

ಲಂಡನ್: ರೂಪಾಂತರಿ ವೈರಸ್ ಒಮಿಕ್ರಾನ್ ವ್ಯಾಪಕವಾಗಿ ಹರಡಿದರೂ ಅದರ ರೋಗಲಕ್ಷಣಗಳು ಗಂಭೀರವಲ್ಲ ಎಂಬ ಸಮಾಧಾನದ ಸಂಗತಿಗಳ ನಡುವೆಯೇ ಜಗತ್ತಿನಾದ್ಯಂತ ಒಮಿಕ್ರಾನ್ ಸೋಂಕಿನ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ. ಈ ನಡುವೆ ಒಮಿಕ್ರಾನ್ನಿಂದಾದ ಮೊದಲ ಸಾವು ಕೂಡ ದೃಢಪಟ್ಟಿದ್ದು, ರೂಪಾಂತರಿ ವೈರಸ್ ಕುರಿತ ಆತಂಕ ಮತ್ತಷ್ಟು ಹೆಚ್ಚಾದಂತಾಗಿದೆ.
ಒಮಿಕ್ರಾನ್ನಿಂದ ಸಂಭವಿಸಿದ, ಜಗತ್ತಿನಲ್ಲೇ ಮೊದಲನೆಯದು ಎನ್ನಬಹುದಾದ ಸಾವು ಲಂಡನ್ನಲ್ಲಿ ವರದಿಯಾಗಿದೆ. ಯುನೈಟೆಡ್ ಕಿಂಗ್ಡಮ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೇ ಸೋಮವಾರ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
ಹೊಸ ರೂಪಾಂತರಿ ಒಮಿಕ್ರಾನ್ ವೈರಸ್ ಒಟ್ಟಾರೆ ಕರೊನಾ ಸೋಂಕಿನ ಪ್ರಕರಣಗಳ ಪೈಕಿ ಶೇ. 50ರಷ್ಟಾಗುವ ಸಾಧ್ಯತೆ ಸಮೀಪಿಸಿದೆ. ಮಾತ್ರವಲ್ಲ, ಒಮಿಕ್ರಾನ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಆ ಪೈಕಿ ಒಬ್ಬರು ಒಮಿಕ್ರಾನ್ನಿಂದ ಸಾವಿಗೀಡಾಗಿರುವುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಲಂಡನ್ನಲ್ಲಿ ಸದ್ಯ ಒಟ್ಟಾರೆ ಕರೊನಾ ಪ್ರಕರಣಗಳ ಪೈಕಿ ಶೇ. 40ರಷ್ಟು ಒಮಿಕ್ರಾನ್ ಪ್ರಕರಣಗಳಾಗಿವೆ. ಲಂಡನ್ ಮಾತ್ರವಲ್ಲದೆ ದೇಶದ ಇತರ ಪ್ರದೇಶಗಳಲ್ಲೂ ಒಮಿಕ್ರಾನ್ ಸೋಂಕಿನ ಪ್ರಕರಣಗಳು ವ್ಯಾಪಕವಾಗಿ ಕಂಡುಬರಲಾರಂಭಿಸಿವೆ ಎಂದು ಅವರು ಹೇಳಿದ್ದಾರೆ.
-ಏಜೆನ್ಸೀಸ್