

| ಅವಿನಾಶ ಮೂಡಂಬಿಕಾನ ಬೆಂಗಳೂರು
ಲಕ್ಷಾಂತರ ರೈತರ ಬದುಕಿಗೆ ಆಧಾರವಾಗಿರುವ ‘ತೆಂಗು’ ನಿತ್ಯ ಜೀವನದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಎಲ್ಲರಿಗೂ ಬೇಕೇಬೇಕು. ದೇವರ ಪೂಜೆಯಿಂದ ಹಿಡಿದು, ಸೌಂದರ್ಯವರ್ಧಕ ತಯಾರಿಕೆವರೆಗೆ ತೆಂಗಿಗೆ ಮಹತ್ವದ ಸ್ಥಾನವಿದೆ. ಅದರಲ್ಲೂ ತೆಂಗಿನ ಕಾಯಿ ಬಳಸದ ಅಡುಗೆಯನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ದಕ್ಷಿಣ ಏಷ್ಯಾ ಮತ್ತು ಮಧ್ಯಪೂರ್ವ ಏಷ್ಯಾಗಳಲ್ಲಿ ಬೆಳೆಯಲಾಗುತ್ತಿದ್ದ ತೆಂಗಿನ ಬೆಳೆ ಈಗ ವಿಶ್ವಾದ್ಯಂತ ಹರಡಿದೆ. ತೆಂಗಿನ ಪ್ರಾಮುಖ್ಯತೆ, ಉಪಯೋಗಗಳ ಬಗ್ಗೆ ಅರಿವು ಮೂಡಿಸಲು 2009ರಿಂದ ಸೆ.2ರಂದು ‘ವಿಶ್ವ ತೆಂಗಿನ ದಿನ’ ಆಚರಿಸಲಾಗುತ್ತಿದೆ.
ರಾಜ್ಯಕ್ಕೆ ಎರಡನೇ ಸ್ಥಾನ: ವಿಶ್ವದಾದ್ಯಂತ 90ಕ್ಕೂ ಅಧಿಕ ದೇಶಗಳಲ್ಲಿ 55 ದಶಲಕ್ಷ ಟನ್ ತೆಂಗು ವಾರ್ಷಿಕವಾಗಿ ಬೆಳೆಯಲಾಗುತ್ತದೆ. ತೆಂಗು ಬೆಳೆಯಲ್ಲಿ ಭಾರತದಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ, ತಮಿಳುನಾಡು 2ನೇ ಸ್ಥಾನದಲ್ಲಿವೆ. ಆಂಧ್ರ, ತೆಲಂಗಾಣ ನಂತರದ ಸ್ಥಾನ ಪಡೆದುಕೊಂಡಿದೆ. ಒಂದು ತೆಂಗಿನ ಮರ ಸರಿಸುಮಾರು 60-70 ವರ್ಷ ಫಲ ನೀಡುತ್ತದೆ. ರಾಜ್ಯದಲ್ಲಿ 6.24 ಲಕ್ಷ ಹೆಕ್ಟೇರ್ನಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ವಾರ್ಷಿಕವಾಗಿ 530 ಕೋಟಿ ಕಾಯಿ ಉತ್ಪಾದನೆಯಾಗುತ್ತದೆ. ತುಮಕೂರು ಜಿಲ್ಲೆಯೊಂದರಲ್ಲೇ 1.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಶೇ.99 ತಿಪಟೂರು ಟಾಲ್ ತಳಿ ಬೆಳೆದರೆ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ವೆಸ್ಟ್ಕೋಸ್ಟ್ ಟಾಲ್ ಬೆಳೆಯುತ್ತಾರೆ. ಇವೆರಡೂ ಹೆಚ್ಚಿನ ಫಲ ಕೊಡುವ ತಳಿಗಳಾಗಿವೆ.
ಅರಬ್ ದೇಶಗಳಿಗೆ ರಫ್ತು
ಅರಬ್ ರಾಷ್ಟ್ರಗಳಿಗೆ ತೆಂಗು ಹೆಚ್ಚಾಗಿ ರಫ್ತಾಗುತ್ತದೆ. ಉಳಿದಂತೆ ಭಾರತೀಯರು ಹೆಚ್ಚು ನೆಲೆಸಿರುವ ವಿದೇಶಗಳಲ್ಲಿ ತೆಂಗಿಗೆ ಹೆಚ್ಚಿನ ಬೇಡಿಕೆಯಿದೆ. ಸೌದಿ ಅರೇಬಿಯಾ, ಕತಾರ್, ದುಬೈ, ಅಬುದಾಬಿ ಸೇರಿ ಇನ್ನಿತರ ರಾಷ್ಟ್ರಗಳಿಗೆ ತೆಂಗು ರಫ್ತಾಗುತ್ತದೆ. ದಕ್ಷಿಣ ಭಾರತದಲ್ಲಿ ತೆಂಗಿನ ಕಾಯಿ ಅಧಿಕವಾಗಿ ಬಳಸಿದರೆ ಉತ್ತರ ಭಾರತದ ಮಂದಿ ಕೊಬ್ಬರಿಯನ್ನು ಹೆಚ್ಚು ಬಳಸುತ್ತಾರೆ.
