

ಮನಸೆಂಬ ಕಿಟಕಿ...
2. ಸಮುದ್ರದಲ್ಲಿ ಅಲೆ ಬರುವುದು ಸಹಜ. ಎಲ್ಲ ಅಲೆ ಬರುತ್ತದೆ ಹೋಗುತ್ತದೆ. ನಮಗೆ ಬೇಕಾದ ಅಲೆ ಬರುವವರೆಗೆ ಸಮಾಧಾನ ಬೇಕು.
3.ಅನೇಕ ಬಾರಿ ಸ್ವಾಭಿಮಾನಕ್ಕೆ ಧಕ್ಕೆ ಆಗುತ್ತದೆ. ಈ ಸಂದರ್ಭದಲ್ಲಿ ಏಕೆ ನನ್ನ ಬೇಸರ ದುಃಖವನ್ನು ಇತರರೊಂದಿಗೆ ಹಂಚಿಕೊಳ್ಳಬೇಕು ಎಂಬ ಧೋರಣೆ ಬೇಡ.
ನಾವೇನು ಮಾಡಬಹುದು?
2. ವ್ಯಕ್ತಿವ್ಯಕ್ತಿಗಳ ನಡುವಿನ ಬಾಂಧವ್ಯ ಯಾವಾಗ ಚೆನ್ನಾಗಿರುತ್ತದೋ, ಸಮಾಜದಲ್ಲಿ ಮಾನವೀಯ ಸಂಪರ್ಕ ಎಷ್ಟು ಚೆನ್ನಾಗಿರುತ್ತದೋ ಅದೇ ಭದ್ರತೆ. ಅದನ್ನು ಗಟ್ಟಿಗೊಳಿಸಬೇಕು.
3. ಇತ್ತೀಚಿನ ದಿನಗಳಲ್ಲಿ ‘ರಿಜಕ್ಷನ್’ ಒಪ್ಪಿಕೊಳ್ಳಲು ಆಗುತ್ತಿಲ್ಲ. ಸೋಲು ಗೆಲುವು ಎರಡೂ ಜೀವನದ ಭಾಗ ಎಂದು ತಿಳಿವಳಿಕೆ ಕೊಡುವ ಕೆಲಸ ತುರ್ತಾಗಿ ಆಗಬೇಕು.
4. ಹಿಂದೆ ಚಿಕ್ಕವರಿದ್ದಾಗ ಭಾವನೆಗಳಿಂದ ಗಟ್ಟಿಯಾಗಿ ರುತ್ತಿದ್ದೆವು, ಇಂಟಲಿಜೆನ್ಸ್ ಸೇರ್ಪಡೆ ಮಾಡುತ್ತಿದ್ದೆವು. ಈಗ ಬರೀ ಇಂಟಲಿಜೆನ್ಸ್ ಮಾತ್ರ ಇದೆ. ಭಾವನೆಯ ಕುಶನ್ ಇಲ್ಲ. ಭಾವನೆಗಳಿಂದ ಗಟ್ಟಿಗೊಳಿಸುವ ಕೆಲಸವಾಗಬೇಕು.
ಆತ್ಮಹತ್ಯೆ ಪ್ರಯತ್ನದ ಮುನ್ಸೂಚನೆ:
ಯೋಗ, ಧ್ಯಾನದಲ್ಲಿ ಪರಿಹಾರ
ಯೋಗ ನಮ್ಮ ಆರೋಗ್ಯದ ಜತೆಗೆ ಮಾನಸಿಕ ಸ್ವಾಸ್ಥ್ಯವನ್ನೂ ಕಾಪಾಡುತ್ತದೆ. ಖಿನ್ನತೆಯ ಸಂದರ್ಭದಲ್ಲಿ ಏನೇನೋ ವಿಚಾರಗಳು ಮನಸ್ಸಿನಲ್ಲಿ ಬರುತ್ತವೆ. ಅಂತಹ ವಿಚಾರಗಳಿಗೆ ವಿರಾಮ ನೀಡಲು ಧ್ಯಾನ ಸಹಕಾರಿಯಾಗುತ್ತದೆ.
