ಜ.5,6ಕ್ಕೆ ಬೆಳಗಾವಿಯಲ್ಲಿ ವಿಶ್ವ ಹಿಂದು ಅಂತರ್ಜಾತಿ ವಿವಾಹಿತರ ಸಮಾವೇಶ

ವಿವಾಹ
Published on

ಬೆಂಗಳೂರು: ವಿಶ್ವ ಹಿಂದು ಅಂತರ್ಜಾತಿ ವಿವಾಹ ಪ್ರೋತ್ಸಾಹ ಸಂಘ ವತಿಯಿಂದ ಜ.4 ಮತ್ತು ಜ.5ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮನ್ನಿಕೇರಿಯ ಶ್ರೀ ಮಹಾಂತಲಿಂಗೇಶ್ವರ ಮಠದಲ್ಲಿ ವಿಶ್ವ ಹಿಂದು ಅಂತರ್ಜಾತಿ ವಿವಾಹಿತರ ಸಮಾವೇಶ ನಡೆಯಲಿದೆ.

ಸಂಘದ ವಾರ್ಷಿಕೋತ್ಸವ ಅಂಗವಾಗಿ ನಡೆಯಲಿರುವ ಸಮಾವೇಶವನ್ನು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ಜ.4ರ ರಾತ್ರಿ 7.30ಕ್ಕೆ ಜರುಗಲಿರುವ ವಿರಾಟ್ ಹಿಂದು ಧರ್ಮ ಜಾಗೃತಿ ಸಮಾವೇಶಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಚಾಲನೆ ನೀಡಲಿದ್ದಾರೆ. ಸಂಸದ ಈರಣ್ಣ ಕಡಾಡಿ, ಖ್ಯಾತ ವಾಗ್ಮಿ ಜಗದೀಶ ಕಾರಂತ ಮುಖ್ಯ ಆತಿಥಿಗಳಾಗಿ ಭಾಗಿಯಾಗಲಿದ್ದಾರೆ. ಮಠದ ಅಧ್ಯಕ್ಷ ಶ್ರೀ ವಿಜಯ ಸಿದ್ದೇಶ್ವರ ಸ್ವಾಮೀಜಿ, ಸಂಘದ ಗೌರವಾಧ್ಯಕ್ಷ ಶ್ರೀ ಆರೂಢ ಭಾರತಿ ಸ್ವಾಮೀಜಿ ಉಪಸ್ಥಿತಿ ಇರಲಿದ್ದಾರೆ. ‘ಜಾತ್ಯಾತೀತ ಜ್ಯೋತಿ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಜ.5ರ ಬೆಳಗ್ಗೆ 11ಕ್ಕೆ ಜಾತ್ಯಾತೀತ ಹಿಂದು ಸಮಾವೇಶವನ್ನು ಕನ್ಹೇರಿ ಮಠದ ಜಗದ್ಗುರು ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಬಾಲಚಂದ್ರ ಜಾರಕಿಹೊಳಿ ಉಪಸ್ಥಿತಿ ಇರಲಿದ್ದಾರೆ. ಅಂದಾಜು 10 ಸಾವಿರ ಮಂದಿ ಆಗಮಿಸುವ ನಿರೀಕ್ಷೆ ಇದೆ ಎಂದು ಪ್ರಕಟಣೆಯಲ್ಲಿ ಸಂಘ ಮಾಹಿತಿ ನೀಡಿದೆ. ವಿವರಕ್ಕಾಗಿ 9480455594ಕ್ಕೆ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net