ಉಪಯೋಗಗಳು
# ಅಡುಗೆಗೆ ಕಾಯಿ, ಎಣ್ಣೆಗೆ ಬಳಕೆ.
# ತೆಂಗಿನ ಗರಿಯಿಂದ ವಿವಿಧ ಕರಕುಶಲ ಸಾಮಗ್ರಿ.
# ಎಳನೀರು ದೇಹಕ್ಕೆ ಪೌಷ್ಟಿಕಾಂಶ ಒದಗಿಸುತ್ತದೆ.
# ತೆಂಗಿನ ಎಣ್ಣೆ ಕೇಶರಾಶಿಗೆ ಸಹಕಾರಿ.
# ತೆಂಗಿನ ಚಿಪ್ಪಿನಿಂದ ಸೌಟು, ಶೆಲ್ ತಯಾರಿ, ಹಲವು ಅಲಂಕಾರಿಕ ವಸ್ತು ತಯಾರಿ.
# ತೆಂಗಿನ ನಾರಿನಿಂದ ತಯಾರಿಸಿದ ದಾರ ಬಹಳ ಗಟ್ಟಿಯಾಗಿದ್ದು, ಹಲವು ಕಾರ್ಯಗಳಿಗೆ ಬಳಕೆ.
ಬೆಳೆಗಾರರಿಗೆ ಸಬ್ಸಿಡಿ
ತೆಂಗು ಅಭಿವೃದ್ಧಿ ಮಂಡಳಿಯು ರೈತರಿಗೆ 4 ಹೆಕ್ಟೇರ್ವರೆಗೆ ಪ್ರೋತ್ಸಾಹಧನ ನೀಡುತ್ತಿದ್ದು, ಪ್ರತಿ ಹೆಕ್ಟೇರ್ಗೆ 6500 ರೂ. ನೀಡುತ್ತಿದೆ. ರಾಜ್ಯ ತೋಟಗಾರಿಕಾ ಇಲಾಖೆಯಿಂದ ಸಣ್ಣ, ಅತಿ ಸಣ್ಣ, ಪ.ಜಾ, ಪ.ಪಂ.ದ ತೆಂಗು ಬೆಳೆಗಾರರು 1 ಹೆಕ್ಟೇರ್ಗೆ 75 ಸಾವಿರ ರೂ. ಸಬ್ಸಿಡಿ ಪಡೆಯಬಹುದು. ರೈತರು ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಗಳಲ್ಲಿರುವ ರೈತ ಸಂಪರ್ಕ ಕೇಂದ್ರವನ್ನು ಸಂರ್ಪಸಬಹುದು.
ತೆಂಗಿನ ರೋಗಗಳಿಗೆ ಪರಿಹಾರ: ಇತ್ತೀಚಿನ ದಿನಗಳಲ್ಲಿ ತೆಂಗನ್ನು ಕಾಡುತ್ತಿರುವ ರೋಗಗಳು ರೈತರನ್ನು ಕಂಗೆಡಿಸಿವೆ. ಪ್ರಮುಖವಾಗಿ ತೆಂಗು ಬೆಳೆಗೆ ಕಾಂಡ ಸೋರುವ ರೋಗ, ಕಪು್ಪತಲೆ ಹುಳ, ಕಾಂಡ ಕೊರೆಯುವ ಹುಳಗಳ ಕಾಟ ಭಾದಿಸುತ್ತವೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ರೋಗಗಳನ್ನು ತಡೆಗಟ್ಟಲು ತೋಟಗಾರಿಕಾ ಇಲಾಖೆಯು ಹಲವಾರು ಔಷಧಗಳನ್ನು ಸಂಶೋಧಿಸಿ ಉಚಿತವಾಗಿ ನೀಡುತ್ತಿದೆ.
ಆದಾಯ ದ್ವಿಗುಣ ಹೇಗೆ?: ತೆಂಗಿನ ಮರಗಳ ನಡುವೆ ಕೋಕೋ, ಕಾಳು ಮೆಣಸನ್ನು ಉಪ ಬೆಳೆಯಾಗಿ ಬೆಳೆದರೆ ಉತ್ತಮ ಲಾಭಾಂಶ ಪಡೆಯಬಹುದಾಗಿದೆ. ಪ್ರತಿ ವರ್ಷ 1,200 ಕೋಟಿ ರೂ. ಮೌಲ್ಯದ ಕೋಕೋ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. 1 ಎಕರೆ ತೆಂಗಿನ ತೋಟದ ಮಧ್ಯೆ 650 ರಿಂದ 900 ಕೆ.ಜಿ. ಕೋಕೋ ಬೆಳೆ ಬೆಳೆಯ ಬಹುದಾಗಿದೆ. ಜತೆಗೆ 4 ರಿಂದ 5 ಕೆ.ಜಿ. ಕಾಳು ಮೆಣಸು ಬೆಳೆಯಬಹುದು. ಇದರಿಂದ ತೆಂಗಿನ ಫಲವತ್ತತೆ ಹೆಚ್ಚುತ್ತದೆ ಎಂಬುದು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಬಿ.ಎನ್.ಪ್ರಸಾದ್ ಅಭಿಪ್ರಾಯ.