

ಸಾಗರ: ಸಮಸ್ಯೆಗಳಿಗೆ ಪರಿಹಾರ ಕೇಳಿಕೊಂಡು ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ವಿನಾಕಾರಣ ಸತಾಯಿಸಬೇಡಿ. ಒಂದು ವೇಳೆ ದೂರು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ ನೀಡಿದರು.
ಸಾಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಕಚೇರಿಯಲ್ಲಿ ಆಡಳಿತ ಯಂತ್ರ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಪದೇಪದೆ ದೂರುತ್ತಿದ್ದಾರೆ. ಈ ಬಗ್ಗೆ ತಹಸೀಲ್ದಾರರು ನಿಗಾ ವಹಿಸಬೇಕು ಸೂಚಿಸಿದರು.
ರಸ್ತೆಯ ಇಕ್ಕೆಲಗಳಲ್ಲಿ ಮರಗಳನ್ನು ಬೀಳುವಂತಿದ್ದರೆ ತಕ್ಷಣ ತೆರವು ಮಾಡಲು ಅರಣ್ಯ ಇಲಾಖೆಗೆ ಮೆಸ್ಕಾಂ ಅಧಿಕಾರಿಗಳು ಅರ್ಜಿ ಕೊಡಬೇಕು. ಭದ್ರಾ ಕಂಪನಿಯ ವಿದ್ಯುತ್ ಕಂಬಗಳು ಕಳಪೆ ಎನ್ನುವ ದೂರು ಇರುವ ಹಿನ್ನೆಲೆಯಲ್ಲಿ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಸಂಬಂಧಿಸಿದ ಸಚಿವರ ಗಮನಕ್ಕೆ ತರಲಾಗುವುದು. ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸಿ. ಜನರು ಫೋನ್ ಮಾಡುತ್ತಾರೆ ಎಂದು ನೀವು ಸ್ವಿಚ್ ಆಫ್ ಮಾಡಿಕೊಳ್ಳುತ್ತೀರಿ. ನಾನು ಹಾಗೆ ಮಾಡುವಂತಿಲ್ಲ. ಜನರ ದೂರುಗಳಿಗೆ ನಾನು ಉತ್ತರ ಕೊಡುವ ಸ್ಥಿತಿ ನಿರ್ಮಾಣವಾಗಿದೆ. ಶರಾವತಿ ಹಿನ್ನೀರು ಪ್ರದೇಶದಲ್ಲಿನ ವಿದ್ಯುತ್ ಸಮಸ್ಯೆಯನ್ನು ಮೊದಲು ಸರಿಪಡಿಸಿ ಎಂದರು.
ಕಾಡನ್ನು ವಿಪರೀತವಾಗಿ ಕಡಿದಿರುವುದರಿಂದ ಕಾಡುಪ್ರಾಣಿಗಳು ನಾಡಿಗೆ ಬರುತ್ತಿವೆ. ಮನುಷ್ಯ ಮತ್ತು ಕಾಡುಪ್ರಾಣಿಗಳ ನಡುವೆ ಸಂಘರ್ಷ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ಇನ್ನುಮುಂದೆ ಕಾಡು ಕಡಿದು ಒತ್ತುವರಿ ಮಾಡಲು ಯಾವ ಕಾರಣಕ್ಕೂ ಅವಕಾಶ ನೀಡಬಾರದು. ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ಎಸಿ ವೀರೇಶ್‌ಕುಮಾರ್, ತಹಸೀಲ್ದಾರ್ ಚಂದ್ರಶೇಖರ ನಾಯ್ಕ, ತಾಪಂ ಇಒ ಶಿವಪ್ರಕಾಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ಕುಮಾರ್, ಡಿವೈಎಸ್‌ಪಿ ಗೋಪಾಲಕೃಷ್ಣ ನಾಯ್ಕ್, ತಾಪಂ ಆಡಳಿತಾಧಿಕಾರಿ ಸುಜಾತಾ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ವಿಶೇಷ ಕರ್ತವ್ಯಾಧಿಕಾರಿ ಟಿ.ಪಿ ರಮೇಶ್ ಇತರರಿದ್ದರು.
ಗೋರಕ್ಷಣೆ ಗಮನಹರಿಸಿ: ಬಿಡಾಡಿ ದನಗಳ ಗೋಶಾಲೆಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ನಾಡಕಲಸಿ ಗ್ರಾಮದಲ್ಲಿ ಗುರುತಿಸಿದ್ದ ಜಾಗವನ್ನು ಪರಿಶೀಲಿಸಿ, ಸುತ್ತಲೂ ಫೆನ್ಸಿಂಗ್ ಹಾಕಿ ಗೋರಕ್ಷಣೆಗೆ ಗಮನ ಹರಿಸುತ್ತೇವೆ. ಇಲ್ಲಿಯೂ ಜಾಗ ಒತ್ತುವರಿ ಆದ ಬಗ್ಗೆ ದೂರುಗಳಿವೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಕಂದಾಯ ಇಲಾಖೆಗೆ ಸೂಚಿಸಿದ್ದೇನೆ ಎಂದು ಬೇಳೂರು ಹೇಳಿದರು. ಇತ್ತೀಚೆಗೆ ಗೋ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸ್ ಇಲಾಖೆ ವ್ಯವಸ್ಥಿತ ಕ್ರಮ ಕೈಗೊಳ್ಳಬೇಕು. ಹಾಗೆಯೇ ಗೋರಕ್ಷಣೆ ಸೇರಿ ಮತ್ತಿತರ ವಿಷಯಗಳಲ್ಲಿ ನೈತಿಕ ಪೊಲೀಸ್‌ಗಿರಿ ಮಾಡುವುದನ್ನು ಸಹಿಸುವುದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸೂಚಿಸಿದರು.