ನಮ್ಮ ಆರೋಗ್ಯ ನಮ್ಮ ಕೈಲಿ; ಜೀವನಶೈಲಿ ಸರಿಪಡಿಸಿಕೊಳ್ಳಬೇಕು: ಇಂದು ವಿಶ್ವ ಆರೋಗ್ಯ ದಿನ

Health
Published on
ಆರೋಗ್ಯ ಉಳಿಸಿಕೊಂಡವನೇ ನಿಜವಾದ ಸಿರಿವಂತ ಎಂಬ ಮಾತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಜೀವನಶೈಲಿ ಬದಲಾಗಿ, ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದೆ. ಸಣ್ಣ ವಯಸ್ಸಿನಲ್ಲೇ ದುಡಿಮೆಯ ದೊಡ್ಡ ಭಾಗ ಚಿಕಿತ್ಸೆಗಳಿಗೆ ವೆಚ್ಚವಾಗುತ್ತಿದೆ. ಮನೆ-ಉದ್ಯೋಗ ಎರಡನ್ನೂ ನಿರ್ವಹಿಸಬೇಕಾದ ಒತ್ತಡದಲ್ಲಿರುವ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಇವುಗಳಿಗೆ ತಜ್ಞವೈದ್ಯರು ಪರಿಹಾರದ ಮಾರ್ಗವನ್ನು ತಿಳಿಸುವ ಜತೆಗೆ ಸ್ವಾಸ್ಥ್ಯವನ್ನು ರಕ್ಷಿಸಿಕೊಳ್ಳುವ, ಕಾಯಿಲೆಗಳಿಂದ ದೂರ ಉಳಿಯುವ ಸಲಹೆಗಳನ್ನೂ ನೀಡಿದ್ದಾರೆ ವಿಜಯವಾಣಿ-ದಿಗ್ವಿಜಯ ವಾಹಿನಿ ಕ್ಲಬ್​ಹೌಸ್ ಸಂವಾದದಲ್ಲಿ. ವಿಶ್ವ ಆರೋಗ್ಯ ದಿನದ ನಿಮಿತ್ತ ಈ ಸಂವಾದ ಹಮ್ಮಿಕೊಳ್ಳಲಾಗಿತ್ತು.

ವಿಶ್ವ ಆರೋಗ್ಯ ದಿನದ ಮಹತ್ವ

ಜನರು ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ 1948ರ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಆರೋಗ್ಯ ದಿನವನ್ನು ಘೋಷಿಸಿತು. ಆರೋಗ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅಂದಿನಿಂದ ಪ್ರತಿ ವರ್ಷ ಘೋಷವಾಕ್ಯಗಳೊಂದಿಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಪ್ರಸ್ತುತ ಸಾಂಕ್ರಾಮಿಕ, ಕಲುಷಿತ ಗ್ರಹ ಮತ್ತು ಹೆಚ್ಚುತ್ತಿರುವ ರೋಗಗಳ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ದಿನವನ್ನು ‘ನಮ್ಮ ಗ್ರಹ, ನಮ್ಮ ಆರೋಗ್ಯ’ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಆ ಮೂಲಕ ಕೋವಿಡ್ ಸಾಂಕ್ರಾಮಿಕದಿಂದ ಹಸಿರು ಮತ್ತು ಆರೋಗ್ಯಕರ ಚೇತರಿಕೆಗಾಗಿ ಅನನ್ಯ ಅವಕಾಶ ಒದಗಿಸಲಾಗಿದೆ. ಇದು ವ್ಯಕ್ತಿಗಳ ಮತ್ತು ಗ್ರಹದ ಆರೋಗ್ಯವನ್ನು ಕೇಂದ್ರೀಕರಿಸುವ ಚಳವಳಿಯಾಗಿದೆ.

ಸಮತೋಲನದ ಬದುಕು

| ಡಾ.ಶಿವಕುಮಾರ್ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಮತ್ತು ಎಮರ್ಜೆನ್ಸಿ ವಿಭಾಗದ ವೈದ್ಯಾಧಿಕಾರಿ

ಜೀವನಶೈಲಿ ಹಾಗೂ ಆಹಾರ ಪದ್ಧತಿ ಬದಲಾಗುತ್ತಿದ್ದು, ಇವು ಜನರ ಆರೋಗ್ಯದ ಮೇಲೆ ತೀವ್ರ ವ್ಯತ್ಯಾಸಗಳನ್ನು ಉಂಟು ಮಾಡಿದೆ. ಶ್ರಮದಾಯಕ ಜೀವನದಿಂದ ಜನ ವಿಮುಕರಾಗುತ್ತ, ಶ್ರಮರಹಿತ (ವೈಟ್​ಕಾಲರ್ ಜಾಬ್) ಜೀವನಕ್ಕೆ ಮಹತ್ವ ನೀಡುತ್ತಿದ್ದಾರೆ. ಪರಿಣಾಮವಾಗಿ ದೈಹಿಕ ಶ್ರಮವನ್ನು ಕಡೆಗಣಿಸುತ್ತಿದ್ದು, ಆರಾಮದಾಯಕ ವಾತಾವರಣ, ಅಸಮರ್ಪಕ ಆಹಾರ ಪದ್ಧತಿ ಹಾಗೂ ಅಸಹಜ ವಿಶ್ರಾಂತಿಯಿಂದ ನಾನಾ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಪ್ರಗತಿಯಿಂದಾಗಿ ಇಂದು ಸಾಂಕ್ರಾಮಿಕ ರೋಗಗಳನ್ನು (ಕೋವಿಡ್ ಹೊರತುಪಡಿಸಿ) ನಿಯಂತ್ರಿಸಲು ಹಾಗೂ ಜೀವಿತಾವಧಿಯನ್ನು ಹೆಚ್ಚಿಸಲು ಸಾಧ್ಯವಾಗಿದೆ. ಆದಾಗಿಯೂ ಜೀವನಶೈಲಿಯ ಬದಲಾವಣೆ ಹಾಗೂ ವೇಗದ ಜೀವನದಲ್ಲಿ ದೈಹಿಕ ಶ್ರಮದಿಂದ ದೂರವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರುವುದರಿಂದ ಅಸಾಂಕ್ರಾಮಿಕ ರೋಗಗಳಿಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ದೀರ್ಘಕಾಲಿನ ಕಾಯಿಲೆಗಳಿಗೆ ಒಳಗಾಗುವವರ ಸಂಖ್ಯೆ, ಅಕಾಲಿಕ ಹಾಗೂ ಹಠಾತ್ ಸಾವಿನ ಸಂಖ್ಯೆ ಹೆಚ್ಚಾಗಿದೆ.

ಪರಿಣಾಮವೇನು?: ಅಸಮರ್ಪಕ ಜೀವನಶೈಲಿಯಿಂದ ಬರುತ್ತಿರುವ ಕಾಯಿಲೆಗಳು ವ್ಯಕ್ತಿಯನ್ನು ಮಾತ್ರವಲ್ಲದೆ ಇಡೀ ಕುಟುಂಬದ ಆರೋಗ್ಯವನ್ನು ಹಾಳುಗೆಡವುತ್ತವೆ. ಪ್ಯಾಲಿಯೇಟಿವ್ ಕೇರ್, ಔಷಧ, ಚಿಕಿತ್ಸೆ ಇವೆಲ್ಲವೂ ಇಡೀ ಕುಟುಂಬವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ದುರ್ಬಲಗೊಳಿಸುತ್ತವೆ. ಇಂತಹ ಪರಿಸ್ಥಿತಿ ಎದುರಾಗದಿರಲು ಜನರು ಆರೋಗ್ಯದ ಬಗ್ಗೆ ಎಚ್ಚರವಹಿಸುವ ಅಗತ್ಯವಿದೆ.

