ಇದು ವಿಶ್ವದ ಅತ್ಯಂತ ದುಬಾರಿ ಹೋಟೆಲ್…ಎಲ್ಲಾ ಸೌಲಭ್ಯಗಳಿದ್ದರೂ ಜನರು ಏಕೆ ಇಷ್ಟಪಡುತ್ತಿಲ್ಲ ಗೊತ್ತಾ?

hotel
Published on

ನವದೆಹಲಿ: ಅನೇಕ ಜನರು ಈಜು, ಸ್ಕೂಬಾ ಡೈವಿಂಗ್‌ನಂತಹ ನೀರಿಗೆ ಸಂಬಂಧಿಸಿದ ಸಾಹಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ. ಅಷ್ಟೇ ಅಲ್ಲ, ಇಂತಹ ವಿಡಿಯೋಗಳನ್ನು ಸಹ ವೀಕ್ಷಿಸಲು ಇಷ್ಟಪಡುತ್ತಾರೆ. ಇದೀಗ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀರಿನ ಅಡಿಯಲ್ಲಿ ನಿರ್ಮಿಸಲಾದ, ವಿಶ್ವದ ಅತ್ಯಂತ ದುಬಾರಿ ಹೋಟೆಲ್‌ನಲ್ಲಿ ತಂಗಿದ್ದ ದಂಪತಿಗಳು ಈ ವಿಡಿಯೋ ಹಂಚಿಕೊಂಡಿದ್ದಾರೆ. ಹಾಗೆಯೇ ಈ ಹೊಟೇಲ್​​​​​ಗೆ ಸಂಬಂಧಿಸಿದಂತೆ ಜನರಿಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಅಚ್ಚರಿಯ ವಿಷಯವೆಂದರೆ ನೀರಿನ ಅಡಿಯಲ್ಲಿ ನಿರ್ಮಿಸಲಾದ ಈ ವಿಶ್ವದ ಅತ್ಯಂತ ದುಬಾರಿ ಹೋಟೆಲ್ ಅನ್ನು ಅನೇಕ ಜನರು ಇಷ್ಟಪಡಲಿಲ್ಲ ... ಏಕೆಂದು ನೋಡೋಣ ಬನ್ನಿ...

ಈ ಹೋಟೆಲ್ ಮಾಲ್ಡೀವ್ಸ್‌ನಲ್ಲಿದೆ. ಕಾರಾ ಮತ್ತು ನೇಟ್ ಎಂಬ ದಂಪತಿಗಳು ಈ ಹೋಟೆಲ್‌ನಲ್ಲಿ ತಂಗಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ನೀವು ಹೋಟೆಲ್ ಅನ್ನು ಸಮುದ್ರದೊಳಗೆ ನಿರ್ಮಿಸಿರುವುದನ್ನು ನೋಡಬಹುದು. ಹೋಟೆಲ್‌ನಲ್ಲಿ ಎಲ್ಲ ರೀತಿಯ ಸೌಲಭ್ಯವಿದೆ. ಹೋಟೆಲ್ ಪಾರದರ್ಶಕವಾಗಿರುವುದರಿಂದ ಹೋಟೆಲ್ ಒಳಗಿಂದಲೇ ಸಮುದ್ರದ ಚಲನೆಯನ್ನು ನೋಡಬಹುದು. ಸಂಪೂರ್ಣವಾಗಿ ಗಾಜಿನಿಂದ ಮಾಡಲಾದ ಈ ಪಾರದರ್ಶಕ ಹೋಟೆಲ್‌ನ ಸುತ್ತಲೂ ಮೀನುಗಳು ಈಜುತ್ತವೆ, ನೋಟವು ತುಂಬಾ ಆಕರ್ಷಕವಾಗಿದೆ, ಇದನ್ನು ನೋಡುವ ಪ್ರತಿಯೊಬ್ಬ ವ್ಯಕ್ತಿಯು ಒಮ್ಮೆ ಇಲ್ಲಿಗೆ ಹೋಗಲು ಅವಕಾಶ ಸಿಕ್ಕರೆ ಸಾಕೆಂದು ಹಾತೊರೆಯುವುದನ್ನು ಕಾಮೆಂಟ್ ಮಾಡಿರುವುದನ್ನು ನೋಡಬಹುದು.

ನೀವು ಇಲ್ಲಿ ವಾಸಿಸಲು ಬಯಸುತ್ತೀರಾ?
ಈ ದಂಪತಿಗಳು ವಿಡಿಯೋ ಪೋಸ್ಟ್ ಮಾಡಿ, ಜನರನ್ನು ನೀವು ಇಲ್ಲಿ ವಾಸಿಸಲು ಬಯಸುತ್ತೀರಾ? ಎಂದು ಪ್ರಶ್ನಿಸಿದಾಗ ಎಷ್ಟೋ ಜನ ನಿರಾಕರಿಸಿದರು. ಆದರೆ ಈ ವಿಡಿಯೋವನ್ನು ಇಲ್ಲಿಯವರೆಗೆ 75.1 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 3 ಕೋಟಿಗೂ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಒಂದೆಡೆ ಇಲ್ಲಿ ಉಳಿದುಕೊಂಡಿರುವುದು ಸಂತಸದ ಅನುಭವ ಎಂದು ಹಲವರು ಬಣ್ಣಿಸಿದರೆ, ಮತ್ತೊಂದೆಡೆ ನೀರಿನ ಕೆಳಗಿರುವ ಕೊಠಡಿಯಲ್ಲಿ ಉಳಿದುಕೊಳ್ಳುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಜ್ಞಾತ ಸಮುದ್ರದ ಆಳದಲ್ಲಿ, ಸುತ್ತುವರಿದ ಕತ್ತಲೆಯಲ್ಲಿ ಹಡಗಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

'ನಾನು ಈ ಹಿಂದೆ ಈ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೆ ಮತ್ತು ಭಯಭೀತನಾಗಿದ್ದೆ. ಆದರೆ ಇದು ಸುಂದರ ಅನುಭವವಾಗಿತ್ತು', 'ರಾತ್ರಿಯ ಸಮಯ ಮತ್ತು ಅಲ್ಲಿ ಕತ್ತಲೆಯಾದಾಗ ಊಹಿಸಿ, ನಿಮ್ಮ ಸುತ್ತಲೂ ಏನಿದೆ ಎಂದು ತಿಳಿಯದೆ ಮತ್ತು ನೋಡದೆ ನೀವು ಮಲಗಬಹುದೇ?', 'ಸುಂದರವಾಗಿದೆ ಆದರೆ ಇದು ನನ್ನಂತವರಿಗೆ ಅಲ್ಲ. ನನಗೆ ನೀರಿನೊಳಗೆ ಭಯವಾಗುತ್ತದೆ' ಎಂದು ಪ್ರತಿಕ್ರಿಯೆಗಳನ್ನು ಕೊಟ್ಟರೆ, ಮತ್ತೆ ಕೆಲವರು ಇಲ್ಲಿ ಉಳಿದುಕೊಳ್ಳುವುದರಿಂದ ಉಸಿರಾಟದ ತೊಂದರೆ ಮತ್ತು ಅನಾನುಕೂಲತೆಯನ್ನು ಅನುಭವಿಸುವುದಾಗಿ ತಿಳಿಸಿದ್ದಾರೆ.

ಈ ಹೋಟೆಲ್ ಬಗ್ಗೆ
ಎರಡು ಅಂತಸ್ತಿನ ಈ ಹೋಟೆಲ್ ಅನ್ನು 'ಮುರಾಕಾ' ಎಂದು ಹೆಸರಿಸಲಾಗಿದೆ, ಇದು ಮಾಲ್ಡೀವ್ಸ್‌ನ ಕಾನ್ರಾಡ್ ಮಾಲ್ಡೀವ್ಸ್ ರಂಗಲಿ ಐಲ್ಯಾಂಡ್ ರೆಸಾರ್ಟ್‌ನಲ್ಲಿದೆ. ವರದಿಯ ಪ್ರಕಾರ, ಈ ಹೋಟೆಲ್ ಸಮುದ್ರ ಮಟ್ಟದಿಂದ 16 ಅಡಿ ಕೆಳಗೆ ಇದೆ. ಈ ಹೋಟೆಲ್‌ನಲ್ಲಿ ನೀವು ಜೆಟ್ ಸ್ಕಿ, ಸ್ಪಾ, ಫಿಟ್‌ನೆಸ್ ಟ್ರೈನರ್, ವ್ಯಾಲೆಟ್ ಮತ್ತು 24-ಗಂಟೆಗಳ ಬಾಣಸಿಗ ಸೌಲಭ್ಯವನ್ನು ಪಡೆಯುತ್ತೀರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net