ವಿದ್ಯುತ್ ಪ್ರವಹಿಸಿ ಕಾರ್ಮಿಕ ಸಾವು

current shock
Published on


ಪಡುಬಿದ್ರಿ: ಯಾವುದೇ ಮುಂಜಾಗ್ರತೆ ವಹಿಸದೇ ಕರೆಂಟ್ ಅರ್ಥ್ ಹೊಂಡ ತೋಡುತ್ತಿದ್ದ ಕಾರ್ಮಿಕರು ವಿದ್ಯುತ್‌ಶಾಕ್‌ಗೆ ಒಳಗಾದ ಪರಿಣಾಮ ಹಾವೇರಿ ಐಹೊಳೆ ಗ್ರಾಮದ ನಿಂಗರಾಜು(19) ಎಂಬುವರು ಮೃತಪಟ್ಟ ಘಟನೆ ಇಲ್ಲಿನ ಪೆಟ್ರೋಲ್ ಬಂಕ್ ಆವರಣದಲ್ಲಿ ಗುರುವಾರ ನಡೆದಿದೆ

ಪಡುಬಿದ್ರಿ ಪೇಟೆಯಲ್ಲಿ ನಾಲ್ವರು ಕಾರ್ಮಿಕರನ್ನು ಗೊತ್ತುಪಡಿಸಿ ಪೆಟ್ರೋಲ್ ಬಂಕ್‌ನಲ್ಲಿ ಗುಂಡಿ ತೋಡುವ ಕೆಲಸಕ್ಕೆ ನೇಮಿಸಲಾಗಿತ್ತು. ಹೊಂಡ ತೋಡುವಲ್ಲಿ ಭೂಮಿಯ ಅಡಿ ವಿದ್ಯುತ್ ಕೇಬಲ್ ಅಳವಡಿಸಿರುವ ಬಗ್ಗೆ ಕಾರ್ಮಿಕರಿಗೆ ಬಂಕ್ ಮಾಲೀಕ ಹಾಗೂ ಗುತ್ತಿಗೆದಾರ ಮೊದಲೇ ತಿಳಿಸಿರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಕೆಲಸದ ವೇಳೆ ಧರಿಸಲು ಕೈಗವಚವನ್ನೂ ನೀಡಿರಲಿಲ್ಲ. ಕಾರ್ಮಿಕರು ಕಬ್ಬಿಣದ ಸೂಲಂಗಿ ಮೂಲಕ ಹೋಡ ತೋಡುತ್ತಿದ್ದಾಗ ಅದು ಕೇಬಲ್‌ಗೆ ತಾಗಿ ಸೂಲಂಗಿಯಲ್ಲಿ ಏಕಾಏಕಿ ವಿದ್ಯುತ್ ಪ್ರವಹಿಸಿದೆ.

ಈ ಸಂದರ್ಭ ಸೂಲಂಗಿ ಹಿಡಿದಿದ್ದ ನಿಂಗರಾಜು ವಿದ್ಯುತ್ ಶಾಕ್‌ನಿಂದ ಅಸ್ವಸ್ಥಗೊಂಡಿದ್ದಾನೆ. ವಿದ್ಯುತ್ ಪ್ರವಹಿಸಿದ ಬಗ್ಗೆ ಇತರ ಕಾರ್ಮಿಕರು ಕೂಗಿಕೊಂಡ ಬಳಿಕ ಪೆಟ್ರೋಲ್ ಬಂಕ್‌ನ ಕೆಲಸದಾಳು ಮೈನ್ ಸ್ವಿಚ್ ಆಫ್ ಮಾಡಿದ್ದಾನೆ. ತಕ್ಷಣವೇ ನಿಂಗರಾಜುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅಷ್ಟರಲ್ಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವಿದ್ಯುತ್ ಕೇಬಲ್ ಅಳವಡಿಕೆ ಬಗ್ಗೆ ಮಾಹಿತಿ ನೀಡದ ಹಾಗೂ ಮುಂಜಾಗ್ರತೆ ವಹಿಸದ ಬಂಕ್ ಮಾಲೀಕ ಸುರೇಶ್ ಶೆಟ್ಟಿ ಹಾಗೂ ವಿದ್ಯುತ್ ಗುತ್ತಿಗೆದಾರ ಶಿವರಾಮ ಶೆಟ್ಟಿ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net