ಉತ್ತಮ ಆರೋಗ್ಯಕ್ಕಾಗಿ
  • ದೈಹಿಕ ಶ್ರಮ ಹಾಗೂ ಒತ್ತಡ ರಹಿತ ಜೀವನ ಅಳವಡಿಸಿಕೊಳ್ಳಬೇಕು.
  • ಮನೆಯಲ್ಲಿ ತಯಾರಿಸಿದ ತಾಜಾ ಆಹಾರ ಸೇವನೆ ಒಳ್ಳೆಯದು. ಹೊರಗಿನ ಆಹಾರ ಸೇವನೆ ಸಾಧ್ಯವಾದಷ್ಟು ನಿಯಂತ್ರಿಸಬೇಕು.
  • ಹಾಲು, ಹಣ್ಣು, ತರಕಾರಿ, ಮೊಟ್ಟೆ, ಚಿಕನ್, ಮೀನು, ಬೇಳೆಕಾಳುಗಳು ಸೇರಿ ಪ್ರೋಟಿನ್ ಮತ್ತು ನಾರಿನಾಂಶ ಇರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು. ಶುದ್ಧ ನೀರು ಕುಡಿಯಬೇಕು.
  • ದೇಹಕ್ಕೆ ಶ್ರಮ ನೀಡಿದಷ್ಟೇ ವಿಶ್ರಾಂತಿ ಹಾಗೂ ನಿದ್ರೆಯ ಅಗತ್ಯವಿದೆ. ಈ ಬಗ್ಗೆಯೂ ಗಮನ ಹರಿಸಬೇಕು, ಧ್ಯಾನ, ಯೋಗದ ಮೂಲಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
  • ಸಮತೋಲನ ಆಹಾರ, ಸರಿಯಾದ ಕೆಲಸ ಅಥವಾ ವ್ಯಾಯಾಮ, ವಿಶ್ರಾಂತಿ ಮತ್ತು ನಿದ್ರೆ ಇವುಗಳನ್ನು ಸರಿಯಾಗಿ ಪಾಲಿಸಿದರೆ ಜೀವನಶೈಲಿ ಆಧಾರಿತ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು.

ಸಾಮಾನ್ಯವಾಗಿ ಕಾಡುವ ಕಾಯಿಲೆಗಳು: ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್, ಹೃದಯಾಘಾತ, ಹೃದಯಸ್ತಂಭನ, ಕಿಡ್ನಿ ಸಮಸ್ಯೆ, ನರದೌರ್ಬಲ್ಯ, ಮೂಳೆಸವೆತ, ಪಾರ್ಶ್ವವಾಯು, ಖಿನ್ನತೆ, ಮಾನಸಿಕ ಆಸ್ವಸ್ಥತೆ, ಅಂಗಾಂಗಗಳ ವೈಫಲ್ಯ, ಅಪಘಾತ ಇತ್ಯಾದಿ ಸಮಸ್ಯೆಗಳು ಹೆಚ್ಚುತ್ತಿವೆ. ರಾಸಾಯನಿಕ ಅಂಶಗಳಿಂದ ಬೆಳೆದ ಪದಾರ್ಥಗಳ ಸೇವನೆ, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಬೇಕರಿ ಉತ್ಪನ್ನಗಳು, ಮಾಂಸಾಹಾರ, ಕೊಬ್ಬಿನ ಪದಾರ್ಥಗಳು, ಜಂಕ್ ಫುಡ್ ಸೇವನೆ ನಾನಾ ಆರೋಗ್ಯ ಸಮಸ್ಯೆಗಳಿಗೆ ಕಾರಣ. ಇದಲ್ಲದೆ ಚಟುವಟಿಕೆರಹಿತ ಹಾಗೂ ಒತ್ತಡದ ಜೀವನ, ಅಸಮರ್ಪಕ ಆಹಾರ ಸೇವನೆ, ನಿದ್ರಾಹೀನತೆಯೂ ಈ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣ.