ಬರಲಿ ಸಾಮುದಾಯಿಕ ವ್ಯವಸ್ಥೆ
ಹಿಂದೆ ನಮ್ಮ ಕೌಟುಂಬಿಕ ವ್ಯವಸ್ಥೆಯಲ್ಲಿ ಮನೆಯಲ್ಲಿ ಹತ್ತಾರು ಮಂದಿ ಇರುತ್ತಿದ್ದರು. ಯಾರೊಬ್ಬರಲ್ಲಾದರೂ ಮನಸ್ಸು ಬಿಚ್ಚಿ ಹೇಳಿಕೊಳ್ಳಲು ಅವಕಾಶವಿತ್ತು. ಈಗ ದೊಡ್ಡ ಕೌಟುಂಬಿಕ ವ್ಯವಸ್ಥೆ ಪುನಃ ತರುವುದು ಆಗದ ಮಾತು. ಆದರೆ, ಸಾಮುದಾಯಿಕ ಜೀವನ ವ್ಯವಸ್ಥೆ ತರಬಹುದು ಎಂದು ಸರಸ್ವತಿ ಹೆಗಡೆ ಅಭಿಪ್ರಾಯಪಡುತ್ತಾರೆ. ಪ್ರತಿ ದಿನ ಶಾಲೆ ಬಿಟ್ಟ ನಂತರ ಮಕ್ಕಳಲ್ಲಿ ‘ಸ್ಕ್ರೀನ್ ಅಡಿಕ್ಷನ್’ ಆಗುತ್ತದೆ. ಮಕ್ಕಳಿಗೆ ಗಾಳಿ, ಬೆಳಕು ಬೇಕು. ಆಟವಾಡಿದಾಗಲೇ ಮಕ್ಕಳು ಫೇಲ್ಯೂರ್ ಕಲಿಯುತ್ತಾರೆ. ಹೊಂದಿಕೊಳ್ಳುವುದನ್ನು ಕಲಿಯುತ್ತಾರೆ ಎಂದರು.
ಮನಸ್ಸು ಶರೀರದಷ್ಟೇ ಮುಖ್ಯ. ಅದಕ್ಕೂ ಚಿಕಿತ್ಸೆ ಬೇಕು ಎಂಬುದು ತಜ್ಞರ ಕಿವಿಮಾತು. ಮನಸ್ಸಿನಲ್ಲಿನ ದುಗುಡವನ್ನು ಆಪ್ತ ಸಮಾಲೋಚಕರ ಮೂಲಕ ಹೇಳಿಕೊಂಡು ಸರಿಯಾದ ದೃಷ್ಟಿಕೋನ ಪಡೆದುಕೊಳ್ಳಬಹುದು. ಅಗತ್ಯವಾದರೆ ಮನೋವೈದ್ಯರ ನೆರವು ಪಡೆದುಕೊಳ್ಳುವುದು ತಪ್ಪಲ್ಲ. ಯೋಗ, ಧ್ಯಾನವೂ ಮನಸ್ಸಿನ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ, ಅದನ್ನೂ ದಿನನಿತ್ಯದ ಭಾಗವಾಗಿಸಿಕೊಳ್ಳುವ ಅಗತ್ಯವಿದೆ ಎಂದು ತಜ್ಞರು ಸಲಹೆ ನೀಡಿದರು.
ಮಕ್ಕಳೇಕೆ ಆತ್ಮಹತ್ಯೆ ಹಾದಿ ಹಿಡಿಯುತ್ತಾರೆ?
