

ಸಾಮಾನ್ಯವಾಗಿ ಒಂದು ಬದನೆಕಾಯಿ 100 ರಿಂದ 200 ಗ್ರಾಂಗಳಷ್ಟು ತೂಕವಿರುತ್ತದೆ. ಅದಕ್ಕಿಂತ ಹೆಚ್ಚಿನ ತೂಕ ಇರುವುದಿಲ್ಲ. 500 ಗ್ರಾಂ ತೂಕವಿದ್ದರೂ ಅದನ್ನು ಬೆರಗುಗಣ್ಣಿನಿಂದ ಜನರು ನೋಡುತ್ತಾರೆ. ಆದರೆ, ಇಲ್ಲೊಂದು ಬದನೆಕಾಯಿ ತನ್ನ ತೂಕದಿಂದಲೇ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ಗೆ ಸೇರಿದೆ ಅಂದರೆ ನೀವು ನಂಬುತ್ತೀರಾ? ಹೌದು ನಂಬಲೇಬೇಕು.
ಅಮೆರಿಕದ ಡೇವ್ ಬೆನೆಟ್ ಎಂಬುವರು ವಿಶ್ವದ ಅತಿದೊಡ್ಡ ಬದನೆ ಬೆಳೆದಿದ್ದಕ್ಕೆ ಗಿನ್ನಿಸ್ ವಿಶ್ವ ದಾಖಲೆಗೆ ಸೇರಿದ್ದಾರೆ. ಈ ಬದನೆಕಾಯಿ ತೂಕ ಕೇಳಿದ್ರೆ ಒಂದು ಕ್ಷಣ ನಿಮ್ಮ ಹುಬ್ಬೇರುತ್ತದೆ. ಬರೋಬ್ಬರಿ 3 ಕೆಜಿ 778 ಗ್ರಾಂ ತೂಕವಿದೆ. ಸುಮಾರು 2 ಅಡಿ ಉದ್ದ ಮತ್ತು 35 ಸೆಂಟಿಮೀಟರ್ ಸುತ್ತಳತೆ ಇದೆ. ಜುಲೈ 31ರಂದು ಅಮೆರಿಕದ ಅಯೋವಾ ರಾಜ್ಯದ ಬ್ಲೂಮ್‌ಫೀಲ್ಡ್ ನಗರದಲ್ಲಿ ಬೃಹತ್ ಬದನೆಕಾಯಿ ಪತ್ತೆಯಾಗಿದೆ.
ಇದು ಸಾಮಾನ್ಯ ಮಾರುಕಟ್ಟೆಯಲ್ಲಿ ಬೆಳೆಯುವ ಬದನೆಗಿಂತ 10 ಪಟ್ಟು ದೊಡ್ಡದಾಗಿದೆ. ಈ ಬದನೆ ಬೀಜಗಳನ್ನು ಕಳೆದ ಏಪ್ರಿಲ್‌ನಲ್ಲಿ ನೆಡಲಾಗಿತ್ತು. ಜುಲೈ ವೇಳೆಗೆ ಕಟಾವಿಗೆ ಬಂತು. ಈ ಅದ್ಭುತ ಬದನೆಯು ವಿಶ್ವದಾಖಲೆಗಳ ಪಟ್ಟಿಗೆ ಸೇರಿಸಿರುವುದು ಸಂತಸ ತಂದಿದೆ ಎಂದು ಡೇವ್ ಬೆನೆಟ್ ಸಂತಸ ವ್ಯಕ್ತಪಡಿಸಿದ್ದಾರೆ.
ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹೆಸರಿನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಬದನೆಗೆ ಸಂಬಂಧಿಸಿದ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಒಂದೇ ದಿನದಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. ವಿಡಿಯೋದಲ್ಲಿ ಡೇವ್ ಬೆನೆಟ್ ಅವರು ಬದನೆಕಾಯಿ ಹಿಡಿದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಅಂದಹಾಗೆ ಕೆಲವರು ಊಟದಲ್ಲಿ ಬದನೆಕಾಯಿ ಕಂಡೊಡನೆ ಅದನ್ನು ಪಕ್ಕಕ್ಕಿಡುತ್ತಾರೆ. ಬದನೆಕಾಯಿ ಅಂದ್ರೇನೆ ಆಗಲ್ಲ. ಆದರೆ, ಈ ಬದನೆಕಾಯಿಯಲ್ಲಿ ಅಡಗಿರುವ ಆರೋಗ್ಯಕರ ಲಾಭಗಳ ಬಗ್ಗೆ ತಿಳಿದ್ರೆ ನೀವು ಇನ್ನೆಂದೂ ಅದನ್ನು ಮಿಸ್ ಮಾಡಲ್ಲ. ಈ ಬದನೆಕಾಯಿಯು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದರಲ್ಲಿ ನಾರಿನಂಶ ಅಧಿಕವಾಗಿದೆ. ತೂಕ ನಷ್ಟ ಅಥವಾ ತೂಕ ನಿರ್ವಹಣೆಗೆ ಬದನೆಕಾಯಿ ಒಂದು ಉತ್ತಮ ಆಹಾರವಾಗಿದೆ. ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್ ಸೇರಿದಂತೆ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ.
ಬದನೆಕಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್ಸ್ ಹೇರಳವಾಗಿ ಸಿಗುತ್ತದೆ. ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಜೀರ್ಣಕ್ರಿಯೆ ಹಾಗೂ ತೂಕ ನಿರ್ವಹಣೆಗೆ ತುಂಬಾ ಪ್ರಯೋಜನಾಕಾರಿಯಾಗಿದೆ. (ಏಜೆನ್ಸೀಸ್)