ಸಮಸ್ಯೆ ನಿರ್ಲಕ್ಷಿಸದಿರಿ

| ಡಾ. ವಿದ್ಯಾ ವಿ. ಭಟ್ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕಿ

ಬದಲಾದ ಜೀವನಶೈಲಿಯಿಂದಾಗಿ ಮುಟ್ಟಿನ ತೊಂದರೆ, ಬಂಜೆತನ, ಮೂಳೆಸವೆತ, ಬೊಜ್ಜು ಸೇರಿ ಮಹಿಳೆಯರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಪ್ರಮುಖವಾಗಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಎಂದರೆ ಮಹಿಳೆಯರ ಋತುಚಕ್ರ, ಫಲವತ್ತತೆ, ಹಾಮೋನುಗಳಲ್ಲಿ ವ್ಯತ್ಯಾಸ ಆಗಿದೆ. ಇದು ಮಹಿಳೆಯರ ಆರೋಗ್ಯದ ಮೇಲೆ ದೀರ್ಘಾವಧಿ ಪರಿಣಾಮ ಬೀರಲಿದೆ. ಪಾಲಿಸಿಸ್ ಓವರೀಸ್ (ಬಹುದ್ರವ ಚೀಲಗಳು) ಅಂಡಾಶಯಗಳು ಸಾಮಾನ್ಯ ಅಂಡಾಶಯಗಳಿಗಿಂತ ಸ್ವಲ್ಪ ದೊಡ್ಡದಾಗಿರುತ್ತದೆ ಹಾಗೂ ಕಿರು ಚೀಲಗಳು ಎರಡರಷ್ಟಿರುತ್ತದೆ. ಈ ಹಿಂದೆ ಬೆರಳೆಣಿಕೆಯಷ್ಟು ಮಹಿಳೆಯರಲ್ಲಿ ಕಾಣಿಸುತ್ತಿದ್ದ ಈ ಸಮಸ್ಯೆ ಈಗ ಶೇಕಡ 40-50 ಮಹಿಳೆಯರಲ್ಲಿ ಕಂಡುಬರುತ್ತಿದೆ. ಹೊರಗಿನ ಆಹಾರ ಹಾಗೂ ಅತಿಯಾದ ಜಂಕ್​ಫುಡ್ ಸೇವನೆಯಿಂದಾಗಿ ಒಬೆಸಿಟಿ (ಬೊಜ್ಜು), ಅತಿಯಾತ ತೂಕದಿಂದ ಮಹಿಳೆಯರಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ೆ ಕಾರಣವಾಗಿದೆ. ಬೆಂಗಳೂರಿನಂಥ ನಗರಗಳಲ್ಲಿ ಈ ಸಮಸ್ಯೆ ಹೆಚ್ಚುತ್ತಿದೆ. ಕೋವಿಡ್ ಸಂದರ್ಭದಲ್ಲಿ ಚಟುವಟಿಕೆಗಳ ಕೊರತೆಯಿಂದಾಗಿಯೂ ಮಕ್ಕಳಲ್ಲಿ ಮಾತ್ರವಲ್ಲದೆ ಮಹಿಳೆಯರಲ್ಲಿ ಒಬೆಸಿಟಿ ಹೆಚ್ಚಾಗಿದೆ. ನಿಯಮಿತ ವ್ಯಾಯಾಮ ಇಲ್ಲದೆ, ಚಟುವಟಿಕೆ ರಹಿತ ಜೀವನ ಹಾಗೂ ಆಹಾರಶೈಲಿಯಿಂದಾಗಿ ಮಧುಮೇಹ, ರಕ್ತದ ಒತ್ತಡ, ಹೃದಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದು ಕೇವಲ ಮುಟ್ಟಿನ ಸಮಸ್ಯೆ ಅಷ್ಟೇ ಅಲ್ಲದೆ ಗರ್ಭದಾರಣೆಗೂ ತೊಡಕಾಗಿ ಪರಿಣಮಿಸಿದೆ. ಗರ್ಭಧರಿಸಿದರೂ ಸಹಜ ಹೆರಿಗೆ ಕಡಿಮೆಯಾಗಿ, ಸಿಸೇರಿಯನ್ ಹೆಚ್ಚುತ್ತಿದೆ. ಇವರಲ್ಲಿ ಗರ್ಭಾವಸ್ಥೆಯಲ್ಲಿ ತಾತ್ಕಾಲಿಕವಾಗಿ ಕಾಣಿಸಿಕೊಳ್ಳುವ ಮಧುಮೇಹ ನಂತರದಲ್ಲಿ ಪೂರ್ಣವಾಗಿ ಕಾಡಲಿದೆ.

