ನಾಡಿಗೆ ಬಂತು ಶ್ರಾವಣ ಮಠ-ಮಂದಿರಗಳಲ್ಲಿ ಪೂಜೆ, ಪುರಾಣ

-6881208581787
Published on

| ಪ್ರಶಾಂತ ರಿಪ್ಪನ್​ಪೇಟೆ

ವೈಷ್ಣವ ಪರಂಪರೆಯಲ್ಲಿ ಚಾತುರ್ವಸ್ಯ ವ್ರತ ಆರಂಭವಾಗಿದ್ದು, ಸನ್ಯಾಸಿಗಳು ಆಷಾಢ ಪೌರ್ಣಿಮೆಯಿಂದ ವ್ರತದಲ್ಲಿ ನಿರತರಾಗಿದ್ದಾರೆ. ಚಾತುರ್ವಸ್ಯದ ನಡುವೆಯೇ ಬರುವ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ, ಪ್ರವಚನಗಳು ನಡೆಯುತ್ತವೆ. ಶೃಂಗೇರಿ ಜಗದ್ಗುರುಗಳು ಶ್ರಾವಣದಲ್ಲಿ ವಿಶೇಷವಾಗಿ ಚಂದ್ರಮೌಳೇಶ್ವರ ಶಿವಲಿಂಗಕ್ಕೆ ನಿತ್ಯಪೂಜೆ ಸಲ್ಲಿಸಲಿದ್ದಾರೆ. ಕೂಡಲಿ ಮಠದ ಹಿರಿಯ ಪೂಜ್ಯರು ದಾವಣಗೆರೆಯಲ್ಲಿ, ಕಿರಿಯ ಪೂಜ್ಯರು ಬೆಂಗಳೂರಿನ ಶಾಖಾ ಮಠದಲ್ಲಿ ಶ್ರಾವಣಪೂಜೆಯನ್ನು ಮುಂದುವರಿಸಲಿದ್ದಾರೆ.

ಉಡುಪಿ ಅಷ್ಟಮಠಗಳ ಪೈಕಿ ಪೇಜಾವರ ಮತ್ತು ಶೀರೂರು ಮಠದ ಯತಿಗಳು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಪೂಜೆ-ಪ್ರವಚನ ನಡೆಸಲಿದ್ದಾರೆ. ಹರಿಹರಪುರದ ಶ್ರೀಸ್ವಯಂ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು ಬೆಂಗಳೂರಿನ ಜಯನಗರದ ಕೋದಂಡರಾಮ ದೇವಾಲಯದಲ್ಲಿ ವ್ರತ ಕೈಗೊಂಡಿದ್ದು, ಶ್ರಾವಣ ಅನುಷ್ಠಾನ ಮುಂದುವರಿಸಲಿದ್ದಾರೆ. ವೀರಶೈವ ಪರಂಪರೆಯಲ್ಲಿ ಶ್ರಾವಣ ಮಾಸವನ್ನು ವ್ರತವಾಗಿ ಆಚರಿಸುವ ಪದ್ಧತಿ ಇದೆ. ಪಂಚಪೀಠಗಳ ಪೀಠಾಚಾರ್ಯರು, ಶಾಖಾಮಠಗಳ ಮಠಾಧೀಶರು, ವಿವಿಧ ಪರಂರೆಯ ಹರ-ಗುರು-ಚರಮೂರ್ತಿಗಳು ಒಂದು ತಿಂಗಳ ಪರ್ಯಂತ ಮಠದ ಪರಿಸರದಲ್ಲಿ ನಿತ್ಯ ವಿಶೇಷ ಪೂಜೆ, ಪ್ರವಚನ, ವಚನ ಗಾಯನ, ಶಿವಾನುಭವವನ್ನು ಹಮ್ಮಿಕೊಳ್ಳಲಿದ್ದಾರೆ.

