

ಹೊಸದಿಲ್ಲಿ: ಜಗತ್ತಿನ ಮೂಲೆ ಮೂಲೆಗೂ ತೆರಳಿ, ಅಲ್ಲಿನ ಸ್ಥಳಗಳನ್ನು ಅನ್ವೇಷಣೆ ಮಾಡಿ, ಅದರ ಬಗ್ಗೆ ತಮ್ಮ ಆಪ್ತರು, ಕುಟುಂಬಸ್ಥರು, ಸ್ನೇಹಿತರು ಹೀಗೆ ಇತರರಿಗೂ ತಿಳಿಸುವ ಪ್ರಯ್ನತದಲ್ಲಿ ಇಂದಿಗೂ ಜನ ಮುಂಚೂಣಿಯಲ್ಲಿದ್ದಾರೆ. ಆ ವಿಷಯದಲ್ಲಿ ಸೋಲುವ ಮಾತೇ ಇಲ್ಲ ಎನ್ನಬಹುದು. ಯಾಕಂದ್ರೆ, ಲೋಕ ಸುತ್ತುವ ಆಸೆ ಇಂದು ಅನೇಕರ ಮಹತ್ವ ಗುರಿಯಾಗಿದೆ ಎಂದೇ ಹೇಳಬಹುದು. ಹೊರ ಪ್ರಪಂಚದಲ್ಲಿನ ಹೇಳಲಾಗದ ವಿಷಯ, ಇಲ್ಲಿಯವರೆಗೆ ತಿಳಿಯದ ಅಚ್ಚರಿಯ ಸಂಗತಿಗಳನ್ನು ಇಂದಿನ ಹೊಚ್ಚ ಹೊಸ ಟೆಕ್ನಾಲಜಿಯ ಆವಿಷ್ಕಾರಗಳ ಮೂಲಕ ತಿಳಿಸಬೇಕೆಂಬ ಪ್ರಯತ್ನಗಳು ಸದ್ಯ ಚಾಲ್ತಿಯಲ್ಲಿದೆ. ಆದ್ರೆ...ಇವತ್ತಿಗೂ ಕೆಲವು ಜಾಗಗಳ ಹೆಸರು ಕೇಳಿದ್ರೆ, ಜನರು ಅತ್ತ ಹೋಗಲು ಹೆಜ್ಜೆಯಿಡಲು ಹಿಂದೇಟು ಹಾಕುತ್ತಾರೆ. ಅಂತಹ ಒಂದು ಭಯಂಕರ ಸ್ಥಳಕ್ಕೆ ಈ ಗ್ರಾಮದ ಹೆಸರು ಕೂಡ ಸೇರಿಕೊಂಡಿದೆ.
ಕುಲಧಾರ ಗ್ರಾಮದ ಹೆಸರನ್ನು ಬಹುತೇಕರು ಕೇಳಿರುವುದಿಲ್ಲ. ಕಾರಣ ಇದೇನು ಅತ್ಯಂತ ಹೆಸರಾಂತ, ಪ್ರೇಕ್ಷಣೀಯ ಸ್ಥಳವಲ್ಲ. ಬದಲಿಗೆ ಇದೊಂದು ಭೂತ-ಪ್ರೇತಗಳ ಜಾಗ ಹಾಗೂ ಕರಾಳ ಇತಿಹಾಸ ಹೊಂದಿರುವ ಸ್ಥಳ ಎಂದೇ ಹೆಸರುವಾಸಿಯಾಗಿದೆ. ಈ ಊರಿನ ಹೆಸರು ಕೇಳಿದ್ರೆ ಈಗಲೂ ಸಹ ಆ ಗ್ರಾಮದ ಸುತ್ತಮುತ್ತಲಿನವರು ಭಯಭೀತರಾಗುತ್ತಾರೆ.
ಕುಲಧಾರ ಗ್ರಾಮವು ಪಲಿವಾಲ್ ಬ್ರಾಹ್ಮಣರ ಸಮೃದ್ಧ ಸಮುದಾಯಕ್ಕೆ ನೆಲೆಯಾಗಿತ್ತು. ಆದರೆ, ಒಂದೇ ದಿನದಲ್ಲಿ ಇಡೀ ಗ್ರಾಮವೇ ಕಣ್ಮರೆಯಾಯಿತು ಎಂಬುದು ಬೆಚ್ಚಿ ಬೀಳುವ ಸಂಗತಿ. ಇದನ್ನು ವಿವರಿಸಲು ಅನೇಕ ಸಿದ್ಧಾಂತಗಳನ್ನು ಕೂಡ ಪ್ರಸ್ತಾಪಿಸಲಾಯಿತು. ಆದರೆ ನಿಖರವಾದ ಕಾರಣವನ್ನು ಕಂಡು ಹಿಡಿಯಲು ಯಾರಿಂದಲೂ ಸಾಧ್ಯವಾಗಲಿಲ್ಲ ಎಂಬುದು ದುರಂತ.