ವರದಿಗಳ ಪ್ರಕಾರ ಪ್ರತಿ ದಿನ 1-2 ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇವರೆಲ್ಲ ಶಾಲೆಗೆ ಹೋಗುವ ಮಕ್ಕಳು. ಆತಂಕಕಾರಿ ವಿಚಾರವಿದು ಎಂಬುದು ಸರಸ್ವತಿ ಅವರ ವಿವರಣೆ. ಇದೇ ವಿಚಾರ ಇಟ್ಟುಕೊಂಡು 15 ಸಾವಿರ ಮಕ್ಕಳನ್ನು ಅಧ್ಯಯನಕ್ಕೊಳಪಡಿಸಿದಾಗ ಶೇ.14ರಷ್ಟು ಮಕ್ಕಳು ಮಾನಸಿಕವಾಗಿ ಅಪಾಯದ ಸ್ಥಿತಿಯಲ್ಲಿರುವುದು ಗೊತ್ತಾಯಿತು. ಮನಸ್ಸಿನ ಒಳಗಿನ ಸಂಭಾಷಣೆ ವ್ಯತ್ಯಾಸ ಆಗಿರುವುದು ಇಂತಹ ಬೆಳವಣಿಗೆಗೆ ಕಾರಣ. ತನ್ನ ಮೇಲೆ ಪ್ರೀತಿ ಕಾಳಜಿ, ಭರವಸೆ ಕಳೆದುಕೊಂಡಿರುತ್ತಾನೆ, ತನಗೆ ಇದೊಂದೇ ದಾರಿ ಎಂದು ಭಾವಿಸಿರುತ್ತಾನೆ. ಪ್ರತಿಯೊಬ್ಬರಿಗೂ ಜೀವನ ಸಾಕಪ್ಪ ಎಂಬ ವಿಚಾರ ಆಗಾಗ್ಗೆ ಬಂದು ಹೋಗುತ್ತದೆ. ಅದು ಸಹಜ. ಆದರೆ, ಮತ್ತೆ ದಿನ ನಿತ್ಯದ ಚಟುವಟಿಕೆಗೆ ಮನಸ್ಸನ್ನು ಎಳೆದು ತರುತ್ತೇವೆ. ಎಲ್ಲಿ ಕರೆದುಕೊಂಡು ಬರುವುದಿಲ್ಲವೋ ಅಲ್ಲಿ ಖಿನ್ನತೆ ಆವರಿಸುತ್ತದೆ. ಈಗ ‘ರಿಜಕ್ಷನ್’ ಒಪ್ಪಿಕೊಳ್ಳಲು ಆಗುತ್ತಿಲ್ಲ. ಸೋಲು ಗೆಲುವು ಎರಡೂ ಜೀವನದ ಭಾಗ ಎಂದು ತಿಳಿದುಕೊಂಡಿಲ್ಲ, ಅಥವಾ ತಿಳುವಳಿಕೆ ಕೊಟ್ಟಿಲ್ಲ ಎಂದರು.
ಆತ್ಮಹತ್ಯೆಗೆ ಪ್ರಮುಖ ಕಾರಣಗಳು
ವೃತ್ತಿಯಲ್ಲಿ ಸಮಸ್ಯೆ, ಕೌಟುಂಬಿಕ ಕಲಹ, ಕಾಯಿಲೆಗಳು, ಹಣಕಾಸು ವಿಚಾರ, ಆಂತರಿಕ ಕಲಹ, ಪ್ರೇಮ ವೈಫಲ್ಯ ಪ್ರಮುಖ ಕಾರಣ. ನಂತರ ರೈತರು, ವಿದ್ಯಾರ್ಥಿಗಳ ಪ್ರಕರಣ ಬರುತ್ತವೆ.
