ಕಾಮಗಾರಿ ಆರಂಭಕ್ಕಿಲ್ಲ ಆಸಕ್ತಿ, ಕಾರ್ಯಾದೇಶ ನೀಡಿದರೂ ಅಭಿವೃದ್ಧಿ ಕಾರ್ಯಗಳಿಗೆ ತಡೆ

work problem nelamangala
Published on

ಜಿ.ಕೆ.ಸುಗ್ಗರಾಜು ನೆಲಮಂಗಲ
ನಗರಸಭೆ ವ್ಯಾಪ್ತಿಯಲ್ಲಿ ಆರಂಭವಾಗಬೇಕಿದ್ದ ಕೋಟ್ಯಂತರ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿದ್ದು, ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆಯ ಹಂತ-4ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 16 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕ್ರಿಯಾ ಯೋಜನೆ ರೂಪಿಸಿ, ಸುಮಾರು 13 ಕೋಟಿ ರೂ. ಅನುದಾನಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು, 3 ತಿಂಗಳ ಹಿಂದೆಯೇ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಆದರೆ, ಕೆಲ ರಾಜಕೀಯ ಕಾರಣಗಳಿಂದ ಕಾಮಗಾರಿಗಳಿಗೆ ಚಾಲನೆ ದೊರೆತಿಲ್ಲ. ಹಾಗೆಯೇ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಕೆಲವೆಡೆ ಕಾಮಗಾರಿಗಳನ್ನು ತಡೆಹಿಡಿಯಲಾಗಿತ್ತು. ಆದರೆ ಚುನಾವಣೆ ಮುಗಿದರೂ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಈ ಹಿಂದೆ ಇದ್ದ ಪುರಸಭೆ ಪ್ರದೇಶ ಹಾಗೂ ನಗರಸಭೆಗೆ ವಿಲೀನಗೊಂಡಿದ್ದ ಗ್ರಾಪಂ ಪ್ರದೇಶದ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಮತ್ತು ಇತರ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ರೂಪಿಸಿದ್ದ ಕಾಮಗಾರಿಗಳಿಗೆ ಕಾಂಗ್ರೆಸ್ ಸರ್ಕಾರ ತಡೆ ಮಾಡಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆಯೇ ದೊರೆಯದಂತಾಗಿದೆ.
ನಗರಸಭೆ ವ್ಯಾಪ್ತಿಯ ಪೇಟೆ ಬೀದಿ, ಮುಖ್ಯರಸ್ತೆಯಿಂದ ವಾಜರಹಳ್ಳಿಯ ಸಂಪರ್ಕ ರಸ್ತೆ, ಭಿನ್ನಮಂಗಲದ ಮುಕ್ತನಾಥೇಶ್ವರ ದೇವಾಲಯ ರಸ್ತೆ ಡಾಂಬರೀಕರಣ, ಹಲವೆಡೆ ಚರಂಡಿ ನಿರ್ಮಾಣದಂತಹ ಕಾಮಗಾರಿಗಳು ಆರಂಭಗೊಂಡಿಲ್ಲ. ಪರಿಣಾಮ ವಾಹನ ಸವಾರರು ಗುಂಡಿಗಳಿರುವ ರಸ್ತೆಯಲ್ಲೇ ದಿನನಿತ್ಯ ಸಂಚರಿಸುವಂತಾಗಿದೆ.

ಶಾಸಕರಿಂದ ವಿಳಂಬ ನೂತನ ಶಾಸಕ ಎನ್.ಶ್ರೀನಿವಾಸಯ್ಯ ಕಾಮಗಾರಿಗಳ ಆರಂಭಕ್ಕೆ ದಿನ ನಿಗದಿ ಮಾಡದಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮಳೆಗಾಲ ಆರಂಭವಾಗಿದೆ. ನಗರದ ಕೆಲ ರಸ್ತೆಗಳಲ್ಲಿನ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಳ್ಳುತ್ತಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ದ್ವಿಚಕ್ರವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.


ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರಸಭೆ ವ್ಯಾಪ್ತಿಯ ಕಾಮಗಾರಿಗಳ ವಿಳಂಬ ಹಾಗೂ ಅದರಿಂದ ಉದ್ಭವಿಸಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಾಹಕ ಅಭಿಯಂತರಿಗೆ ಮನವರಿಕೆ ಮಾಡಲಾಗಿದ್ದು, ಸಂಬಂಧಪಟ್ಟ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡುವಂತೆ ಮನವಿ ಮಾಡಲಾಗಿದೆ. ರಾಜಶೇಖರ್, ಪೌರಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net