ಪರಿಸರ ಸ್ನೇಹಿ ಗಣೇಶ ಮೂರ್ತಿ ಪೂಜಿಸಿ

ganesḩa
ಕೋಲಾರ ನಗರದ ರವಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಅರಿಶಿಣ ಗಣಪತಿ ತಯಾರಿಸುವ ಕಾರ್ಯಗಾರ ನಡೆಯಿತು.
Published on

ಕೋಲಾರ: ಪರಿಸರಕ್ಕೆ ಮಾರಕವಾಗುವ ಗಣೇಶ ಮೂರ್ತಿಗಳನ್ನು ಯಾವುದೇ ಕಾರಣಕ್ಕೂ ಪ್ರತಿಷ್ಠಾಪಿಸಬಾರದು ಎಂದು ಜಿಲ್ಲಾ ಪರಿಸರ ಅಧಿಕಾರಿ ರಾಜು ಹೇಳಿದರು.

ನಗರದ ರವಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರೋಟರಿ ಕೋಲಾರ ನಂದಿನಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಆಯೋಜಿಸಿದ್ದ ಅರಿಶಿಣ ಗಣಪತಿ ತಯಾರಿಸುವ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಗಣೇಶ ಹಬ್ಬ ಸಮೀಪಿಸುತ್ತಿದ್ದು, ಈಗಾಗಲೇ ರಾಸಾಯನಿಕ ಬಣ್ಣ ಬಳಿದ ಹಾಗೂ ಪಿಒಪಿ ಗಣಪಗಳು ಮಾರುಕಟ್ಟೆಗೆ ಬಂದಿವೆ. ಆದರೆ ಯಾರೂ ಸಹ ಇಂತಹ ಗಣಪ ಮೂರ್ತಿಗಳನ್ನು ಕೊಂಡುಕೊಳ್ಳದೆ ತಾವೇ ತಮ್ಮಮನೆಗೆ ಬೇಕಾದ ಅರಿಶಿಣ, ಜೇಡಿ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸಿ ಪೂಜಿಸಬೇಕು ಎಂದರು.
ಆಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಪಾಲಕರಿಗೆ ತಿಳಿಹೇಳಬೇಕು ಎಂದರು.
ಸ್ಕೌಟ್ಸ್ ಸಂಸ್ಥೆ ಜಿಲ್ಲಾ ಆಯುಕ್ತ ಕೆ.ಆರ್.ಸುರೇಶ್ ಮಾತನಾಡಿ, ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಪರಿಸರ ಸ್ನೇಹಿ ಗಣಪತಿಗಳನ್ನು ಹೇಗೆ ಮಾಡುವ ಹಾಗೂ ಬಳಸುವ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಜತೆಗೆ ಶಿಕ್ಷಣ ಸಂಸ್ಥೆಗಳು ಸಹ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆ ಕುರಿತು ಮಾರ್ಗ ಸೂಚನೆ ನೀಡಬೇಕು ಎಂದು ಹೇಳಿದರು.
ರೋಟರಿ ಕೋಲಾರ ನಂದಿನಿ ಅಧ್ಯಕ್ಷ ಸ್ಕೌಟ್ ವಿ.ಬಾಬು ಮಾತನಾಡಿ, ಸಂಸ್ಥೆಯಿಂದ ಹದಿನೈದು ಸಾವಿರ ವಿದ್ಯಾರ್ಥಿಗಳಿಗೆ ನೇರವಾಗಿ ಅರಿಶಿಣ ಗಣಪತಿಯನ್ನು ತಯಾರಿಸುವ ಬಗ್ಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ತರಬೇತಿ ಪಡೆದ ಪ್ರತಿ ವಿದ್ಯಾರ್ಥಿ ಕನಿಷ್ಠ ಐದು ಗಣಪತಿಗಳನ್ನು ತಯಾರಿಸಿ ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ರವಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸುಷ್ಮಾ ಮಾತನಾಡಿ, ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಆಶಯಗಳು ಪರಿಸರಕ್ಕೆ ಪೂರಕವಾಗಿದ್ದು, ಇಂತಹ ಕಾರ್ಯಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಮತ್ತು ಪಾಲಕರು ಭಾಗವಹಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸ್ಕೌಟ್ಸ್ ಸಂಸ್ಥೆಯ ವಿಠಲ್ ರಾವ್, ಉಮಾದೇವಿ, ಹರೀಶ್, ಧನಂಜಯ್, ಹೇಮಾವತಿ, ಶಾಲಾ ಮುಖ್ಯ ಶಿಕ್ಷಕಿ ಭವಾನಿ, ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net