ಮಕ್ಕಳ ಕ್ಷೇಮಕ್ಕೆ ಸೂತ್ರ, ಮನೆ-ಸಮಾಜದ ಪಾತ್ರ
ಮಕ್ಕಳ ಶೈಕ್ಷಣಿಕ ಪ್ರಗತಿ ವಿಚಾರದಲ್ಲಿ ಪಾಲಕರು, ಶಿಕ್ಷಕರು ಹಾಗೂ ಸಮಾಜಕ್ಕೆ ಡಾ. ಎಸ್.ಧನಂಜಯ ಮತ್ತು ಸರಸ್ವತಿ ಹೆಗಡೆ ನೀಡಿರುವ ಟಿಪ್ಸ್ಗಳು: ಪಾಲಕರು ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕು ಎಂದು ಪಟ್ಟು ಹಿಡಿಯಬಾರದು. ಮಗುವಿನ ಆದ್ಯತೆಗಳನ್ನು ಗುರುತಿಸಿ ನಿರ್ದೇಶನ/ ಮಾರ್ಗದರ್ಶನ ಮಾಡಬೇಕು. ಮಕ್ಕಳಿಗೆ ಕ್ವಾಲಿಟಿ ಟೈಮ್ ಕೊಡಬೇಕು. ಫಲಿತಾಂಶದ ಬದಲು ಮಾಡುವ ಕರ್ಮದ ಕಡೆಗೆ ಗಮನಕೊಡುವುದನ್ನು ಕಲಿಸಬೇಕು. ಒಟ್ಟಿನಲ್ಲಿ ಖುಷಿ ಕೊಡುವ ರೀತಿ ಬದುಕುವುದನ್ನು ಕಲಿಸಬೇಕು. ಶಿಕ್ಷಕರು ಮಕ್ಕಳ ಮೇಲೆ ಅನಗತ್ಯನಿರೀಕ್ಷೆಗಳನ್ನು ಇಟ್ಟುಕೊಳ್ಳಬಾರದು. ಮಕ್ಕಳ ನಡುವೆ ತಾರತಮ್ಯ ತೋರಬಾರದು. ಧನಾತ್ಮಕ ಬಲವರ್ಧನೆ ಮಾಡಬೇಕು. ಸಮಾಜ ಕೂಡ ಮಕ್ಕಳ ಮೇಲೆ ಒತ್ತಡ ಹೇರಬಾರದು. ಆ ದೇಶದಲ್ಲಿ ಕೆಲಸ ಮಾಡುತ್ತಾನೆ, ಈ ದೇಶದಲ್ಲಿ ಪ್ರಸಿದ್ಧಿ ಪಡೆದಿದ್ದಾನೆ ಎಂದು ಹೇಳಿ ತುಲನೆ ಮಾಡಬಾರದು.
ಈ ಮನಸ್ಥಿತಿ ಏಕೆ?
ದೇಶದಲ್ಲಿ ಪ್ರತಿ ದಿನ ಸರಿಸುಮಾರು 500 ಜನ ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶವಿದೆ. ದಾಖಲಾಗದ ಪ್ರಕರಣ ಇನ್ನೂ ಎಷ್ಟೋ ಇರುತ್ತದೆ. 2015ರಲ್ಲಿ, ಒಬ್ಬರು ಆತ್ಮಹತ್ಯೆ ಮಾಡಿಕೊಂಡರೆಂದರೆ 10 ಮಂದಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂಬ ಲೆಕ್ಕಾಚಾರವಿತ್ತು. 2021ರ ಪರಿಸ್ಥಿತಿಯಲ್ಲಿ ಈ ಅನುಪಾತ 1-20 ರಷ್ಟಾಗಿದೆ ಎಂಬುದು ಡಾ.ಧನಂಜಯ ಅವರ ವಿವರಣೆ. ದೇಶದ ಒಟ್ಟು ಆತ್ಮಹತ್ಯೆ ಪ್ರಮಾಣದಲ್ಲಿ ಶೇ.35ರಷ್ಟು ಕೊಡುಗೆ ನಾಲ್ಕು ರಾಜ್ಯಗಳದ್ದೇ ಇದೆ, ಈ ಪಟ್ಟಿಯಲ್ಲಿ ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಕರ್ನಾಟಕ ಸೇರಿದೆ.
ಮಾದಕ ಅಪಾಯ
ಮಾದಕವಸ್ತು ಹಾಗೂ ಆತ್ಮಹತ್ಯೆಗೆ ತುಂಬಾ ಸಂಬಂಧ ಇದೆ. ಮಾನಸಿಕ ಖಿನ್ನತೆ ಜಾಸ್ತಿ ಆದಾಗ ಮಾದಕ ವಸ್ತು ಶಾರ್ಟ್ ಕಟ್. ಮಾದಕ ವಸ್ತು ಅಥವಾ ಮದ್ಯ ತೆಗೆದುಕೊಂಡಾಗ ಸಮಾಧಾನ ಅನಿಸಿರಬಹುದು. ಆದರೆ, ಅದು ಅಪಾಯ. ಮುಂದೆ ಆಲ್ಕೋಹಾಲ್ ಕಡಿಮೆ ಮಾಡಿದರೆ ಡಿಪ್ರೆಶನ್ ಜಾಸ್ತಿ ಆಗುತ್ತದೆ. ದೇಹ ಮತ್ತು ಮನಸ್ಸು ಅದನ್ನೇ ಅವಲಂಬಿಸಿರುತ್ತದೆ. ಕಡಿಮೆ ಮಾಡಿದರೆ ಫಿಟ್ಸ್, ಕೈ ನಡುಕ ಬರುತ್ತದೆ. ಕೊನೆಗೆ ಡಿಪ್ರೆಷನ್ ಹಳ್ಳಕ್ಕೆ ಬೀಳುತ್ತಾರೆ ಎಂದು ಡಾ.ಧನಂಜಯ ವಿವರಿಸಿದರು.
