ಕಾರ್ಮಿಕರ ಹಿತಚಿಂತಕ ಡಿ.ಕೆ.ಸದಾಶಿವ

nudinamana programme
ಶಿವಮೊಗ್ಗದಲ್ಲಿ ಬಿಎಂಎಸ್ ಉಪಾಧ್ಯಕ್ಷ ಡಿ.ಕೆ.ಸದಾಶಿವ ಅವರ ಭಾವಚಿತ್ರಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುಷ್ಪನಮನ ಸಲ್ಲಿಸಿದರು. ಬಿ.ವೈ.ರಾಘವೇಂದ್ರ, ವಿಶ್ವನಾಥ್, ಎಸ್.ದತ್ತಾತ್ರಿ, ಪ್ರದೀಪ್ ಹೊನ್ನಪ್ಪ, ಸುರೇಖಾ ಪಾಲಾಕ್ಷಪ್ಪ, ಕುಪೇಂದ್ರ ಆಯನೂರು, ಪೆರುಮಾಳ್, ಪದ್ಮನಾಭ ಭಟ್ ಇದ್ದರು.
Published on

ಶಿವಮೊಗ್ಗ: ಬಿಎಂಎಸ್(ಭಾರತೀಯ ಮಜ್ದೂರ್ ಸಂಘ) ಉಪಾಧ್ಯಕ್ಷ ಡಿ.ಕೆ.ಸದಾಶಿವ ಅವರು ಸಿದ್ಧಾಂತ ಮತ್ತು ಧ್ಯೇಯವನ್ನೇ ಗುರಿಯಾಗಿಸಿಕೊಂಡು ತಮ್ಮ ಇಡೀ ಜೀವನವನ್ನೇ ಕಾರ್ಮಿಕರಿಗಾಗಿ ಮೀಸಲಿಟ್ಟಿದ್ದರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದರು.

ನಗರದ ರೋಟರಿ ಬ್ಲಡ್‌ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದಿಂದ ಬಿಎಂಎಸ್ ಉಪಾಧ್ಯಕ್ಷ ಡಿ.ಕೆ.ಸದಾಶಿವ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದ ಅವರು, ಅವಿವಾಹಿತರಾಗಿದ್ದ ಅವರು, ಇಡೀ ಜೀವನವನ್ನೇ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟಿದ್ದರು ಎಂದರು.

ಸದಾಶಿವ ಅವರು ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿ ನಾಟಕ, ಸಾಹಿತ್ಯದ ಗೀಳು ಬೆಳೆಸಿಕೊಂಡು ಸಕ್ಕರೆ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿ ಬಿಎಂಎಸ್ ಮೂಲಕ ಕಾರ್ಮಿಕರ ಏಳಿಗೆಗೆ ಶ್ರಮಿಸಿದ್ದರು. ತುರ್ತು ಪರಿಸ್ಥಿತಿ ಸಂದರ್ಭ 18 ತಿಂಗಳು ಜೈಲುವಾಸ ಅನುಭವಿಸಿದ್ದರು. ಕಾರ್ಮಿಕರಿಗೆ ಸೌಲಭ್ಯ ಕೊಡಿಸುವ ತುಡಿತ ಅವರಲ್ಲಿ ನಿರಂತರವಾಗಿತ್ತು ಎಂದು ಹೇಳಿದರು.

ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ ಮಾತನಾಡಿ, ಬಿಎಂಎಸ್ ದೇಶದ ದೃಷ್ಟಿಕೋನ ಇಟ್ಟುಕೊಂಡು ಸ್ಥಾಪನೆ ಮಾಡಲಾಗಿತ್ತು. ಉದ್ದಿಮೆ ಅಥವಾ ಕಾರ್ಖಾನೆಗಳಿಂದ ಅನ್ಯಾಯಕ್ಕೊಳಗಾದ ಕಾರ್ಮಿಕರಿಗೆ ಸಂಘದ ಮೂಲಕ ನ್ಯಾಯಕೊಡಿಸುವ ಕೆಲಸ ಮಾಡಿದ್ದರು. ರಾಜಕೀಯದಲ್ಲಿ ಕೆಲಸ ಮಾಡುವುದು ಸುಲಭ. ಆದರೆ ಕಾರ್ಮಿಕ ಸಂಘಟನೆಯಲ್ಲಿ ಕೆಲಸ ಮಾಡುವುದು ಕಷ್ಟ. ಡಿ.ಕೆ.ಸದಾಶಿವ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಕಾರ್ಮಿಕ ನಾಯಕನಿಗೆ ಎಲ್ಲರನ್ನೂ ನಿಭಾಯಿಸುವ ತಾಳ್ಮೆ, ಸಾಮರ್ಥ್ಯ ಇರಬೇಕಾಗುತ್ತದೆ. ಅಂತಹ ವ್ಯಕ್ತಿತ್ವ ಅವರಲ್ಲಿತ್ತು ಎಂದು ಸ್ಮರಿಸಿದರು.

ನಿವೃತ್ತ ಅಧ್ಯಾಪಕ ಎ.ಜೆ.ರಾಮಚಂದ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ದರಾಮಣ್ಣ, ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಉದ್ಯಮಿ ಹರ್ಷ ಕಾಮತ್, ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಪ್ರದೀಪ್ ಹೊನ್ನಪ್ಪ, ರಾಜ್ಯ ಕಾರ್ಯದರ್ಶಿ ವಿಶ್ವನಾಥ್, ಜಿಲ್ಲಾಧ್ಯಕ್ಷೆ ಸುರೇಖಾ ಪಾಲಾಕ್ಷಪ್ಪ, ಪ್ರಮುಖರಾದ ಕುಪ್ಪೆಂದ್ರ ಆಯನೂರು, ಪೆರುಮಾಳ್, ಪದ್ಮನಾಭ ಭಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net