

ಕೋಲಾರ: ನಾವು ಅಧಿಕಾರಿಗಳ ತಂಟೆಗೆ ಬಂದಿಲ್ಲ, ಶ್ರದ್ಧೆಯಿಂದ ಕೆಲಸ ಮಾಡಿ, ಇಲ್ಲವಾದಲ್ಲಿ 24 ಗಂಟೆಯೊಳಗೆ ಎತ್ತಂಗಡಿ ಮಾಡುವುದು ಗೊತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಎಚ್ಚರಿಸಿದರು.
ಜಿಪಂ ಸಭಾಂಗಣದಲ್ಲಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಬುಧವಾರ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ನಿರ್ವಿುತಿ ಕೇಂದ್ರದ ಅಧಿಕಾರಿ ನಾರಾಯಣಗೌಡ ವಿರುದ್ಧ ಸದಸ್ಯರ ಆರೋಪಕ್ಕೆ ಧ್ವನಿಗೂಡಿಸಿದ ಸಚಿವ ನಾಗೇಶ್, ನಾರಾಯಣಗೌಡ ಏನೂ ಕೆಲಸ ಮಾಡಲ್ಲ. ಆದಷ್ಟು ಬೇಗ ಆ ಜಾಗಕ್ಕೆ ಒಳ್ಳೆಯ ಅಧಿಕಾರಿ ಹಾಕೋಣ ಎಂದರು.
ಅಧಿಕಾರಿಗಳು ಶ್ರದ್ಧೆಯಿಂದ ಸಾರ್ವಜನಿಕರ ಕೆಲಸ ಮಾಡಬೇಕು. ನಾನು ಯಾರ ಮೇಲೂ ಒತ್ತಡ ತಂದಿಲ್ಲ. ಕೆಲಸ ಮಾಡದ ಕೆಲವರನ್ನು ಕಳುಹಿಸಿಕೊಟ್ಟಿದ್ದೇನೆ. ನಿಮಗೆ ಗೊತ್ತಾಗಿಲ್ಲ ಅಷ್ಟೇ ಎಂದು ಖಡಕ್ ವಾರ್ನಿಂಗ್ ನೀಡಿದರು.
ಪಿಡಿಒ ವಿರುದ್ಧ ಕಿಡಿ: ಗ್ರಾಪಂ ಪಿಡಿಒಗಳು ಸಂಘ ರಚಿಸಿಕೊಂಡು ದುಂಡಾವರ್ತನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕಚೇರಿ ಕೆಲಸಕ್ಕಿಂತ ಹೊರಗಿನ ಕೆಲಸ ಹೆಚ್ಚು ಮಾಡುತ್ತಿರುವ ಬಗ್ಗೆ ಕ್ರಮವಹಿಸುವಂತೆ ಜಿಪಂ ಸಿಇಒಗೆ ಸೂಚಿಸಿದರು.
ಪಿಡಿಒಗಳು ವರ್ಗಾವಣೆ ಇನ್ನಿತರ ವಿಚಾರದಲ್ಲಿ ಗುಂಪು ಕಟ್ಟಿಕೊಂಡು ತಾಪಂ ಇಒ ಮೇಲೆ ಒತ್ತಡ ಹೇರುತ್ತಾರೆ, ಜಿಪಂ ಕಚೇರಿಯಲ್ಲೇ ಓಡಾಡುತ್ತಿರುತ್ತಾರೆ. ಬೇಡಿಕೆಗಳ ಈಡೇರಿಕೆಗಾಗಿ ಹೋರಾಡಲಿ, ಪಿಡಿಒಗಳ ಸಂಘಕ್ಕೆ ಮಾನ್ಯತೆ ಇದೆಯೇ ಎಂದು ಸದಸ್ಯರಾದ ಬಿ.ವಿ.ಮಹೇಶ್, ಅರವಿಂದ್ ಇತರರು ಪ್ರಶ್ನಿಸಿದರು. ಇದ್ಕಕೆ ಪ್ರತಿಕ್ರಿಯಿಸಿದ ಸಿಇಒ ಎಂ.ಆರ್.ರವಿಕುಮಾರ್, ಪಿಡಿಒಗಳ ಸಂಘಕ್ಕೆ ಸರ್ಕಾರದ ಮಾನ್ಯತೆ ಇಲ್ಲ. ನನ್ನ ಕಚೇರಿಗೆ ಪಿಡಿಒಗಳು ಬಂದಿಲ್ಲ, ಇತರ ಶಾಖೆಯಲ್ಲಿ ಸಭೆ ನಡೆಸಿದ್ದು ಗಮನಕ್ಕೆ ಬಂದಿದೆ. ತಾಪಂ ಇಒಗಳ ಮೇಲೆ ದುಂಡಾವರ್ತನೆ ಬಗ್ಗೆ ದೂರು ಬಂದಿದ್ದು, ಕ್ರಮ ವಹಿಸುವುದಾಗಿ ನುಡಿದರು.
ಗ್ರಾಪಂಗಳಲ್ಲಿ ನಡೆದಿರುವ ಅವ್ಯವಹಾರಗಳ ಸಂಬಂಧ ಲೋಕಾಯುಕ್ತ, ಎಸಿಬಿಯಿಂದ ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿದ್ದಾರೆ. ಅಕ್ರಮಗಳ ಪರಿಶೀಲನೆಗೆ ರಚಿಸಿರುವ ತಂಡದ ವರದಿ ಆಧಾರದಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವುದಾಗಿ ತಿಳಿಸಿದರು.