ತಪ್ಪುಮಾಡದವು› ಯಾರವ್ರೆ...
ಶಿಕ್ಷಣ ವ್ಯವಸ್ಥೆ ನಮ್ಮ ಇಂಟಲಿಜೆನ್ಸ್ ಬೆಳೆಸುತ್ತದೆ. ನಮ್ಮ ನಿರ್ದಿಷ್ಟ ವಿಷಯ ಅಥವಾ ವೃತ್ತಿಯನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ಹೇಳಿಕೊಡುತ್ತದೆ. ಆದರೆ ನಮ್ಮ ಒಳಗಿನ ಭಾವನೆ ಹ್ಯಾಂಡಲ್ ಮಾಡುವುದನ್ನು ಹೇಳಿಕೊಡುವುದಿಲ್ಲ. ನಮ್ಮ ಸಮಾಜ ಯಾವ ತಪ್ಪೂ ಮಾಡದಿರುವ, ಪರ್ಫೆಕ್ಷನಿಸ್ಟ್ ಎಂದು ನಮ್ಮನ್ನು ಪ್ರೊಜೆಕ್ಟ್ ಮಾಡಿಕೊಳ್ಳುವಂತೆ ಮಾಡುತ್ತದೆ. ಆದರೆ ನಾವು ಮನುಷ್ಯರು ತಪ್ಪುಮಾಡುವುದು ಸಹಜ. ಅದನ್ನು ತಿದ್ದಿಕೊಳ್ಳುವುದು, ಹೇಳಿಕೊಳ್ಳುವ ವ್ಯವಸ್ಥೆ ಮಾಡಿ ಕೊಂಡಿಲ್ಲ ಎಂದು ಸರಸ್ವತಿ ಹೆಗಡೆ ವಿವರಿಸಿದರು.
ಮನುಷ್ಯ ಎಂದ ಮೇಲೆ ಬೇಜಾರು ಆಗೇ ಆಗುತ್ತದೆ, ಖುಷಿಯೂ ಆಗುತ್ತದೆ. ಡಾಕ್ಟರ್ಗಳಲ್ಲಿ ಸಹ ಖಿನ್ನತೆ, ಆತ್ಮಹತ್ಯೆ ರೇಟ್ ಹೆಚ್ಚಿದೆ. ಪೊಲೀಸರಲ್ಲೂ ಇದೆ. ಇವರ ಮಾತಿಗೂ ಕಿವಿಗೊಡಬೇಕು ಎಂದು ಡಾ.ಧನಂಜಯ ಅಭಿಪ್ರಾಯಪಡುತ್ತಾರೆ. ಕೆಲವರು ತಾವು ಆತ್ಮಹತ್ಯೆ ಮಾಡಿಕೊಂಡರೆ ಭವಿಷ್ಯದಲ್ಲಿ ಮಕ್ಕಳು ಸಮಸ್ಯೆಗೆ ಈಡಾಗುತ್ತಾರೆಂದು ಮಕ್ಕಳ ಸಹಿತ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದು ಎರಡೆರಡು ತಪ್ಪು ಎಂಬುದು ಅವರ ವಾದ. ಸರಸ್ವತಿ ಹೆಗಡೆ ಅವರು ಈ ವಿಚಾರದಲ್ಲಿ ಬೆಳಕು ಚೆಲ್ಲಿ, ಐದೂವರೆ ವರ್ಷದ ಎಂಬಿಬಿಎಸ್ ಕೋರ್ಸ್ನಲ್ಲಿ ಭಾವನೆಗಳನ್ನು ನಿಷ್ಕ್ರಿಯಗೊಳಿಸುವ ಒಂದು ಅಪ್ರೋಚ್ ಅಥವಾ ವಾತಾವರಣ ಇರುತ್ತದೆ. ಮೆಡಿಕಲ್ ಕೋರ್ಸ್ನಲ್ಲಿ ಮೊದಲನೇ ವರ್ಷ ಅನೇಕ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಪ್ರಯತ್ನ ಇರುತ್ತದೆ. ಏಕೆಂದರೆ ಇಂಟಲಿಜೆನ್ಸ್ ಬೇರೆ, ಎಮೋಷನ್ ಬೇರೆ. ಇದನ್ನು ಅರ್ಥಮಾಡಿಸಿಕೊಡುವುದೇ ಇಲ್ಲ ಎಂದರು.
