

ಬೆಂಗಳೂರು: ಆರೋಗ್ಯಕ್ಕೆ ನಿದ್ರೆ ಅತ್ಯಗತ್ಯ. ಆದರೆ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ನಿರ್ವಹಿಸುವುದರ ಜತೆಗೆ ಸಾಮಾನ್ಯವಾಗಿ ನಿದ್ರೆಗೆ ಹೆಚ್ಚು ಸಮಯ ನೀಡಲು ಕೆಲವೊಮ್ಮೆ ಸಾಧ್ಯವಾಗದೆ ಇರಬಹುದು. ನಿದ್ರೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಮಾರ್ಚ್ 17 ರಂದು ವಿಶ್ವ ನಿದ್ರಾ ದಿನವನ್ನು ಆಚರಣೆ ಮಾಡಲಾಗುತ್ತಿದೆ.
ವಿಶ್ವ ನಿದ್ರಾ ದಿನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ವೇಕ್ಫೀಟ್ ಕಂಪನಿ ತನ್ನ ಉದ್ಯೋಗಿಗಳಿಗೆ 'ನಿದ್ರೆ ಮಾಡಲು ಒಂದು ದಿನ ರಜೆಯನ್ನು ನೀಡಿದೆ. ಲಿಂಕ್ಡ್‌ಇನ್‌ನಲ್ಲಿ ಈ ಕುರಿತಾಗಿ ಪೋಸ್ಟ್ ಹಂಚಿಕೊಳ್ಳಲಾಗಿದೆ.
ಎಲ್ಲಾ ಉದ್ಯೋಗಿಗಳಿಗೆ ಕಳುಹಿಸಲಾಗಿರುವ ಮೇಲ್ನಲ್ಲಿ 'ವಿಶ್ವ ನಿದ್ರಾ ಆಚರಣೆಯ ದಿನವಾದ 2023ರ ಮಾರ್ಚ್ 17,ರಂದು ಎಲ್ಲಾ ವೇಕ್‌ಫಿಟ್ ಉದ್ಯೋಗಿಗಳಿಗೆ ರಜೆಯೆಂದು ಘೋಷಿಸಲಾಗಿದೆ. ಆರೋಗ್ಯ ಕ್ಷೇಮಕ್ಕಾಗಿ ಇಂದು ಆಫೀಸ್ಗೆ ಬರಬೇಡಿ. ಮಲಗಿ ವಿಶ್ರಾಂತಿಸಿ ಎಂದು ಕಂಪನಿಯು ಎಲ್ಲ ಉದ್ಯೋಗಿಗಳಿಗೆ ಹೆಚ್ಆರ್ ಮೇಲ್ ಮಾಡಿದ್ದಾರೆ.
ಕಂಪನಿಯು ತನ್ನ ಉದ್ಯೋಗಿಗಳಿಗೆ ನಿದ್ದೆಯ ಸಮಯವನ್ನು ಘೋಷಿಸಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಕಂಪನಿಯು ತನ್ನ ಉದ್ಯೋಗಿಗಳಿಗೆ "ರೈಟ್ ಟು ನ್ಯಾಪ್ ನೀತಿ" ಯನ್ನು ಘೋಷಿಸಿತು. ಅದು ಎಲ್ಲಾ ಉದ್ಯೋಗಿಗಳಿಗೆ ತಮ್ಮ ಕೆಲಸದ ಸಮಯದಲ್ಲಿ 30 ನಿಮಿಷಗಳ ನಿದ್ದೆ ಮಾಡಲು ಅವಕಾಶ ಮಾಡಿಕೊಟ್ಟಿತ್ತು.
ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್‌ನ 6ನೇ ಆವೃತ್ತಿಯ ಪ್ರಕಾರ, 2022ರಲ್ಲಿ 21% ನಷ್ಟು ಜನರು ಕೆಲಸದ ಸಮಯದಲ್ಲಿ ನಿದ್ರೆಯ ಸಮಸ್ಯೆಯನ್ನು ಅನುಭವಿಸುತ್ತಾರೆ. 21% ನಷ್ಟು ಮಂದಿ ಕೆಲಸ ಮುಗಿಸಿ ಮನೆಗೆ ತೆರಳಿದ ಬಳಿಕ ಬೆಳಗ್ಗೆ ಸುಸ್ತಾಗಿ ಏಳುತ್ತಾರೆ ಎಂದು ತಿಳಿದುಬಂದಿದೆ.