ತಂಡದಿಂದ ಪರಿಶೀಲನೆ: ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ಗಳಲ್ಲಿ ಮಳೆ ಕೊಯ್ಲು ಅಳವಡಿಕೆ ಕಳಪೆ ಕಾಮಗಾರಿ ಪರಿಶೀಲನೆಗೆ ನಿಯೋಜಿಸಿದ್ದ ತಂಡದ ಜತೆ ಕೆಲವೆಡೆ ಸದಸ್ಯರು ಬಾರದಿರುವ ಬಗ್ಗೆ ಜಂಟಿ ನಿರ್ದೇಶಕ ಬಾಲಾಜಿ ದೂರಿದಾಗ ಸಭೆಗೆ ತಪ್ಪು ಮಾಹಿತಿ ನೀಡಬೇಡಿ ಎಂದು ಸದಸ್ಯ ಅರವಿಂದ್ ತಾಕೀತು ಮಾಡಿದರು. ಅಂಬೇಡ್ಕರ್ ಭವನ ನಿರ್ಮಾಣ ಗುತ್ತಿಗೆಯನ್ನು ಪಿಆರ್ಇಡಿಯಿಂದ ನಿರ್ವಿುತಿ ಕೇಂದ್ರಕ್ಕೆ ವಹಿಸಿದ್ದಕ್ಕೆ ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ ಆಕ್ಷೇಪಿಸಿದರು.
ಮಳೆ ಕೊಯ್ಲು ಕಳಪೆ ಕಾಮಗಾರಿ ಸಂಬಂಧ ನ.26ರಂದು 6 ತಾಲೂಕುಗಳಲ್ಲಿ ಏಕಕಾಲಕ್ಕೆ ಜಿಪಂ ಸದಸ್ಯರು, ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಸುವುದು. ಭವನಗಳ ಕಳಪೆ ಕಾಮಗಾರಿ ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಅಧಿಕಾರಿಗಳಿಂದ ಜಂಟಿ ತನಿಖೆ ಮಾಡಿಸುವುದಾಗಿ ಸಿಇಒ ರವಿಕುಮಾರ್ ತಿಳಿಸಿದರು.
ಸರ್ಕಾರಿ ಜಾಗದಲ್ಲಿನ ನೀಲಗಿರಿ ಮರ ತೆರವಿಗೆ ಶಾಸಕ ಶ್ರೀನಿವಾಸಗೌಡ ಆಗ್ರಹಿಸಿದರೆ, ರೈತರ ಜಮೀನಿನಲ್ಲಿರುವ ನೀಲಗಿರಿಯನ್ನು ಬಲವಂತದಿಂದ ತೆರವುಗೊಳಿಸಲು ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಎಮ್ಮೆಲ್ಸಿ ಇಂಚರ ಗೋವಿಂದರಾಜು ಹೇಳಿದರು.
ರಿಪೋರ್ಟ್ ಕಾರ್ಡ್ ಕೊಡಿ: ಜಿಪಂ ವ್ಯಾಪ್ತಿಯಲ್ಲಿ ಬರುವ ಇಲಾಖೆಗಳ ಮೂಲಕ ಕೈಗೊಳ್ಳುವ ಅಭಿವೃದ್ಧಿ ಬಗ್ಗೆ ಪ್ರತಿ ತಿಂಗಳು ರಿಪೋರ್ಟ್ ಕಾರ್ಡ್ ನೀಡುವಂತೆ ಸಂಸದ ಎಸ್.ಮುನಿಸ್ವಾಮಿ ಸೂಚಿಸಿದರು.
ಪ್ರತಿ ಸಭೆಯಲ್ಲೂ ಹಿಂದಿನ ವಿಷಯಗಳೇ ಚರ್ಚೆಯಾಗುತ್ತಿದೆ, ಮುಂದಕ್ಕೆ ಹೋಗುತ್ತಿಲ್ಲ, ಜಿಡ್ಡುಗಟ್ಟಿದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಆಗುತ್ತಿಲ್ಲ. ಕೆಲಸ ತೆಗೆಸುವಲ್ಲಿ ನಾವೂ ವಿಫಲರಾಗಿದ್ದೇವೆ ಎಂದು ನುಡಿದರು.
ಅಧಿಕಾರಿಗಳಿಗೆ ಮಾಸಿಕ ಗುರಿ ನಿಗದಿ ಮಾಡಿ, ಫಲಾನುಭವಿಗಳ ಆಯ್ಕೆ ಜಿಪಂ ಸದಸ್ಯರ ಗಮನಕ್ಕೆ ತನ್ನಿ, ಸೌಲಭ್ಯ ವಿತರಣೆ ಎಲ್ಲ ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಯಲಿ ಎಂದ ಅವರು ಪ್ರತಿ ತಿಂಗಳು ರಿಪೋರ್ಟ್ ಕಾರ್ಡ್ ನೀಡುವಂತೆ ಸಿಇಒಗೆ ಸೂಚಿಸಿದರು.
ಜಿಪಂ ಉಪಾಧ್ಯಕ್ಷೆ ಯಶೋಧಾ ಕೃಷ್ಣಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್ಕುಮಾರ್ ಇದ್ದರು.