ಹೆಣ್ಮಕ್ಳೆ ಸ್ಟ್ರಾಂಗು ಗುರು
ಆತ್ಮಹತ್ಯೆಗೆ ಪ್ರಯತ್ನಿಸುವವರಲ್ಲಿ ಮಹಿಳೆಯರು ಹೆಚ್ಚು. ಆದರೆ, ಆತ್ಮಹತ್ಯೆ ಪ್ರಯತ್ನದಿಂದ ಜೀವ ಕಳೆದುಕೊಳ್ಳುವವರು ಪುರುಷರೇ ಹೆಚ್ಚು. ಏನೇ ಬರಲಿ ಎದುರಿಸಿ ಸಹಿಸಿಕೊಂಡು ಹೋಗುವ ಗುಣ ಭಾರತೀಯ ಹೆಣ್ಣು ಮಕ್ಕಳಲ್ಲಿರುತ್ತದೆ. ಮಿದುಳಿನ ಬಲಭಾಗದ ವಿಚಾರದಲ್ಲೂ ಮಹಿಳೆಯರ ಕ್ಷಮತೆ ಹೆಚ್ಚು ಎಂಬುದು ವೈದ್ಯರ ಅಭಿಪ್ರಾಯ.
ಕಿವಿಗೊಡೋಣ
ಆತ್ಮಹತ್ಯೆ ತಡೆಯಲು ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ಸೂಸೈಡ್ ಪ್ರಿವೆನ್ಷನ್ ಅವರ 2021- 23 ವರೆಗಿನ ಥೀಮ್ ‘ಕ್ರಿಯೇಟ್ ಹೋಪ್’. ಗೆಳೆಯರಾಗಿರಬಹುದು, ಸಹೋದ್ಯೋಗಿಯಾಗಿರಬಹುದು, ನೆರೆಹೊರೆಯವರಾಗಿರಬಹುದು, ನಾನಿದ್ದೇನೆ ಎಂದು ಭರವಸೆ ತರುವ ಕೆಲಸ ಆಗಬೇಕು. ಯಾವುದೇ ರೀತಿಯ ಬೆಂಬಲ ಕೊಡದಿದ್ದರೂ ಪರವಾಗಿಲ್ಲ, ಒಂದು ಕಿವಿಕೊಡಿ. ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಆ ಸಮಯ, ಕೆಟ್ಟ ಘಳಿಗೆಯಿಂದ ಕೊಂಚ ಹೊರಬಂದರೆ ಬಾಗಿಲು, ಕಿಟಕಿ ಕಾಣಬಹುದು. ಟೈಮ್ ಈಸ್ ಹೀಲರ್ ಎಂದು ಡಾ.ಧನಂಜಯ ವಿವರಿಸುತ್ತಾರೆ.
ಬಾಣಂತಿ ಖಿನ್ನತೆಗೆ ಪರಿಹಾರದ ದಾರಿ...