ಇನ್ನು ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಹೆಣ್ಣುಮಕ್ಕಳು ಬೇಗನೇ ಋತುಮತಿಯಾಗುತ್ತಿದ್ದಾರೆ. ಇದು ಅವರಲ್ಲಿ ಅಸಹಜ ಹಾಗೂ ಅನಿಯಮಿತ ಮುಟ್ಟಿನ ಸಮಸ್ಯೆಗೆ ಕಾರಣವಾಗುತ್ತಿದೆ. ಈ ಹಿಂದೆ 15-16 ವರ್ಷಕ್ಕೆ ಇದ್ದ ಋತುಚಕ್ರ 10 ವರ್ಷಕ್ಕೆ ಸಂಭವಿಸುತ್ತಿದೆ. ಕೆಲವರಲ್ಲಿ ಕಿರಿಯ ವಯಸ್ಸಿಗೆ ಗರ್ಭಕೋಶದ ನಾನಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಇನ್ನೂ ಗಂಭೀರ ಸಮಸ್ಯೆ ಎಂದರೆ ಜೀವನಶೈಲಿ ಬದಲಾವಣೆಯಿಂದ ಮಧುಮೇಹ, ಕಾಪ್ರೊಸ್ ಕ್ಯಾನ್ಸರ್ ಸಿಂಡ್ರೋಮ್ ಬಾಧಿಸುತ್ತಿವೆ. ಕಳೆದ 5 ವರ್ಷಗಳಲ್ಲಿ ಗರ್ಭಗೋಶದ ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ, ಬೊಜ್ಜು ಶೇಕಡ 50 ಹೆಚ್ಚಳವಾಗಿದೆ.

ಇನ್ನು ಹೆಣ್ಣುಮಕ್ಕಳಿಗೆ ಎಂಡೋಮೆಟ್ರಿಕ್ ಡಿಸೀಸ್ (ತೀವ್ರ ಹೊಟ್ಟೆನೋವು) ಪ್ರಾರಂಭವಾದರೆ ನಿರ್ಲಕ್ಷ್ಯ ಮಾಡುವವರೇ ಹೆಚ್ಚು. ಜನರಲ್ ಫಿಜಿಷಿಯನ್ ಬಳಿ ಚಿಕಿತ್ಸೆ ಪಡೆಯುತ್ತಾರೆ. ಸ್ತ್ರೀರೋಗ ತಜ್ಞರ ಬಳಿಗೆ ಹೋಗುವಷ್ಟರಲ್ಲಿ ಗರ್ಭಾಶಯದಲ್ಲಿ ಸಿಸ್ಟ್ ಬೆಳೆದಿರುತ್ತದೆ. ಹಾಗಾಗಿ ಪೋಷಕರು ಮಕ್ಕಳಿಗೆ ಮುಟ್ಟಿನ ಸಂದರ್ಭದಲ್ಲಿ ಹೆಚ್ಚು ನೋವು ಕಾಣಿಸಿಕೊಂಡರೆ ಕೂಡಲೇ ಸ್ತ್ರೀರೋಗ ತಜ್ಞರಲ್ಲಿ ತೋರಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು.

ನವಜಾತ ಮಕ್ಕಳಲ್ಲಿ ಅಧಿಕ ತೂಕ: ಮಹಿಳೆಯರಲ್ಲಿ ಸಹಜ ಗರ್ಭಧಾರಣೆ ಕಡಿಮೆಯಾಗಿದೆ. ಫಲವತ್ತತೆಯ ಕೊರತೆ ಹೆಚ್ಚಾಗಿದೆ. ಹಾಗಾಗಿ ಅಂಥವರಿಗೆ ಪ್ರಾಥಮಿಕ ಹಂತದ ಪರೀಕ್ಷೆ ಮಾಡಿಸಿ ಮೊದಲು ಸಹಜ ಗರ್ಭಧಾರಣೆಗೆ ಸಲಹೆ ನೀಡಲಾಗುತ್ತದೆ. ಅದು ಸಾಧ್ಯವಾಗದಿದ್ದರೆ ಐವಿಯು ನಂತರ ಐವಿಎಫ್ ಸೇರಿದಂತೆ ಇತರ ಕೃತಕ ಗರ್ಭಧಾರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಗರ್ಭಿಣಿಯರು ಸರಿಯಾದ ಆಹಾರಕ್ರಮ ಪಾಲಿಸದಿದ್ದರೆ ಜನಿಸುವ ಮಕ್ಕಳು ಕೂಡ ಅಧಿಕ ತೂಕ ಹೊಂದಿರುತ್ತಾರೆ.

