಪನಮ್ಮ ಸಂತೋಷ್ ಅವರ ಉಪಸ್ಥಿತಿಯಲ್ಲಿ ಐದು ದಿನ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಬುಧವಾರ ಗ್ರಾಮದೇವರಾದ ಶ್ರೀ ಕಂಬದ ನರಸಿಂಹ ಸ್ವಾಮಿ ಸನ್ನಿಧಿಯಲ್ಲಿ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.6ಮತ್ತು 7ರಂದು ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಲಿವೆ. 8ರಂದು ಬೆಳಗ್ಗೆ 9 ಗಂಟೆಗೆ 11 ಕ್ಷೇತ್ರಗಳ ದೇವರ ಆರಾಧನೆ, ಶತಚಂಡಿಕಾಹವನ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಇರಲಿದೆ. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಮುಖಂಡರಾದ ಆಯನೂರು ಮಂಜುನಾಥ, ಎಂ.ಶ್ರೀಕಾಂತ್, ಕೆ.ಇ.ಕಾಂತೇಶ್, ಉದ್ಯಮಿ ನಿವೇದನ್ ನೆಂಪೆ, ಪ್ರಗತಿಪರ ಕೃಷಿಕ ಕುಳ್ಳುಂಡೆ ನಾಗರಾಜ್ ಗೌಡ ಉಪಸ್ಥಿತರಿರುವರು ಎಂದರು.
ಅಂದು ರಾತ್ರಿ 8ಕ್ಕೆ ಶ್ರೀಕ್ಷೇತ್ರ ಗುತ್ತಿಯಡೇಹಳ್ಳಿಯ ಮಾಳೂರು ಸೀಮೆ ಶ್ರೀ ಗುತ್ಯಮ್ಮ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ನಾಗನಂದನ ಯಕ್ಷಗಾನ ಪ್ರದರ್ಶನ ಇರಲಿದೆ. 9ರಂದು ಬೆಳಗ್ಗೆ 10ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಮಧ್ಯಾಹ್ನ ಅನ್ನಸಂತರ್ಪಣೆ, ನಂತರ ಪಲ್ಲಕ್ಕಿ ದೇವರು ಸ್ವಕ್ಷೇತ್ರಕ್ಕೆ ತೆರಳಲಿವೆ ಎಂದು ಹೇಳಿದರು. ಭಕ್ತರಾದ ಕೆ.ಎಚ್.ಮಹೇಶ್, ಶ್ರೀಕಾಂತ್, ವಿನಾಯಕ ತಾಂದ್ಲೆ, ಇ.ವಿಶ್ವಾಸ್, ಶಬರೀಶ್ ಸುದ್ದಿಗೋಷ್ಠಿಯಲ್ಲಿದ್ದರು.