ಇದು ವಿಶ್ವದ ಅತ್ಯಂತ ದುಬಾರಿ ಸಾಬೂನು: ಬೆಲೆ ಕೇಳಿದ್ರೆ ತಲೆ ತಿರುಗುವುದು ಗ್ಯಾರೆಂಟಿ..!

Soap
Published on

ದುಬೈ: ಹದಿನೈದನೇ ಶತಮಾನದಿಂದಲೂ ಸಾಬೂನು ತಯಾರಿಕ ಕಾರ್ಖಾನೆ ಹೊಂದಿರುವ ದುಬೈನ ಸಣ್ಣ ಕುಟುಂಬವೊಂದು ವಿಶ್ವದಲ್ಲೇ ಅತ್ಯಂತ ದುಬಾರಿ ಸಾಬೂನು ತಯಾರಿಸಿರುವುದಾಗಿ ಹೇಳಿಕೊಂಡಿದೆ.

ಸಾಬೂನಿನ ಬೆಲೆ 2,800 ಅಮೆರಿಕ ಡಾಲರ್​ ಆಗಿದ್ದು, ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 2,06,955 ರೂ. ವೆಚ್ಚವಾಗುತ್ತದೆ. ಹ್ಯಾಂಡ್​ಮೇಡ್​ ಸಾಬೂನಿನ ಬ್ರ್ಯಾಂಡ್​​ ಆಗಿರುವ "ಖಾನ್​ ಐ ಸಾಬೂನ್"​ ಕಂಪನಿಯನ್ನು ಲೆಬನಾನ್​ ಮತ್ತು ತ್ರಿಪೋಲಿ ಮೂಲದ ಬ್ಯಾಡರ್​ ಆ್ಯಂಡ್​ ಸನ್ಸ್ ಸೃಷ್ಟಿಸಿದೆ. ಈ ಕಂಪನಿ ವಿವಿಧ ರೀತಿಯ ದುಬಾರಿ ಸಾಬೂನು ತಯಾರಿಸುತ್ತದೆ. ಇಷ್ಟೇ ಅಲ್ಲದೆ, ಸ್ವಾಭಾವಿಕ ಸುಗಂಧದ್ರವ್ಯ ಮತ್ತು ಅಗತ್ಯ ಎಣ್ಣೆಗಳು ಸೇರಿದಂತೆ ಅನೇಕ ಚರ್ಮ ರಕ್ಷಕ ಉತ್ಪನ್ನಗಳನ್ನು ಕಂಪನಿ ತಯಾರಿಸುತ್ತದೆ.

ಕಂಪನಿಯ ವಿಶೇಷ ಉತ್ಪನ್ನಗಳನ್ನು ದುಬೈ ಮತ್ತು ಯುಎಇನ ಪ್ರಮುಖವಾದ ಸ್ಟೋರ್​ಗಳಲ್ಲಿ ಮಾತ್ರ ನೋಡಬಹುದು ಮತ್ತು ಖರೀದಿಸಬಹುದು. ಆದಾಗ್ಯು ದುಬಾರಿ ಉತ್ಪನ್ನಗಳು ಕೇವಲ ವಿಶೇಷ ವ್ಯಕ್ತಿಗಳು ಮತ್ತು ಗಣ್ಯರಿಗೆ ಮಾತ್ರ ಮಾಡಲ್ಪಟ್ಟಿದೆ. ಇಂತಹ ದುಬಾರಿ ಸಾಬೂನನ್ನು ಮೊದಲ ಬಾರಿಗೆ 2013ರಲ್ಲಿ ಮಾಡಲಾಯಿತು. ಬಳಿಕ ಅದನ್ನು ಕತಾರ್​ನ ಪ್ರಥಮ ಮಹಿಳೆಗೆ ಉಡುಗೊರೆಯಾಗಿ ನೀಡಲಾಗಿತ್ತು.

ದುಬಾರಿ ಸಾಬೂನನ್ನು ಚಿನ್ನ ಮತ್ತು ವಜ್ರದ ಪುಡಿಯಿಂದ ಮಾಡಲಾಗುತ್ತದೆ. ನೋಡಲು ಚೀಸ್​ ರೂಪದಲ್ಲಿ ಕಂಡರೂ ದುಬಾರಿ ಚೀಸ್​ ತುಣುಕನ್ನು ಸಾಬೂನಿನಲ್ಲಿ ಬಳಸಲಾಗಿರುತ್ತದೆ. 17 ಗ್ರಾಂ 24 ಕ್ಯಾರೆಟ್​ ಗೋಲ್ಡ್​, ಕೆಲವೇ ಗ್ರಾಂ ಡೈಮಂಡ್​ ಪೌಡರ್​, ಸಾವಯವ ಜೇನು, ಶುದ್ಧವಾದ ಆಲಿವ್​ ಎಣ್ಣೆ, ಖರ್ಜುರ ಸೇರಿದಂತೆ ಮುಂತಾದ ವಿಶೇಷ ಪದಾರ್ಥಗಳಿಂದ ಸಾಬೂನು ತಯಾರಿಸಲಾಗಿದೆ.

ಸಾಬೂನಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್​ ಆಗಿದ್ದು, ಕಂಪನಿಯ ಸಿಇಒ ಸಾಬೂನನ್ನು ಬಹ್ರೇನಿ ನಟಿ ಮತ್ತು ಸೂಪರ್​ಸ್ಟಾರ್​ ಶೈಲಾ ಸಾಬ್ತ್​ರಿಗೆ ನೀಡುತ್ತಿರುವುದನ್ನು ನೋಡಬಹುದಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net