ಶ್ರೀರಂಭಾಪುರಿ ಜಗದ್ಗುರುಗಳ ತಪೋನುಷ್ಠಾನ: ಬಾಳೆಹೊನ್ನೂರು ಶ್ರೀಜಗದ್ಗುರು ರಂಭಾಪುರಿ ವೀರಸಿಂಹಾಸನ ಪೀಠದಲ್ಲಿ ಡಾ.ವೀರಸೋಮೇಶ್ವರ ಜಗದ್ಗುರುಗಳ 34ನೇ ವರ್ಷದ ಶ್ರಾವಣ ತಪೋನುಷ್ಠಾನವು ಜುಲೈ 25ರಿಂದ ಆಗಸ್ಟ್ 23ರವರೆಗೆ ನಡೆಯಲಿದೆ. ಪ್ರತಿನಿತ್ಯ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಸಂಜೆ ಶ್ರೀಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ನಡೆಯಲಿದ್ದು, ಪ್ರತಿ ಸೋಮವಾರ, ಗುರುವಾರ ಜಗದ್ಗುರುಗಳ ಆಶೀರ್ವಚನ ಇರಲಿದೆ. ನೆಗಳೂರು ಮಠದ ಶ್ರೀಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರವಚನ ನಡೆಸಿಕೊಡಲಿದ್ದಾರೆ. ಪ್ರತಿದಿನ ಬೆಳಗ್ಗೆ ಶ್ರೀಜಗದ್ಗುರು ರೇಣುಕಾಚಾರ್ಯರಿಗೆ, ಭದ್ರಕಾಳಿ ಸಮೇತ ಕ್ಷೇತ್ರನಾಥ ಶ್ರೀವೀರಭದ್ರ ಸ್ವಾಮಿ, ಸೋಮೇಶ್ವರ ಮಹಾಲಿಂಗ ಹಾಗೂ ಲಿಂಗೈಕ್ಯ ಜಗದ್ಗುರುಗಳ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಲಿದೆ.

ಶ್ರೀಶೈಲ ಕ್ಷೇತ್ರದಲ್ಲಿ ಪ್ರವಚನ: ಶ್ರೀಶೈಲ ಕ್ಷೇತ್ರದಲ್ಲಿ ವಿಶೇಷ ಪೂಜೆ, ಪ್ರವಚನ ಆಯೋಜಿಸಲಾಗಿದೆ. ಶ್ರೀಶೈಲ ಜಗದ್ಗುರುಗಳ 16ನೇ ವರ್ಷದ ಅನುಷ್ಠಾನವು ಜುಲೈ 28 ರಿಂದ ಆರಂಭವಾಗಲಿದ್ದು, ಪ್ರತಿದಿನ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಸಂಜೆ ಆದ್ಯ ವಚನಕಾರ ಶ್ರೀದೇವರ ದಾಸಿಮಯ್ಯನವರ ಪುರಾಣ ಪ್ರವಚನ ನಡೆಯಲಿದೆ. ಜೈನಾಪುರ ಮಠದ ಶ್ರೀರೇಣುಕ ಶಿವಾಚಾರ್ಯ ಸ್ವಾಮಿಗಳು ಪ್ರವಚನ ಮಾಡಲಿದ್ದಾರೆ. ಭಕ್ತರಿಗೆ ನಿತ್ಯ ದಾಸೋಹ, ಜಗದ್ಗುರು ಪಂಡಿತಾ ರಾಧ್ಯರಿಗೆ, ಬ್ರಮರಾಂಭ ಸಮೇತ ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಪೂಜೆ, ಉತ್ಸವಗಳು ನಡೆಯಲಿವೆ.

ಶ್ರೀಉಜ್ಜಯಿನಿ, ಕೇದಾರ, ಕಾಶೀ ಜಗದ್ಗುರುಗಳ ಅನುಷ್ಠಾನ: ಶ್ರೀಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರ 14ನೇ ವರ್ಷದ ಶ್ರಾವಣ ಅನುಷ್ಠಾನವು ಜುಲೈ 25ರಿಂದ ಆರಂಭಗೊಳ್ಳಲಿದೆ. ಪ್ರತಿದಿನ ಕ್ಷೇತ್ರನಾಥ ಮರುಳಸಿದ್ಧೇಶ್ವರ ಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಕೇದಾರ ಪೀಠದ ಜಗದ್ಗುರು ರಾವಲ್ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ 53ನೇ ವರ್ಷದ ತಪೋನುಷ್ಠಾನವು ಮಹಾರಾಷ್ಟ್ರದ ನಾಂದೇಡ್ ನಗರದ ಶಿರಾಡೋಣ ಮಠದಲ್ಲಿ ಜುಲೈ 25ರಿಂದ ನಡೆಯಲಿದೆ.

ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತೆಲಂಗಾಣದ ಶಾದ್​ನಗರ ಗುರುಕುಲದಲ್ಲಿ ಜುಲೈ 25ರಂದು ಶ್ರಾವಣ ಅನುಷ್ಠಾನ ಆರಂಭಿಸಲಿದ್ದು, ಆ.8ರಂದು ತಮ್ಮ 79ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಕಡೆ ಧರ್ಮಯಾತ್ರೆ ಕೈಗೊಳ್ಳುವ ಅವರು ಆ.10ರಿಂದ ಕಾಶೀ ಪೀಠದಲ್ಲಿ ಅನುಷ್ಠಾನ ಮುಂದುವರಿಸಲಿದ್ದು, ಆ.23ರಂದು ಮಂಗಲಗೊಳ್ಳಲಿದೆ.

ಶಿವಾನುಭವ ಕಾರ್ಯಕ್ರಮ: ಅಬ್ಬೆತುಮಕೂರು ಸಿದ್ಧಸಂಸ್ಥಾನದ ಸದ್ಗುರು ಶ್ರೀವಿಶ್ವಾರಾಧ್ಯ ಮಠದಲ್ಲಿ ತಿಂಗಳ ಪರ್ಯಂತ ಶಿವಾನುಭವ ಕಾರ್ಯಕ್ರಮ ನಡೆಯಲಿದೆ. ಶ್ರೀಗಂಗಾಧರ ಶಿವಾಚಾರ್ಯ ಸ್ವಾಮಿಗಳು ಇಂದು (ಗುರುವಾರ) ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಜು.25ರಿಂದ ಅನುಷ್ಠಾನ ಕೈಗೊಳ್ಳಲಿದ್ದಾರೆ.

ಶ್ರಾವಣ ಅಭಿಷೇಕ: ರಾಣಿಬೆನ್ನೂರು ತಾಲೂಕಿನ ಲಿಂಗದಹಳ್ಳಿ ಹಿರೇಮಠ ದಲ್ಲಿರುವ ಸ್ಪಟಿಕಲಿಂಗಕ್ಕೆ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಮಹಾರುದ್ರಾಭಿಷೇಕ, ವಿಶೇಷ ಪೂಜೆ ಏರ್ಪಡಿಸಲಾಗಿದೆ.

ಮಠ-ಮಂದಿರಗಳಲ್ಲಿ ಕಾರ್ಯಕ್ರಮ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಉಟಕನೂರು ಶ್ರೀಅಡವಿಸಿದ್ದೇಶ್ವರ ಮಠದ ಪರಮ ತಪಸ್ವಿ ಶ್ರೀಮರಿಬಸವಲಿಂಗ ತಾತನಾವರ ಕರ್ತೃ ಗದ್ದುಗೆಗೆ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಎಡೆಯೂರು ಕ್ಷೇತ್ರದ ಶ್ರೀರೇಣುಕ ಶಿವಾಚಾರ್ಯ ಸ್ವಾಮಿಗಳು, ಬೆಂಗಳೂರಿನ ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಶಿವಗಂಗೆ ಮೇಲಣಗವಿ ಮಠದ ಡಾ.ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳು, ಹುಕ್ಕೆರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಶ್ರಾವಣ ಮಾಸದ ಅಂಗವಾಗಿ ಜು.25ರಿಂದ ಒಂದು ತಿಂಗಳ ಪರ್ಯಂತ ಭಕ್ತರ ಮನೆಯಿಂದ ಮನೆಗೆ ಶಿವಾನುಭವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net