ಮಹಿಳೆಯರು ಜೀವನಕ್ರಮ ಸರಿಯಾಗಿ ನಿರ್ವಹಿಸದಿದ್ದರೆ ಗರ್ಭಾಶಯದಲ್ಲಿ ಫೈಬ್ರಾಯಡ್ಸ್ ಗಡ್ಡೆಗಳು ಕಾಣಿಸಿಕೊಳ್ಳುತ್ತಿವೆ. ಈಗ ಇದು ಸಾಮಾನ್ಯ ಸಮಸ್ಯೆಯಾಗಿದ್ದು, ಶೇಕಡ 50 ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿದೆ. ಅವನ್ನು ತೆಗೆಯುವುದರಿಂದ ಸಮಸ್ಯೆ ಕಡಿಮೆಯಾಗಿ ಗರ್ಭಕೋಶ ಉಳಿಸಬಹುದಾಗಿದೆ. ಕಡಿಮೆ ವಯಸ್ಸಿನಲ್ಲಿ ಗರ್ಭಕೋಶ ತೆಗೆಯುವುದರಿಂದ ಹೃದಯ ಸಮಸ್ಯೆ, ಮೂಳೆ ಸಮಸ್ಯೆ, ಕಾಣಿಸಿಕೊಳ್ಳುತ್ತದೆ. ಹಾಗಾಗಿ ಗರ್ಭಕೋಶದ ಸಮಸ್ಯೆಗೆ ಹಲವಾರು ಪರಿಹಾರಗಳು ಇರುವುದರಿಂದ 50 ವರ್ಷಕ್ಕೆ ಮುಂಚಿತವಾಗಿ ಗರ್ಭಕೋಶ ತೆಗೆಸಬಾರದು. ಗರ್ಭಕೋಶ ಉಳಿಸಿ ಇತರ ಸಮಸ್ಯೆಗಳನ್ನು ನಿಯಂತ್ರಿಸಬಹುದು. ‘ಸೇವ್ ದ ಯುಟ್ರಸ್’ ಅಭಿಯಾನ ಮಾಡಲಾಗುತ್ತಿದೆ.

ಬಾಣಂತಿ ಆರೈಕೆ ಹೇಗಿರಬೇಕು?: ಮಗು ಜನಿಸಿದ ಮೇಲೆ ದೇಹದಲ್ಲಿ ಬಹಳಷ್ಟು ಬದಲಾವಣೆ ಆಗುತ್ತದೆ. ಅಂತಹ ಸಂದರ್ಭದಲ್ಲಿ ಪೌಷ್ಠಿಕ ಆಹಾರ ಹಾಗೂ ಶುದ್ಧ ನೀರು ಸೇವನೆಯ ಅಗತ್ಯವಿರುತ್ತದೆ. ಆದರೆ ಹೆರಿಗೆ ನಂತರ ಹೆಚ್ಚು ನೀರು ಕುಡಿಯಬಾರದು, ಕಾಳುಮೆಣಸು ತಿನ್ನಬೇಕು. ಮೂರು ತಿಂಗಳು ಮಲಗಿಯೇ ಇರಬೇಕು ಎಂದು ಹೇಳುತ್ತಾರೆ. ಆದರೆ ಬಾಣಂತಿಯರಿಗೆ ಪಥ್ಯದ ಅಗತ್ಯವಿಲ್ಲ. ಆ ಸಂದರ್ಭದಲ್ಲಿ ಸರಿಯಾಗಿ ಆಹಾರ ಸೇವಿಸದಿದ್ದರೆ, ನೀರು ಕುಡಿಯದಿದ್ದರೆ, ದೇಹದಲ್ಲಿ ಡೀಹೈಡ್ರೇಷನ್ ಉಂಟಾಗಿ ಮೂತ್ರಕೋಶದ ಸೋಂಕು, ಮಲಬದ್ಧತೆ, ಚರ್ಮದ ಸಮಸ್ಯೆ, ಖಿನ್ನತೆ ಸೇರಿ ನಾನಾ ದೈಹಿಕ, ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net