ಕೆಲವರು ಆ ಊರಿನ ಗ್ರಾಮಸ್ಥರು ಮಾಂತ್ರಿಕನಿಂದ ಶಾಪಗ್ರಸ್ತರಾಗಿದ್ದರು ಎಂದು ಹೇಳಿದರೆ, ಇನ್ನು ಕೆಲವರು ಸ್ಥಳೀಯ ಜಮೀನುದಾರರು ಅವರನ್ನೆಲ್ಲಾ ಅಲ್ಲಿಂದ ಓಡಿಸಿದರು ಎಂದು ನಂಬುತ್ತಾರೆ. ಆದ್ರೆ, ಈ ಘಟನೆಗಳು ನಡೆದ ಬಳಿಕ ಇಂದಿಗೂ ಸಹ ಈ ಸ್ಥಳದಲ್ಲಿ ಮನುಷ್ಯನ ನೆರಳು ಬಿದ್ದಿಲ್ಲ ಎಂದು ಹೇಳಲಾಗಿದೆ. ಕುಲಧಾರ ಗ್ರಾಮ ಈಗ ಭೂತದ ಪಟ್ಟಣವಾಗಿ ಮಾರ್ಪಟ್ಟಿದ್ದು, ದೆವ್ವಗಳ ಸಂಚಾರ ಇಲ್ಲಿದೆ ಎಂದೇ ಬಲವಾಗಿ ನಂಬಲಾಗಿದೆ.
ಜೈಸಲ್ಮೇರ್‌ನ ಪಶ್ಚಿಮಕ್ಕೆ 17 ಕಿ.ಮೀ ದೂರದಲ್ಲಿರುವ ಕುಲಧಾರ ಗ್ರಾಮ, ಸುಮಾರು 300 ವರ್ಷಗಳ ಹಿಂದೆ ಜೈಸಲ್ಮೇರ್ ರಾಜ್ಯದ ಅಡಿಯಲ್ಲಿ ಪ್ರವರ್ಧಮಾನಕ್ಕೆ ಬಂದ ಪಲಿವಾಲ್ ಬ್ರಾಹ್ಮಣ ಗ್ರಾಮವಾಗಿತ್ತು. ಆದರೆ ಇಂದು ಇದು ನಿಗೂಢವಾಗಿ ಮುಚ್ಚಿಹೋಗಿರುವ ಹಳ್ಳಿಯಾಗಿ ಗುರುತಿಸಿಕೊಂಡಿದೆ. ಈ ಗ್ರಾಮವನ್ನು 1291ರಲ್ಲಿ ಪಲಿವಾಲ್ ಬ್ರಾಹ್ಮಣರು ಸ್ಥಾಪಿಸಿದರು. ಆದರೆ ಒಂದು ರಾತ್ರಿ, 1825ರಲ್ಲಿ, ಕುಲಧಾರದಲ್ಲಿದ್ದ ಜನರೆಲ್ಲರೂ ರಾತ್ರೋ ರಾತ್ರಿ ಕಣ್ಮರೆಯಾದರು ಎಂದು ಹೇಳಲಾಗಿದೆ.
2015ರಲ್ಲಿ ರಾಜಸ್ಥಾನ ಸರ್ಕಾರವು ಈ ಪ್ರದೇಶವನ್ನು ಪ್ರವಾಸೋದ್ಯಮ ಆಕರ್ಷಣೆಯಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿತು. ಸಂಜೆ 6 ಗಂಟೆಯ ನಂತರ ಪ್ರವಾಸಿಗರಿಗೆ ಈ ಗ್ರಾಮಕ್ಕೆ ಪ್ರವೇಶಿಸಲು ಅನುಮತಿ ಕೊಟ್ಟಿಲ್ಲ. ಇದನ್ನು ಅಲ್ಲಿನ ಅಧಿಕಾರಿಗಳು ಕೂಡ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಸ್ಥಳೀಯರು ಈಗಲೂ ಆ ಜಾಗದಲ್ಲಿ ಆತ್ಮಗಳು ಕಾಡುತ್ತಿವೆ ಎಂದು ನಂಬಿದ್ದಾರೆ,(ಏಜೆನ್ಸೀಸ್).