ಹೆರಿಗೆ ವಿಚಾರದಲ್ಲಿ ಪೋಸ್ಟ್ಮಾರ್ಟಮ್ ಡಿಪ್ರೆಷನ್ ಎಂದಿದೆ. ಹಿಂದೆ ಇದಕ್ಕೆ ಬಾಣಂತಿ ಸನ್ನಿ ಎನ್ನುತ್ತಿದ್ದರು. ಬಾಣಂತಿಯರಲ್ಲಿ ಹಾಮೋನ್ ಬದಲಾವಣೆ ಆಗುತ್ತದೆ. ಹೆರಿಗೆ ನಂತರ ಬಾಣಂತಿಯ ಮನಸ್ಸುಸೂಕ್ಷ್ಮವಾಗಿರುತ್ತದೆ. ಇದನ್ನು ಪೋಸ್ಟ್ಮಾರ್ಟ್ವå್ ಬ್ಲೂಸ್ (ಕಿರಿಕಿರಿ) ಎಂದು ಕರೆಯಲಾಗುತ್ತದೆ. ಕೆಲವರು ಮಾತ್ರ ಖಿನ್ನತೆಗೆ ಒಳಗಾಗುತ್ತಾರೆ. ಇದನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಕೊಡಿಸಿದರೆ ಆತ್ಮಹತ್ಯೆ ತಡೆಯಬಹುದು. ಬಾಣಂತಿಯರಿಗೆ ಒಮ್ಮೆ ತಜ್ಞರೊಂದಿಗೆ ಸಮಾಲೋಚನೆ ಮಾಡಿಸುವುದು ಒಳ್ಳೆಯದು. ಇದಲ್ಲದೆ ಯುವತಿಯರು ಹಾಗೂ ಮಹಿಳೆಯರಲ್ಲಿ ಋತುಚಕ್ರದ ಸಂದರ್ಭದಲ್ಲಿ ಕಂಡುಬರುವ ಬದಲಾವಣೆಗಳ ಬಗ್ಗೆ ಸೂಕ್ಷ್ಮವಾಗಿ ಪರಿಗಣಿಸಬೇಕಾಗುತ್ತದೆ.
ಸಮಾಧಾನಕರ ವಾತಾವರಣ ಸೃಷ್ಟಿಸಿ
ಮಕ್ಕಳಿಗೆ ಪರೀಕ್ಷೆಗೆ ಒಂದು ತಿಂಗಳ ಮುಂಚೆ ಆರೋಗ್ಯಕರ ಜೀವನ ಶೈಲಿಯನ್ನು ಇರುವಂತೆ ನೋಡಿಕೊಳ್ಳಬೇಕು. ಸಮಾಧಾನಕರ ವಾತಾವರಣ ಸೃಷ್ಟಿಸಬೇಕು. ರಾತ್ರಿ 8 ಗಂಟೆ ಮೇಲೆ ಊಟ ಕೊಡಬಾರದು. ಓವರ್ ಟೈಮ್ ಸ್ಟಡಿ ಕಡಿಮೆ ಮಾಡಬೇಕು. ಮೆದುಳು ರಿಲ್ಯಾಕ್ಸ್ ಆಗಿರುವಂತೆ ಪೂರಕ ವಾತಾವರಣ ಸೃಷ್ಟಿಸಬೇಕು. ಬೇರೆ ಮಕ್ಕಳ ಜತೆ ಹೋಲಿಕೆ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಫಲಿತಾಂಶದ ಮುನ್ನಾ ದಿನ ಮತ್ತು ಫಲಿತಾಂಶದ ದಿನ ಪೋಷಕರು ಮಕ್ಕಳಿಗೆ ಹೆಚ್ಚು ಸಮಯ ಕೊಡಬೇಕು. ಫಲಿತಾಂಶ ಬಂದ ಮೇಲೆ ಹಾಗೆ ಮಾಡಬೇಕಿತ್ತು ಹೀಗೆ ಮಾಡಬೇಕಿತ್ತು ಎಂದು ಹೇಳಬಾರದು. ಆಗಿ ಹೋಗಿದ್ದರೆ ಬಗ್ಗೆ ಚುಚ್ಚಿ ಮಾತನಾಡದೆ ವಾಟ್ ನೆಕ್ಸ್್ಟ ಎಂಬ ಪರಿಹಾರ ಹುಡುಕುವ ಕೆಲಸ ಮಾಡಬೇಕು.